ಕರ್ನಾಟಕ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಯ ಸಂಕಲ್ಪ ಸಾಕಾರ ಆಗಬೇಕಿದ್ದರೆ ರಥವೂ ಬೇಡ, ರಾಜಕಾರಣಿಗಳು ಮತ್ತು ರಾಜಕೀಯ ಸೋಂಕಿತ ಸಾಂಸ್ಕೃತಿಕ ಕಾರ್ಯಕರ್ತರು ಕನ್ನಡಕ್ಕಾಗಿ ಕರೆ ಕೊಡುವುದೂ ಬೇಡ. ಬದಲು ಪ್ರಾಥಮಿಕ ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿ, ಕನ್ನಡ ಕಲಿಸಿ, ನೆಲದ ಕಲೆ ಯಕ್ಷಗಾನ-ತಾಳಮದ್ದಳೆಯನ್ನು ಪೋಷಿಸಿದರೆ ಸಾಕು.ಪರಿಣಾಮವಾಗಿ ಕನ್ನಡ ಸಮೃದ್ಧವಾಗಿ ಅರಳುತ್ತದೆ ನಿಸ್ಸಂದೇಹ ಎಂದು ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ನುಡಿದರು.
ಯಕ್ಷಾಂಗಣ ಮಂಗಳೂರು ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಕಾರದಿಂದ ಮಂಗಳೂರು ಕದ್ರಿಯಲ್ಲಿ ಆರಂಭಗೊಂಡಿರುವ 12ನೇ ವರ್ಷದ ನುಡಿಹಬ್ಬ ಯಕ್ಷಗಾನ ಸಪ್ತಾಹ -2024 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು
ಭಾಷೆ ಮತ್ತು ಭಾಷಾ ಸಂಸ್ಕೃತಿಗಳು ಅದರ ಬಳಕೆ, ಆಚರಣೆಯಿಂದ ಮಾತ್ರವೇ ಬೆಳೆಯುತ್ತದೆ. ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ತೊಡಗುವುದರಿಂದ ಭಾಷಾ ಪೋಷಣೆಯಾಗುತ್ತದೆ ಎಂದವರು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರಿಗೆ “ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ” ನೀಡಿ ಗೌರವಿಸಿದರು
ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಸಪ್ತಾಹ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು “ಕನ್ನಡ ರಥವೆಂದು ಕನ್ನಡದ ಹೆಸರಲ್ಲಿ ಪ್ರಚಾರ ಪಡೆಯುವವರಿಗೆ ಕನ್ನಡ ಶಾಲೆಗಳನ್ನು ಕಾಪಾಡಲು ಆಗುತ್ತಿಲ್ಲ, ಅಧ್ಯಾಪಕ ನೇಮಕ ನಡೆಯುತ್ತಿಲ್ಲ -ಇಂಥಹ ಪರಿಸ್ಥಿತಿಯಲ್ಲಿ ರಥಯಾತ್ರೆಯ ಔಚಿತ್ಯ ಪ್ರಶ್ನಾರ್ಹ ಎಂದ ಅವರು ತಾಳಮದ್ದಳೆ,ಯಕ್ಷಗಾನದಂಥ ಕಲೆ ನೈಜ ಕನ್ನಡ ಕೊಡುಗೆ ನೀಡುತ್ತದೆ ಎಂದರು.
ಕದ್ರಿ ಶ್ರೀ ಮಂಜುನಾಥ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಎಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಡಾ.ಮಂಜುನಾಥ ಎಸ್ ರೇವಣ್ಕರ್, ಉದ್ಯಮಿ ವಿ.ಕರುಣಾಕರ್, ನ್ಯಾಯವಾದಿ ಐ. ಸುಬ್ಬಯ್ಯ ರೈ, ವಸಂತ ಶೆಟ್ಟಿ ಬೆಳ್ಳಾರೆ, ಸಿ ಎಸ್.ಭಂಡಾರಿ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು. ಕಾರ್ಯಾಧ್ಯಕ್ಷ ಭಾಸ್ಕರ್ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಸುಮಾಪ್ರಸಾದ್ ಸನ್ಮಾನಪತ್ರ ವಾಚಿಸಿದರು
ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು.