ಕಣಿಪುರ ಸುದ್ದಿಜಾಲ
- ಮಂಗಳೂರು -ಕಾಸರಗೋಡು ನಡುವೆ ಪ್ರಯಾಣಿಕರ ದಟ್ಟಣೆ ಇರುವ ಬೆಳಗ್ಗೆ ಮತ್ತು ಸಂಜೆಯ ಹೊತ್ತಲ್ಲಿ ಹೆಚ್ಚುವರಿ ನಿಯಮಿತ ನಿಲುಗಡೆಯ ಬಸ್ ಬೇಕೇ ಹೊರತು “ಅಶ್ವಮೇಧ” ವೇ ಬೇಕೆಂಬ ಕಡ್ಡಾಯವೇನಿಲ್ಲ. ಇಷ್ಟಕ್ಕೂ ಈ ಕುರಿತು ಎರಡು ವರ್ಷಗಳ ಹಿಂದೆಯೇ (2022) ಗಡಿನಾಡ ಪ್ರಯಾಣಿಕರ ಸಂಘಟನೆಯಾದ ಸಹಯಾತ್ರಿ ಮೂಲಕ ಮನವಿ ಸಲ್ಲಿಸಿ ವಿನಂತಿಸಿರುವುದು ಹೆಚ್ಚುವರಿ ಬಸ್ಸನ್ನೇ ಹೊರತು, “ಅಶ್ವಮೇಧ” ವನ್ನಲ್ಲ. ಈಗ ಅಶ್ವಮೇಧ ಬಸ್ ಗಳ ಕೊರತೆ ಇದೆ ಎಂದು ಹೇಳುತ್ತಾ, ಬೇಡಿಕೆಯನ್ನು ಮನ್ನಿಸದೇ ಇರುವುದರಿಂದ ಅಂತರಾಜ್ಯದ ಗಡಿನಾಡ ಜನತೆಯ ಬಸ್ ಸಂಚಾರದ ಪರಿಸ್ಥಿತಿ ಅಯೋಮಯವಾಗಿದೆ ಎಂದು ಸಹಯಾತ್ರಿ ಸಂಘಟನೆಯ ಪ್ರಮುಖರಲ್ಲೊಬ್ಬರಾದ ಕಿಶೋರ್ ಏನಂಗೂಡ್ಳು “ಕಣಿಪುರ”ಕ್ಕೆ ತಿಳಿಸಿದರು.
ಕಾಸರಗೋಡು ಮಂಗಳೂರು ರೂಟಿನಲ್ಲಿ ಉಭಯರಾಜ್ಯ ಸಾರಿಗೆ ಒಪ್ಪಂದ ಪ್ರಕಾರ ತಲಾ 40ರಷ್ಟು ಬಸ್ ಸಂಚರಿಸಬೇಕಿದ್ದರೂ ಕೇರಳದಿಂದ ಕೇವಲ 25ರಷ್ಟು ಮತ್ತು ಮಂಗಳೂರು ಡಿಪೋದಿಂದ ಕರ್ನಾಟಕ ಸಾರಿಗೆಯ 30ರಷ್ಟು ಬಸ್ ಮಾತ್ರವೇ ಸಂಚರಿಸುತ್ತಿದೆ. ರಸ್ತೆ ಕಾಮಗಾರಿ ಮತ್ತು ಸರ್ವೀಸ್ ರಸ್ತೆಯ ವಾಹನದಟ್ಟಣೆಯ ನೆಪದಲ್ಲಿ ಸಂಚಾರಕ್ಕೆ ನಿಗದಿತ ಸಮಯ ಪಾಲಿಸದೇ ಇರುವುದರಿಂದ ದೈನಂದಿನ ಬಸ್ ಆಶ್ರಯಿಸಿ ಉದ್ಯೋಗಕ್ಕಾಗಿ ಮಂಗಳೂರನ್ನವಲಂಬಿಸುವ ಗಡಿನಾಡಿನ ಸಾವಿರಾರು ಮಂದಿ
ಪಡುವ ಪಾಡು ಕಳೆದ ಕೆಲವರ್ಷಗಳಿಂದ ಯಮಯಾತನೆಯದ್ದಾಗಿದೆ.
2022ರಲ್ಲಿ ಸಹಯಾತ್ರಿ ಸಲ್ಲಿಸಿದ್ದ ಮನವಿ
ತಾಸಿಗೊಮ್ಮೆ ಕೇರಳ-ಕರ್ನಾಟಕ ಬಸ್ ಸಂಚಾರಕ್ಕೆ ಸಮಯದ ಷೆಡ್ಯೂಲ್ ಬದಲಾಗುತ್ತಿದೆಯಾದರೂ, ಯಾವುದೇ ಬಸ್ ಸಮಯ ಪಾಲಿಸಿ ಓಡಾಡಿದ ಚರಿತ್ರೆಯೇ ಇಲ್ಲ. ಕೇವಲ 50ಕಿ.ಮೀ ದೂರದ ಈ ರೂಟಿನ ಸಂಚಾರಕ್ಕೆ ನಿಲುಗಡೆಗಳೇ ಅಧಿಕವಾಗಿ ಪ್ರಯಾಣದ ಹೊತ್ತು ಹೆಚ್ಚುತ್ತಲೇ ಹೋಗಿದೆ. ಬೆಳಿಗ್ಗಿನ ಹೊತ್ತು ಮತ್ತು ರಾತ್ರಿಯ ಹೊತ್ತು ಈ ಸಮಸ್ಯೆಯಿಂದ ವಿದ್ಯಾರ್ಥಿಗಳಾದಿ ನಾಗರಿಕ ಉದ್ಯೋಗಿಗಳು ಸಮಯಕ್ಕೆ ಸರಿಯಾಗಿ ತಮ್ಮ,ತಮ್ಮ ಸ್ಥಳ ಸೇರಿಕೊಳ್ಳಲಾಗದೇ ವರ್ಷಗಳಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ಗಡಿನಾಡ ಜನತೆ ಅನುಭವಿಸುತ್ತಿರುವ ಈ ಗಂಭೀರ ನಾಗರಿಕ ಸಮಸ್ಯೆಯ ಕುರಿತು ಯಾವೊಂದು ಪಕ್ಷವಾಗಲೀ, ಸಂಘಟನೆಗಳಾಗಲೀ ಪೌರಹಿತದೃಷ್ಟಿಯಿಂದ ಮುತುವರ್ಜಿವಹಿಸಿಲ್ಲ ಮತ್ತು ಜನಪರವಾಗಿ ಪರಿಹರಿಸಲು ಗಮನಹರಿಸಿಲ್ಲ ಎಂಬುದು ವಾಸ್ತವಾಂಶ. ಪ್ರಸ್ತುತ ಈ ರೂಟಿನಲ್ಲಿ ಬೇಡಿಕೆಯನುಸಾರ ಹೆಚ್ಚುವರಿ ಬಸ್ ಮಂಜೂರು ಮಾಡಿ, ಅವುಗಳ ಸಂಚಾರಕ್ಕೆ ಟ್ರಾಫಿಕ್ ನಿಯಂತ್ರಣಗಳ ಸೌಲಭ್ಯ ಒದಗಿಸಿಕೊಡುವಂತೆ ಇಲಾಖೆ ಗಮನಿಸಬೇಕಿದೆ. ಈದೃಷ್ಟಿಯಲ್ಲಿ ಉಭಯರಾಜ್ಯ ಸಾರಿಗೆ ಇಲಾಖೆ, ಟ್ರಾಫಿಕ್ ವಿಭಾಗ ಕೈಜೋಡಿಸಿ ಕಾರ್ಯತತ್ಪರರಾಗಬೇಕಾದ ಅನಿವಾರ್ಯತೆ ಇದೆ. ಇದು ಕೇವಲ ಕಾಸರಗೋಡು,ಮಂಜೇಶ್ವರ ತಾಲೂಕಿನ ಪ್ರಯಾಣಿಕರದ್ದಷ್ಟೇ ಸಮಸ್ಯೆಯಲ್ಲ, ತಲಪಾಡಿ-ಮಂಗಳೂರು ನಡುವಣ ಕೆಎಸ್ಸಾರ್ಟೀಸಿ ಅವಲಂಬಿತ ಪ್ರಯಾಣಿಕರ ಸಮಸ್ಯೆಯೂ ಆಗಿರುವುದರಿಂದ ಪ್ರಯಾಣಿಕ ದಟ್ಟಣೆಯ ಕಾರಣ ಬೆಳಿಗ್ಗೆ 2ತಾಸು, ಸಂಜೆ 6ರಿಂದ 8 2ತಾಸು ಘನವಾಹನ ನಿಯಂತ್ರಿಸಿ ರಸ್ತೆಯಲ್ಲಿ ಬಸ್ ಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಈ ದೃಷ್ಟಿಯಲ್ಲಿ ನಾಗರಿಕ ಕಾಳಜಿಯಿಂದ ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಸಹಯಾತ್ರಿ ಆಲೋಚಿಸಿದೆ ಎಂದು ಕಿಶೋರ್ ಏನಂಗೂಡ್ಳು ತಿಳಿಸಿದರು.
ಬಸ್ ಸಮಸ್ಯೆಯ ಪರಿಹಾರಕ್ಕೆ ಗಡಿನಾಡ ಸಾರ್ವಜನಿಕ ಸಂಘಟನೆಗಳ ನಡುವೆ ನಾಗರಿಕ ಹಿತದೃಷ್ಟಿಯ ಐಕ್ಯಮತ್ಯ ಬೇಕಾಗಿದೆ. ಈ ದೃಷ್ಟಿಯಲ್ಲಿ ಈ ವಿಷಯಕ್ಕೆ ಪ್ರಮುಖ ಸಾಮಾಜಿಕ ಸಂಘಟನೆಗಳ ಬೆಂಬಲವೂ ಬೇಕಾಗಿದೆ. ಸಹಯಾತ್ರಿ ಯು ಕೊರೋನ ಕಾಲದಲ್ಲಿ ಸಾಮಾಜಿಕ ಕಳಕಳಿಯಿಂದ ಅಸ್ತಿತ್ವಕ್ಕೆ ಬಂದ ದೈನಂದಿನ ಪ್ರಯಾಣಿಕರ ಸಂಘಟನೆಯಾಗಿದೆ.