ಕಣಿಪುರ ಸುದ್ದಿಜಾಲ, ಮೂಡಬಿದಿರೆ
ಕರಾವಳಿಯ ಬುಡಕಟ್ಟು ಜನಾಂಗವಾದ ಮರಾಟಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಂವಿಧಾನ ಬದ್ಧವಾದ ನ್ಯಾಯೋಚಿತ ಪರಿಹಾರಗಳನ್ನು ಸಮಾನವಾಗಿ ಒದಗಿಸುವ ಭರವಸೆ ನೀಡುತ್ತೇನೆ ಎಂದು ಕರ್ನಾಟಕ ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ನುಡಿದರು. ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ನ.10ಭಾನುವಾರ ನಡೆದ ಕರಾವಳಿ ಮರಾಟಿ ಸಮಾವೇಶ -2024 “ಗದ್ದಿಗೆ” ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಬುಡಕಟ್ಟು ಜನಾಂಗವೇ ಭಾರತದ ಶ್ರೀಮಂತಿಕೆ. ಅವರ ಆಚಾರ,ಸಂಸ್ಕೃತಿ, ಜನಪದಗಳಿಂದಲೇ ನಮ್ಮ ಸಂಸ್ಕೃತಿ ಸಂಪನ್ನವಾಗಿದೆ. ಈ ಹಿನ್ನೆಲೆಯಲ್ಲಿ ಮರಾಟಿ ಸಮಾಜ ಶೈಕ್ಷಣಿಕವಾಗಿ ಮುಂದುವರಿದು ಆರ್ಥಿಕ ಸ್ವಾವಲಂಬನೆ ಪಡೆಯಬೇಕು. ಆದಕ್ಕೆ ಅವಕಾಶವಿತ್ತದ್ದೇ ಸಂವಿಧಾನ. ಆದ್ದರಿಂದ ಸಂವಿಧಾನ ಬದ್ಧವಾದ ಸೌಲಭ್ಯ ಸರಕಾರದ ಕಡೆಯಿಂದ ಸಮಾನ ಅರ್ಹತೆ ಎಂಬಂತೆ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಮ್ಮುಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ “ಗದ್ದಿಗೆ” ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ಮರಾಟಿ ಜನಾಂಗ ಬಲಿಷ್ಠವಾಗಬೇಕಿದ್ದರೆ ಈಗಿನ ವಿದ್ಯಾರ್ಥಿ ಜನಾಂಗ ಕೌಶಲ್ಯ ಪೂರಿತ ಶಿಕ್ಷಣದತ್ತ ವಿಶೇಷ ಗಮನಹರಿಸಬೇಕು. ಕೇವಲ ಸರಕಾರದ ಮೀಸಲಾತಿ ಸೌಲಭ್ಯ ಒಂದನ್ನೇ ಆಶ್ರಯಿಸದೇ ಕೈಗಾರಿಕೆ, ಉದ್ಯಮ, ಶಿಕ್ಷಣ, ಆರೋಗ್ಯ ಸಹಿತ ವಿಶಾಲ ಜಗತ್ತಿನ ವಿಫುಲ ಅವಕಾಶಗಳನ್ನು ಬಳಸಬೇಕು. ಅದಕ್ಕೆ ಫಿಟ್ ಆದ ತಲೆಮಾರನ್ನು ರೂಪಿಸಬೇಕು.ಈ ನಿಟ್ಟಿನಲ್ಲಿ ಕರಾವಳಿಯ ಮರಾಟಿ ವಿದ್ಯಾರ್ಥಿಗಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಎಲ್ಲಾ ನೆರವನ್ನೂ ನೀಡುವುದೆಂದು ಘೋಷಿಸಿದರು. ಬಳಿಕ ಸಮಾವೇಶ ಪದಾಧಿಕಾರಿಗಳು ಡಾ.ಮೋಹನ ಆಳ್ವರನ್ನು ಸನ್ಮಾನಿಸಿ ಗೌರವಿಸಿದರು.
ಸಮಾವೇಶದಲ್ಲಿ ಪದ್ಮಶ್ರೀ ಪುರಸ್ಕೃತ ಮರಾಟಿ ಸಮುದಾಯದ ಸಾಧಕ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಮರಾಟಿ ಜನಾಂಗ ಪ್ರಸ್ತುತ ಎದುರಿಸುವ ಸಮಸ್ಯೆ ಮತ್ತು 17 ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸಮಾವೇಶದ ಗೌ.ಅಧ್ಯಕ್ಷ ಡಾ.ಕೆ.ಸುಂದರ ನಾಯ್ಕ್ ಅವರು ಮಂಡಿಸಿದ ಬಳಿಕ ಸಚಿವರ ಮೂಲಕ ಸರಕಾರಕ್ಕೆ ಸಲ್ಲಿಸಿದರು.
ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.
ಭಾರತ ಸರಕಾರದ ಕೃಷಿ ವಿಭಾಗದ ನಿವೃತ್ತ ನಿರ್ದೇಶಕ ಡಾ.ಬಿ.ಜಿ.ನಾಯ್ಕ್, ವಿಜ್ಞಾನಿ ಶೋಭಾವತಿ ಎಂ.ಟಿ, ದ.ಕ ಜಿಲ್ಲಾ ಮರಾಟಿ ಸೇವಾ ಸಂಘ ಅಧ್ಯಕ್ಷ ವಿಶ್ವನಾಥ ನಾಯ್ಕ್, ದ.ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ ನಾಯ್ಕ್ ಕೆದಿಲ, ಉಡುಪಿ ಜಿಲ್ಲಾ ಮರಾಟಿ ಸೇವಾ ಸಂಘದ ಅಧ್ಯಕ್ಷ ಉಮೇಶ ನಾಯ್ಕ್ ಚೇರ್ಕಾಡಿ, ಶಿವಮೊಗ್ಗ ಜಿಲ್ಲಾ,ಮರಾಟಿ ಸಂಘದ ಅಧ್ಯಕ್ಷ ಬಿ.ಗಣಪತಿ, ರವಿಪ್ರಸಾದ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ಸಮಾವೇಶಕ್ಕೂ ಮುನ್ನ ಮತ್ತು ಸಮಾವೇಶದ,ನಡುವೆ ಮರಾಟಿ ಜನಾಂಗದ ವಿವಿಧ ಸಾಂಸ್ಕೃತಿಕ ಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು.