ಅಯ್ಯಪ್ಪ ಭಕ್ತರ ಚಿತ್ತ ಇನ್ನು ಶಬರಿಮಲೆಯತ್ತ..! ವೃಶ್ಚಿಕಾರಂಭದೊಂದಿಗೆ ಇನ್ನು ಶರಣುಘೋಷದ ದಿನಗಳು…

by Narayan Chambaltimar

ಕಣಿಪುರ ಸುದ್ದಿಜಾಲ

  • ಪವಿತ್ರವಾದ ಮತ್ತೊಂದು ಮಂಡಲಕಾಲಕ್ಕೆ ಇಂದು ನಾಂದಿ. ವೃಶ್ಚಿಕ ಮಾಸ1ನೇ ದಿನದಂದು ಶಬರಿಮಲೆ ತೀರ್ಥಾಟನಾ ಋತು ಆರಂಭವಾಗುವುದು ಸನಾತನ ವಾಡಿಕೆ. ಮಾಮಲೆಯಾದ ಶಬರಿಮಲೆ ದಟ್ಟ‌ಟಾರಣ್ಯದೊಳಗಿನ ಅಯ್ಯಪ್ಪನ ದೇಗುಲ ವರ್ಷವೀಡೀ ಭಕ್ತರಿಗೆ ತೆರೆದಿಡುವ ಸಂಪ್ರದಾಯವಿಲ್ಲ. ವರ್ಷದ ನಿರ್ದಿಷ್ಟ ದಿನಗಳಲ್ಲಿ ತೆರೆಯುವುದಿದ್ದರೂ ಇಂದು ಆರಂಭವಾಗುವ ಮಂಡಲ, ಮಕರ ಮಾಸದ ತೀರ್ಥಾಟನಾ ಋತುವೇ ಅತ್ಯಂತ ಪ್ರಧಾನ…

ಕಾನನ ಕ್ಷೇತ್ರ ಶಬರಿಮಲೆಗೆ ಹೋಗಲು ಮಾಲೆ ಧರಿಸಿ, ಒಂದು ಮಂಡಲದ ವ್ರತಾಚರಣೆ ಕೈಗೊಂಡು ತಪೋನಿರತರಾಗಿ ವ್ರತ ಕೈಗೊಂಡು ತೆರಳುವುದೆಂದರೆ ಇತ್ತೀಚಿನ ದಶಕದ ವರೆಗೂ ಭಯಾಂತಂಕದ ಪರಿಸ್ಥಿತಿಯಿತ್ತು. ಆದರೀಗ ಕಾಲ ಬದಲಾಗಿದೆ. ದೇಶದಾದ್ಯಂತ ದಶದಿಕ್ಕುಗಳಿಂದಲೂ ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ, ನಿಯಂತ್ರಣಾತೀತವಾಗಿದೆ. .

ಕಾರಣ ಕಾನನಕ್ಷೇತ್ರ ಶಬರಿಮಲೆ ಮತ್ತೊಂದು ಇಲ್ಲ, ಮತ್ತೊಂದೆಡೆಯೂ ಇಲ್ಲ. ಅಲ್ಲಿಗೆ ವ್ರತನಿಷ್ಠೆಯಿಂದ ಮಾಲೆಧರಿಸಿ, ಇರುಮುಡಿಕಟ್ಟಿ ನಗ್ನಪಾದಗಳಿಂದ ಮಲೆ ಏರಿ ಹೋಗುವುದೆಂದರೆ ಅದೊಂದು ಮಧುರಾನುಭೂತಿ. ಬದುಕಿಗೆ ಕನ್ನಡಿ ಹಿಡಿದು, ಜೀವನೋನ್ನತಿಯ ಆತ್ಮ ಪರಿಷ್ಕಾರಕ್ಕೆ ಅನುಭವಗಳನ್ನೊದಗಿಸುವ ಜೀವನ ಪಯಣ…ಅದು ಎಷ್ಟೇ ಕಠಿಣವಾದರೂ ವರ್ಷಂಪ್ರತಿ ಹೋಗುವವರು ಲಕ್ಷೋಪಲಕ್ಷ, ಹೊಸತಾಗಿ ಹೋಗುವವರೂ ಸರಿ ಸುಮಾರು ಅಷ್ಟೇ ಅಧಿಕ..
ಈ ಪರಿಯ ಭಕ್ತರ ಏರಿಕೆ ಕಾಣುವ ಸುಖಯಾನವಲ್ಲದ ಭಕ್ತಿಯ ಪಯಣವೊಂದಿದ್ದರೆ ಅದು ಶಬರಿಮಲೆ ಮಾತ್ರ. ಆದ್ದರಿಂದಲೇ ಅದು ಭಿನ್ನ..

ವೃಶ್ಚಿಕ ಮಾಸದ ನಾಂದಿಯ ದಿನ (ನ.16)ರಂದು ಅರುಣೋದಯಕ್ಕೂ ಮುನ್ನ 3 ಗಂಟೆಗೆ ಕಾನನ ಕ್ಷೇತ್ರ ಶಬರಿಮಲೆಯಲ್ಲಿ ನಡೆ ತೆರೆದು ಅಯ್ಯಪ್ಪನ ಪೂಜೆ ಆರಂಭವಾಗುತ್ತದೆ. ಇನ್ನು 41ದಿನಗಳ ಪರ್ಯಂತ ಇದು ವಾಡಿಕೆ. ಇದುವೇ ಮಳೆ ಮರೆಯಾಗಿ, ದಟ್ಟ ಬೇಸಿಗೆಯ ಬೇಗೆಗೆ ಕಾಲೂರುವ ಪ್ರಕೃತಿ ಪಲ್ಲಟದ ಕಾಲ. ಬೆಳಿಗ್ಗೆ 3ಕ್ಕೆ ತೆರೆದರೆ ರಾತ್ರಿ 11ಗಂಟೆಗೆ ಹರಿವರಾಸನಂ ಹಾಡಿ ನಡೆ ಮುಚ್ಚುವುದು ರೂಢಿ. ಆದರೂ ಭಕ್ತ ಜನ ದಟ್ಟಣೆ ಈಗ ಶಬರಿಮಲೆಗೊಂದು ಸಮಸ್ಯೆಯಂತೆ ಸರಕಾರ ಮಾತಾಡುತ್ತಿದೆ. ಆದ್ದರಿಂದಲೇ ಸರಕಾರ ಹೇಳುವ, ಹೇರುವ ನಿಯಂತ್ರಣ ಪದೇ,ಪದೇ ವಿವಾದ ಎಬ್ಬಿಸುತ್ತಿದೆ..ಭಕ್ತರು ಮತ್ತು ಸರಕಾರದ ನಡುವೆ ಸಂಘರ್ಷಕ್ಕೂ ಹೇತುವಾಗುತ್ತಿದೆ..

ಜನದಟ್ಟಣೆ ನಿಯಂತ್ರಿಸಲು ಈಬಾರಿಯಿಂದ ಆನ್ಲೈನ್ ಬುಕ್ಕಿಂಗ್ ಗೆ ಆದ್ಯತೆ ನೀಡಲು ಶಬರಿಮಲೆಯ ದೇವಸ್ವಂ ನಿರ್ಧರಿಸಿದೆ. ದಿನಕ್ಕೆ ಕನಿಷ್ಠ 80ಸಾವಿರ ಭಕ್ತರಿಗೆ ಆನ್ಲೈನ್ ಮೂಲಕವೂ, 10ಸಾವಿರ ಮಂದಿಗೆ ಸ್ಪಾಟ್ ಬುಕ್ಕಿಂಗ್ ಮೂಲಕವೂ ದರ್ಶನ ಒದಗಿಸುವುದು ಸರಕಾರದ ಧ್ಯೇಯ. ಇದಕ್ಕಿರುವ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಹೇಳಲಾಗುತ್ತದೆಯಾದರೂ ಅಯ್ಯನಯ್ಯನಯ್ಯಪ್ಪನ ತೀರುನಡೆಗೆ ಬಂದವರನ್ನು ಮರಳಿಸಲು ಸಾಧ್ಯವುಂಟೇ ಎಂಬ ಪ್ರಶ್ನೆ ವಿವಾದಕ್ಕೆ ಕಾರಣವಾಗುತ್ತಲೇ ಇದೆ..
ಇದರ ಜತೆಯಲ್ಲೇ ಶಬರಿಮಲೆಯಲ್ಲಿ ಈ ಬಾರಿ ಭಕ್ತರ ಮೊಬೈಲ್ ಫೋನ್ ನಿಯಂತ್ರಿಸಲಾಗಿದೆ. ಇರುಮುಡಿ ಕಟ್ಟದಲ್ಲೂ ಪ್ಲಾಸ್ಟಿಕ್, ಕರ್ಪೂರ,ಪನ್ನೀರು ನಿಯಂತ್ರಿಸಲಾಗಿದೆ.
ಕಳೆದ ಬಾರಿ ಶಬರಿಮಲೆಯಲ್ಲಿ ದರ್ಶನಕ್ಕಾಗಿ ಆರೇಳು ತಾಸು ಸರದಿ ಸಾಲಲ್ಲಿ ನಿಂತರೂ ದರ್ಶನ ಸಿಗದ ಪರಿಸ್ಥಿತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟು ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದ ಕಾರಣ ಹದಿನೆಂಟು ಮೆಟ್ಟಲನ್ನೇರುವ ಭಕ್ತರ ಸಹಾಯಕ್ಕೆಂದೇ ತರಬೇತಿ ನೀಡಿದ ಪೋಲೀಸರನ್ನು ಏರ್ಪಡಿಸಲಾಗಿದೆ. ಒಟ್ಟಂದದಲ್ಲಿ ಮತ್ತೊಂದು ಮಂಡಲಕಾಲಾರಂಭಕ್ಕೆ ನಾಂದಿಯಾಗುವ ವೇಳೆ ಕಾನನ ದ ಸ್ವಚ್ಛತೆ, ಶುಭ್ರತೆ ಕಾಪಾಡುವತ್ತ ಗಮನಹರಿಸುವುದೇ ಉತ್ತಮವಾಗಿದೆ. ಏಕೆಂದರೆ ಪ್ರಕೃತಿ ಯೇ ದೇವರು ತಾನೇ??

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00