ಕಣಿಪುರ ಸುದ್ದಿಜಾಲ, ಮಂಗಳೂರು
- ಮಂಗಳೂರು – ಕಾಸರಗೋಡು ನಡುವೆ ನೂತನವಾಗಿ 10ಅಶ್ವಮೇಧ ಸಾರಿಗೆ ಬಸ್ ಸಂಚಾರ ಆರಂಭಿಸಲು ಸಾರಿಗೆ ಇಲಾಖೆ ಆದೇಶಿಸಿದ್ದರೂ, ಬಸ್ ಯಾನಾರಂಭಕ್ಕೆ ವಿಳಂಬವಾಗಲಿದೆ.
ಅಶ್ವಮೇಧ ಬಸ್ ಗಳ ಕೊರತೆ ಇರುವುದೇ ಸರ್ವೀಸ್ ವಿಳಂಬಕ್ಕೆ ಪ್ರಧಾನ ಕಾರಣವಾಗಿದೆ.
ಮಂಗಳೂರು-ಕಾಸರಗೋಡು ನಡುವೆ ಹೆಚ್ಚುವರಿಯಾಗಿ ಅಶ್ವಮೇಧ ಬಸ್ ಆರಂಭಿಸಲಿಕ್ಕಿರುವ ಸಾರಿಗೆ ಇಲಾಖೆಯ ಉದ್ದೇಶಕ್ಕೆ ಬಸ್ ಗಳ ಕೊರತೆ ಅಡ್ಡಿಯಾಗಿದೆ. ಮಂಗಳೂರು ಡಿಪೋ ದಲ್ಲಿ 29ಅಶ್ವಮೇಧ ಬಸ್ ಗಳಿವೆ. ಅವೆಲ್ಲವೂ ಅನ್ಯಾನ್ಯ ರೂಟುಗಳಲ್ಲಿ ಸರ್ವೀಸ್ ನಡೆಸುತ್ತಿರುವುದರಿಂದ ಹೊಸತಾಗಿ ಕಾಸರಗೋಡು ರೂಟಿಗೆ ಹೊಸ ಬಸ್ ಒದಗಿಸಿದರೆ ಮಾತ್ರವೇ ಸಂಚಾರ ಆರಂಭಿಸುವ ಸ್ಥಿತಿ ಮಂಗಳೂರು ಡಿಪೋಕ್ಕೆದುರಾಗಿದೆ.
ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 800ಅಶ್ವಮೇಧ ಬಸ್ ಗಳನ್ನು ರಾಜ್ಯದ ವಿವಿಧ ಡಿಪೋಗಳಿಗೆ ನೀಡಲಾಗಿತ್ತು. ಅವೆಲ್ಲವೂ ನಿರ್ದಿಷ್ಟ ರೂಟುಗಳಲ್ಲಿ ಸರ್ವೀಸ್ ನಡೆಸುತ್ತಿವೆ. ಈ ತನ್ಮಧ್ಯೆ ನೂತನವಾಗಿ ಕಾಸರಗೋಡು -ಮಂಗಳೂರು ನಡುವೆ 10ಬಸ್ ಹೆಚ್ಚುವರಿಯಾಗಿ ಆರಂಭಿಸುವಂತೆ ಸಾರಿಗೆ ಇಲಾಖೆ ನಿರ್ದೇಶಕರು ಆದೇಶಿಸಿದ್ದರೂ , ಬಸ್ ಮಂಜೂರಾತಿಯಾಗಿಲ್ಲ. ನೂತನ ಅಶ್ವಮೇಧ ಬಸ್ ಗಳ ಕೊರತೆ ಇರುವುದೇ ಇದಕ್ಕೆ ಕಾರಣವಾಗಿದೆ. ಮಂಗಳೂರು ಡಿಪೋದಿಂದ ಇತರ ರೂಟುಗಳಲ್ಲಿ ಸರ್ವೀಸ್ ನಡೆಸುವ ಮತ್ತು ಆದಾಯ ಕಡಿಮೆ ಇರುವ ಬಸ್ ಗಳನ್ನು ಆ ರೂಟಿನಿಂದ ತೆಗೆದು ಕಾಸರಗೋಡು ರೂಟಿಗೆ ಹಾಕಬೇಕೆಂದು ನಿರ್ದೇಶವಿದ್ದರೂ ಸದ್ಯ ಅಶ್ವಮೇಧ ಬಸ್ ಗಳ ಸರ್ವೀಸ್ ರದ್ಧತಿಗೆ ಮಂಗಳೂರು ಡಿಪೋ ಆಸಕ್ತಿ ವಹಿಸುತ್ತಿಲ್ಲ. ಕಾಸರಗೋಡು-ಮಂಗಳೂರು ನಡುವಣ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ನಿಗದಿತ ಸಂಚಾರ ಸಮಯ ಪಾಲನೆ ಅಸಾಧ್ಯವೆಂದೂ, ಹೆದ್ದಾರಿ ನಿರ್ಮಾಣ ಸುಸೂತ್ರವಾಗಿ ನಡೆದ ಬಳಿಕ ನೂತನ ಅಶ್ವಮೇಧ ಬಸ್ ಮಂಜೂರಾತಿಯಾಗಿ ಸಿಕ್ಕಿದರೆ ಸಂಚಾರ ಪ್ರಾರಂಭಿಸುವುದಾಗಿಯೂ ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಕಾಸರಗೋಡು -ಮಂಗಳೂರು ರೂಟಿನಲ್ಲಿ ಪ್ರಯಾಣಿಕರ ದಟ್ಟಣೆ ಇರುವುದನ್ನು ಪರಿಗಣಿಸಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಹೆಚ್ಚುವರಿ ಬಸ್ ಸಂಚಾರ ಆರಂಭಿಸುವಂತೆ ವಿಕಾಸ ಟ್ರಸ್ಟ್ ಸಾರಿಗೆ ಸಚಿವರಿಗೆ ಮನವಿ ಮಾಡಿತ್ತು. ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ಅವರು ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಮುಖತಾ ಭೇಟಿಯಾಗಿ ಗಡಿನಾಡಿನ ಸಂಚಾರ ಸಮಸ್ಯೆಯನ್ನು ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನಿರ್ದೇಶಕರು ಹೆಚ್ಚುವರಿ ಬಸ್ ಸಂಚಾರಕ್ಕೆ ನಿರ್ದೇಶಿಸಿದ್ದರು.
ಪ್ರಸ್ತುತ ರೂಟಿನ ಜನದಟ್ಟಣೆ ಮತ್ತು ಅತ್ಯಧಿಕ ಕಲೆಕ್ಷನ್ ಹಿನ್ನೆಲೆಯಲ್ಲಿ ನಿಯಮಿತ ನಿಲುಗಡೆಯ ಅಶ್ವಮೇಧ ಬಸ್ ಪ್ರಾರಂಭಿಸಲು ಯೋಚಿಸಲಾಗಿತ್ತು. ಆದರೆ ಯೋಜನೆಯ ಆರಂಭಕ್ಕೆ ಬಸ್ ಕೊರತೆ ಅಡ್ಡಿಯಾಗಿದೆ.