ಕಾಸರಗೋಡು: ವಿಫುಲ ನದೀ ತೀರಗಳಿರುವ ಕೇರಳದ ಪ್ರವಾಸೋದ್ಯಮಕ್ಕೆ ಮಹತ್ವದ ಕೊಡುಗೆ ನೀಡಲಿದೆಯೆಂದು ಹೇಳಲಾಗುತ್ತಿರುವ ಉದ್ದೇಶಿತ ಸೀ-ಪ್ಲೈನ್ ಯೋಜನೆಯಿಂದ ಕಾಸರಗೋಡು ಜಿಲ್ಲೆಯ ಮೂರು ನದಿಗಳನ್ನು ಹೊರತುಪಡಿಸಿ, ಬೆಸ್ತರ ಆತಂಕ ನೀಗಿಸಬೇಕೆಂದು ಕೇರಳ ದೀವರ ಸಂರಕ್ಷಣ ಸಮಿತಿ ರಾಜ್ಯ ಕಾರ್ಯದರ್ಶಿ ವಿನೋದನ್ ಕುಂಬ್ಳೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇರಳ ರಾಜ್ಯ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಿರುವ ಅವರು ಪ್ರಸ್ತುತ ಯೋಜನೆಯಿಂದ ಬಡ ಮೀನುಗಾರರ ಉದ್ಯೋಗಕ್ಕೆ ಹೊಡೆತವಿದೆ. ಯೋಜನೆ ಅನುಷ್ಠಾನಗೊಂಡರೆ ಮೀನುಗಾರಿಕಾ ನಿರ್ಬಂಧಿತ ವಲಯವೂ ಉಂಟಾಗಲಿದೆ. ಇದರಿಂದ ಮೀನುಗಾರರು ಉದ್ಯೋಗ ಕಳೆದುಕೊಳ್ಳುವರು. ಆದ್ದರಿಂದ ಪ್ರಸ್ತುತ ಯೋಜನೆಯಿಂದ ಕಾಸರಗೋಡು ಜಿಲ್ಲೆಯ ತೇಜಸ್ವಿನಿ, ಚಿತ್ತಾರಿ, ಬೇಕಲ ನದಿಗಳನ್ನು ಮುಕ್ತಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ.
ಪರಂಪರಾಗತ ನದೀದಂಡೆಯ ಒಳನಾಡ ಮೀನುಗಾರಿಕೆಯನ್ನು ಕಾಡುವ ಸಮಸ್ಯೆ ಇದಾಗಿದೆ. ಪ್ರವಾಸೋದ್ಯಮದ ನೂತನ ಯೋಜನೆಗಳನ್ನು ಧೀವರ ಸಂರಕ್ಷಣ ಸಮಿತಿ ಸ್ವಾಗತಿಸುತ್ತಿವೆಯಾದರೂ ಮೀನುಗಾರರ ಕಸುಬು ಕಸಿದುಕೊಳ್ಳುವ ಉದ್ದೇಶಿತ ಯೋಜನೆ ಕೈಬಿಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.