ಎಂ.ನಾ@ಕಣಿಪುರ ಸುದ್ದಿಜಾಲ
- ಸಂಪಾಜೆ ಯಕ್ಷೋತ್ಸವದಂಗವಾಗಿ ನಡೆದ ತೆಂಕುತಿಟ್ಟಿನ ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆಯಲ್ಲಿ ಪುರುಷ ವೇಷಧಾರಿಗಳ ನಡುವೆ ಬೆಂಗಳೂರಿನ ಐಟಿ ಕ್ಷೇತ್ರದ ಮಹಿಳೆಯೊಬ್ಬರು ಚಿತ್ರಾಂಗದೆಯ ಪಾತ್ರಕ್ಕೆ ದ್ವಿತೀಯ ಬಹುಮಾನ ಪಡೆದು ಕಲಾಭಿಮಾನಿಗಳ ಗಮನಸೆಳೆದ್ದಿದ್ದಾರೆ, ಪಾತ್ರದ ಔಚಿತ್ಯ ಘನತೆ ಮೆರೆಸಿ ಪ್ರಶಂಸೆ ಗಳಿಸಿದ್ದಾರೆ.
- ಸಂಪಾಜೆ ಯಕ್ಷೋತ್ಸವ ಸ್ಪರ್ಧೆಯಲ್ಲಿ ಚಿತ್ರಾಂಗದೆ ಪಾತ್ರಕ್ಕೆ ಬಹುಮಾನ ಮುಡಿದವರು ಮೂಲತಃ ಮಂಗಳೂರಿನವರಾದ ಸುಷ್ಮಾ ವಶಿಷ್ಠ ಮೈರ್ಪಾಡಿ. ಸಂಪಾಜೆ ಯಕ್ಷೋತ್ಸವ ವೇದಿಕೆಯಲ್ಲಿ ಎಡನೀರು ಶ್ರೀಗಳಿಂದ ರಜತ ಪದಕ, ಪ್ರಮಾಣಪತ್ರ, 5ಸಾವಿರ ನಗದು ಬಹುಮಾನ ಪಡೆದ ಅವರು ಈ ಕುರಿತು “ಕಣಿಪುರ”ದ ಜತೆ ತಮ್ಮ ಅನಿಸಿಕೆ-ಅನುಭವ ಹಂಚಿದ್ದಾರೆ..
ಯಕ್ಷಗಾನ ಸ್ಪರ್ಧೆಯ ಪ್ರದರ್ಶನವೇ ಇರಲಿ, ಕಲಾ ಪ್ರದರ್ಶನವೇ ಆಗಲಿ ಪಾತ್ರದ ಗಾಂಭೀರ್ಯದೊಂದಿಗೆ ಪ್ರದರ್ಶನ ಸಾಂಘಿಕ, ಯಕ್ಷಗಾನೀಯವಾಗಿರಬೇಕು.
ಇಡೀ ಪ್ರದರ್ಶನದುದ್ದಕ್ಕೂ ಉಲ್ಲಾಸದಾಯಕ ಶಾರೀರಿಕ ಸಾಮರ್ಥ್ಯ ಬೇಕು. ನಾನು ಸ್ಪರ್ಧೆಯಲ್ಲಿ ಅನೇಕರು ಅತಿಯಾಗಿ ಕುಣಿಯುವುದು, ನಾಟ್ಯಮಾಡುವುದನ್ನೆಲ್ಲಾ ಕಂಡೆ. ಆದರೆ ಭಾವಾಭಿನಯ ಮತ್ತು ರಸಪೋಷಿತ ಪಾತ್ರ ಸಂಬಂಧೀ ಮಾತುಗಾರಿಕೆಯೂ ಅಷ್ಟೇ ಮುಖ್ಯ ತಾನೇ? ಆದ್ದರಿಂದ ಯಕ್ಷಗಾನ ಸ್ಪರ್ಧೆ ಎಂದರೆ ಕಲಾವಿದರಾದ ನಮ್ಮ ಪಾಲಿಗೆ ಅದು ನಮ್ಮನ್ನೇ ಅಭಿವೃದ್ಧಿಗೊಳಿಸುವ, ಉನ್ನತಿಗೇರಿಸುವ ಅವಕಾಶ
ಚಿತ್ರಾಂಗದೆ ಸವಾಲಿನ ಪಾತ್ರ
ಸಂಪಾಜೆಯ ಪ್ರತಿಷ್ಠಿತ ಯಕ್ಷೋತ್ಸವದ ಹವ್ಯಾಸಿ ಸ್ಪರ್ಧೆಯಲ್ಲಿ ಪಾಲ್ಗೊಂಡದ್ದೇ ಒಂದು ವಿಶಿಷ್ಟ ಅನುಭವ. ಐಕೆಂದರೆ ಕಲೆಯಲ್ಲಿ ಸ್ಪರ್ಧೆ ಎಂದಾಗ ಪಾತ್ರ ಪ್ರಸ್ತುತಿಯೇ ಪ್ರಧಾನ. ಆದ್ದರಿಂದ ಇನ್ನಷ್ಟು ಅಧ್ಯಯನಶೀಲತೆಯಿಂದ ಕಲಿತು ತೊಡಗಿಸಲು ಆಗುತ್ತದೆ. ನನಗಂತೂ ಸ್ಪರ್ಧೆ ಹೊಸತಲ್ಲ, ಆದರೆ ಪಾತ್ರ ಹೊಸತು, ಸವಾಲಿನದ್ದಾಗಿತ್ತು. ನಾನು ಎಳವೆಯಿಂದಲೇ ಕುಣಿಯುವ ಪಾತ್ರಗಳಲ್ಲಿ ಗುರುತಿಸಿಕೊಂಡವಳು. ಅಂಥಾ ನನಗೆ ಚಿತ್ರಾಂಗದೆಯಂಥ ಗಾಂಭೀರ್ಯದ ಗರತಿ ಪಾತ್ರ ಕೊಟ್ಟಾಗ ಆತಂಕವಾಗಿತ್ತು. ಆದರೆ ನಮ್ಮ ಯಕ್ಷಮಿತ್ರರು ಬೆಂಗಳೂರು ತಂಡದ ಪವನ್ ಕೆರ್ವಾಶೆ ಧೈರ್ಯ ತುಂಬಿದರು, ಸಲಹೆ ಇತ್ತರು. ತಾನೇ ಅರ್ಜುನನ ಪಾತ್ರ ಮಾಡಿ ಮಾರ್ಗದರ್ಶನ ಇತ್ತರು. ನಾನು ಚಿತ್ರಾಂಗದೆ ಮಾಡಿದ್ದೇ ಮೊದಲು. ಅದು ಭಾವಪ್ರಧಾನ ಪಾತ್ರ. ಅದನ್ನು ನನ್ನಿಂದ ಗೆಲ್ಲಿಸುವಂತೆ ಮಾಡಿದ್ದರಲ್ಲಿ ನಮ್ಮ ಇಡೀ ತಂಡದ ಕೊಡುಗೆ ಇದೆ ಎಂದರು ಕಲಾವಿದೆ ಸುಷ್ಮಾ ಮೈರ್ಪಾಡಿ.
ನನಗಷ್ಟೇ ಅಲ್ಲ, ನಮ್ಮ ತಂಡಕ್ಕೆ ಒಟ್ಟಂದದಲ್ಲಿ ತೃತೀಯ ಬಹುಮಾನ ಬಂದಿದೆ. ವೈಯ್ಯಕ್ತಿಕವಾಗಿ ಪವನ್ ಕೆರ್ವಾಶೆ ಅವರ ಅರ್ಜುನ ಪಾತ್ರಕ್ಕೆ ದ್ವಿತೀಯ, ಅಭಿಜಿತ್ ರಾವ್ ಅವರ ಬಬ್ರುವಾಹನ ತೃತೀಯ ಬಹುಮಾನ ಪಡೆದಿದೆ.
ಚಿತ್ರಾಂಗದೆಯಾಗಿ ಸುಷ್ಮಾ ಮೈರ್ಪಾಡಿ
ಬ್ಯುಸಿ ಜಾಬ್ ಷೆಡ್ಯೂಲಿನ ನಾವು ತಯಾರಾದುದೇ ವಿಶೇಷ..
ಒಟ್ಟು ಸ್ಪರ್ಧೆಯಲ್ಲಿ 13 ತಂಡಗಳಿತ್ತು. ಈ ಪೈಕಿ ಬೆಂಗಳೂರಿನ ನಮ್ಮ ಯಕ್ಷಮಿತ್ರರು ಮಾತ್ರ ಭಿನ್ನವಾದ,ಊರಿನ ತಂಡದಂತೆ ಸಕ್ರಿಯರಲ್ಲದ ಹವ್ಯಾಸಿ ತಂಡ. ಏಕೆಂದರೆ ನಾವೆಲ್ಲರೂ ಬ್ಯುಸಿ ಷೆಡ್ಯೂಲಿನ ಐಟಿ ಸಹಿತ ವಿವಿಧ ಕ್ಷೇತ್ರದವರು. ಉದ್ಯೋಗದ ಜತೆ ಪ್ರಾಕ್ಟೀಸಿಗೆ ಸಮಯ ಸಿಗುತ್ತಿರಲಿಲ್ಲ. ನಮ್ಮ ಇಡೀ ತಂಡದಲ್ಲಿ ನಾನೊಬ್ಬಳೇ ಮಹಿಳೆ. ಪ್ರಾಕ್ಟೀಸ್ ಮುಗಿವಾಗ ತಡರಾತ್ರಿ ಆಗುತ್ತಿದ್ದುದೂ ಉಂಟು. ಬೆಂಗಳೂರಿನಂಥ ನಗರದಲ್ಲಿ ತಡರಾತ್ರಿ ಮನೆಗೆ ಬಂದು, ಮರುದಿನ ಉದ್ಯೋಗದಲ್ಲಿ ತೊಡಗುತ್ತಾ ಸ್ಪರ್ಧೆಗೆ ತಯಾರಾದುದೇ ಒಂದು ವಿಶೇಷಾನುಭವ ಎನ್ನುತ್ತಾರೆ ಸುಷ್ಮಾ ಮೈರ್ಪಾಡಿ.
ಕಲಾಸ್ಪರ್ಧೆ ಎಂದರೆ ಕ್ರೀಡಾಸ್ಪರ್ಧೆ ಅಲ್ಲತಾನೇ?
ನಾನು ಯಕ್ಷಗಾನದಲ್ಲಿ ವೇಷ ಮಾಡಲಾರಂಭಿಸಿ 20ವರ್ಷಗಳೇ ದಾಟಿದೆ. ಅಪ್ಪ ಶಂಕರನಾರಾಯಣ ಮೈರ್ಪಾಡಿಯವರು ಯಕ್ಷಗಾನ ಕಲಾವಿದ/ಗುರು. ನನಗೂ ಅವರೇ ಮೊದಲ ಗುರು. ಪ್ರಸಂಗ, ಪಾತ್ರ ನಡೆಗಳನ್ನು ಮುಂದೆ ಅನೇಕರ ಜತೆಗಿನ ಪ್ರದರ್ಶನದ ಅನುಭವಗಳಿಂದಲೇ ಕಲಿತೆ. ಹೆಚ್ಚಾಗಿ ಕುಣಿಯುವ ಪಾತ್ರಗಳೆಂದರೆ ಇಷ್ಟ ಇತ್ತು. ಆದರೆ ಗಾಂಭೀರ್ಯದ ಗರತಿ ಪಾತ್ರವೊಂದನ್ನು ಮಾಡಿದ್ದೇ ಮೊದಲು.ಅದರಲ್ಲಿ ಬಹುಮಾನ ಪಡೆದೆ ಎಂದಾಗ ಖುಷಿ ಸಹಜ ತಾನೇ..?
ನನಗೆ ಎಂದಲ್ಲ ಯಾರಿಗೇ ಆದರೂ ಇದು ಸವಾಲಿನ ಪಾತ್ರ. ಅನೇಕರು ಪಾತ್ರ, ಔಚಿತ್ಯ, ಸಂದರ್ಭಗಳನ್ನೆಲ್ಲ ಮರೆತು ಯಕ್ಷಗಾನ ಸ್ಪರ್ಧೆ ಎಂಬ ತಿಳುವಳಿಕೆಯಿಂದ, ರೈಸುವುದೆಂಬ ಕಲ್ಪನೆಯಿಂದ ಸ್ಪರ್ಧಾ ವೇದಿಕೆಯಲ್ಲಿ ಒಟ್ಟಾರೆ ಕುಣಿದದ್ದು ಕಂಡಿದ್ದೇನೆ. ಆದರೆ ಕಲಾ ಸ್ಪರ್ಧೆ ಎಂದರೆ ಅದು ಶಾರೀರಿಕ ಸಾಮರ್ಥ್ಯದ ಕ್ರೀಡಾ ಸ್ಪರ್ಧೆ ಅಲ್ಲ ತಾನೇ? ಎಂದು ಕೇಳುತ್ತಾರೆ ಸುಷ್ಮಾ ಮೈರ್ಪಾಡಿ.
ಸ್ಪರ್ಧೆ ಬೆಳವಣಿಗೆಗೆ ಪೂರಕ
ಯಕ್ಷಗಾನ ಸ್ಪರ್ಧೆಯ ಪ್ರದರ್ಶನವೇ ಇರಲಿ, ಕಲಾ ಪ್ರದರ್ಶನವೇ ಆಗಲಿ ಪಾತ್ರದ ಗಾಂಭೀರ್ಯದೊಂದಿಗೆ ಪ್ರದರ್ಶನ ಸಾಂಘಿಕ, ಯಕ್ಷಗಾನೀಯವಾಗಿರಬೇಕು.
ಇಡೀ ಪ್ರದರ್ಶನದುದ್ದಕ್ಕೂ ಉಲ್ಲಾಸದಾಯಕ ಶಾರೀರಿಕ ಸಾಮರ್ಥ್ಯ ಬೇಕು. ನಾನು ಸ್ಪರ್ಧೆಯಲ್ಲಿ ಅನೇಕರು ಅತಿಯಾಗಿ ಕುಣಿಯುವುದು, ನಾಟ್ಯಮಾಡುವುದನ್ನೆಲ್ಲಾ ಕಂಡೆ. ಆದರೆ ಭಾವಾಭಿನಯ ಮತ್ತು ರಸಪೋಷಿತ ಪಾತ್ರ ಸಂಬಂಧೀ ಮಾತುಗಾರಿಕೆಯೂ ಅಷ್ಟೇ ಮುಖ್ಯ ತಾನೇ? ಆದ್ದರಿಂದ ಯಕ್ಷಗಾನ ಸ್ಪರ್ಧೆ ಎಂದರೆ ಕಲಾವಿದರಾದ ನಮ್ಮ ಪಾಲಿಗೆ ಅದು ನಮ್ಮನ್ನೇ ಅಭಿವೃದ್ಧಿಗೊಳಿಸುವ, ಉನ್ನತಿಗೇರಿಸುವ ಅವಕಾಶ. ಇಂಥಾ ಸ್ಪರ್ಧೆಗಳಿಂದ ಯುವ ಪ್ರತಿಭೆಗಳಿಗೆ ಬೆಳೆಯಲು ಅವಕಾಶವಿದೆ. ಹವ್ಯಾಸಿಗಳೆಲ್ಲರಿಗೆ ವೈವಿಧ್ಯತೆ ನೋಡುವ , ತಿದ್ದಿಕೊಳ್ಳುವ , ಇನ್ನಷ್ಟು ಕಲಿತು ಪಾಕಗೊಳ್ಳುವ ಅವಕಾಶ ಒದಗುತ್ತದೆ ಎಂದರು ಸುಷ್ಮಾ ಮೈರ್ಪಾಡಿ. ಹವ್ಯಾಸಿ ಕಲಾವಿದರಿಗೆ ವರ್ಷಂಪ್ರತಿ ಸ್ಪರ್ಧೆ ಏರ್ಪಟ್ಟರೆ ಹವ್ಯಾಸಿ ಯಕ್ಷಗಾನರಂಗದ ಪ್ರತಿಭೆಗಳ ಸುಧಾರಣೆಯಾದೀತು. ಈ ಹಿನ್ನೆಲೆಯಲ್ಲಿ ಆಯೋಜಕರಾದ ಕೀಲಾರು ಪ್ರತಿಷ್ಠಾನವನ್ನು ಅಭಿನಂದಿಸುತ್ತೇನೆ ಎಂದರು ಸುಷ್ಮಾ ಮೈರ್ಪಾಡಿ.
ಮೂಲತಃ ಮಂಗಳೂರಿನ ಪಣಂಬೂರಿನವರಾದ ಸುಷ್ಮಾ ಪ್ರಸ್ತುತ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ಪತಿಯ ಬೆಂಬಲ ಮತ್ತು ನಮ್ಮ ತಂಡದ ಸಹಕಾರದಿಂದಷ್ಟೇ ಕಲಾವಿದೆಯಾಗಿ ತೊಡಗಿಸಲು ಸಾಧ್ಯವಾಯಿತು ಎಂದಿದ್ದಾರೆ.