ಕಣಿಪುರ ಸುದ್ದಿಜಾಲ
ರಕ್ತದಾನ ಮಹಾದಾನ. ಪ್ರತಿಯೊಬ್ಬ ಆರೋಗ್ಯವಂತನ ಬದುಕಿನ ನೆತ್ತರು ಮತ್ತೊಬ್ಬರ ಬದುಕನ್ನು ಕಾಪಾಡುತ್ತದೆ. ಹಾಗಿರುವಾಗ ಆರೋಗ್ಯವಂತ ಯುವಕರೇಕೆ ರಕ್ತದಾನದಂಥಹ ಮಹೋಪಕಾರ ಮಾಡಬಾರದು? ರಕ್ತಕ್ಕೆ ಜಾತಿ, ಮತ, ಪಂಥಗಳ ಬೇಧ ಇಲ್ಲ. ಇರುವುದು ಗ್ರೂಪ್ ವ್ಯತ್ಯಾಸ ಅಷ್ಟೇ …ಹಾಗೆಯೇ ಎದೆ ಮಿಡಿತಕ್ಕೂ ಮತ ಉಂಟೇ…??
ಬನ್ನಿ ಆರೋಗ್ಯ ಕಾಪಾಡಿ, ಸಶಕ್ತರಾಗಿ ಎಂಬುದೇ ಕಾರ್ಯಕ್ರಮದ ಮಾನವಿಕ ಸಂದೇಶ..
ಕುಂಬಳೆಯ ಪ್ರತಿಷ್ಠಿತ ಸಾಮಾಜಿಕ ಸೇವಾ ಸಂಸ್ಥೆ ಚಿರಂಜೀವಿ (ರಿ) ಕುಂಬ್ಳೆ ಇದೇ ನ.17ರಂದು ಹೃದ್ರೋಗ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಬ್ಲಡ್ ಹೆಲ್ಪ್ಲಲೈನ್ ಚ್ಯಾರಿಟಿ ಟ್ರಸ್ಟ್ ಮಂಗಳೂರು, ಯೇನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಸಹಕಾರದೊಂದಿಗೆ ಕುಂಬ್ಳೆಯ ಸಾಮಾಜಿಕ ಸಂಸ್ಥೆಗಳ ಸಹಕಾರದಲ್ಲಿ ಏರ್ಪಡಿಸುವ ಶಿಬಿರ ನ.17ರಂದು ಕುಂಬ್ಳೆ ಸರಕಾರಿ ಶಾಲಾ ಸಮೀಪದ ಚಿರಂಜೀವಿ ಆವರಣದಲ್ಲಿ ನಡೆಯಲಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ತನಕ ನಡೆಯಲಿರುವ ಶಿಬಿರದ ಪ್ರಯೋಜನವನ್ನು ಕುಂಬ್ಳೆ ಪರಿಸರದ ನಾಗರಿಕರು ಸಂಪೂರ್ಣ ಉಚಿತವಾಗಿ ಪಡೆಯಬೇಕೆಂದು ಚಿರಂಜೀವಿ ಕಲಾ,ಕ್ರಿಡಾ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕೃಷ್ಣ ಗಟ್ಟಿ “ಕಣಿಪುರ” ಡಿಜಿಟಲ್ ಮೀಡಿಯ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಕುಂಬ್ಳೆಯ ಪ್ರತಿಷ್ಠಿತ ಸಂಸ್ಥೆಯಾದ ಚಿರಂಜೀವಿ ಈ ಹಿಂದೆ ಹನ್ನೆರಡು ವರ್ಷಗಳಿಂದ ಜನೋಪಯೋಗಿ ಕಾಳಜಿಯಿಂದ ಆರೋಗ್ಯ ಸಂಬಂಧೀ ಶಿಬಿರ, ರಕ್ತದಾನ ಏರ್ಪಡಿಸಿದೆ. ಅದರ ಮುಂದುವರಿಕೆಯಾಗಿ ನಡೆಯುವ ಪ್ರಸ್ತುತ ಶಿಬಿರದಲ್ಲಿ ಕುಂಬ್ಳೆ ಪರಿಸರದ ಪ್ರಮುಖರು ಭಾಗವಹಿಸುವರು.ಜನಮೈತ್ರಿ ಪೋಲೀಸ್ ಕುಂಬಳೆ, ಫ್ರೆಂಡ್ಶಿಪ್ ಬಾಯ್ಸ್ ಕುಂಬ್ಳೆ, ನವೋದಯ ಫ್ರೆಂಡ್ಸ್ ಭಾಸ್ಕರನಗರ್, ವಿನಾಯಕ ಕ್ಲಬ್ ಜೋಡುಕಲ್ಲು ಮುಂತಾದವುಗಳ ಸಂಯುಕ್ತ ಸಹಕಾರದಲ್ಲಿ ಶಿಬಿರ ಆಯೋಜನೆ ಆಗಿದೆ.
ಯಾವುದೇ ಜನಾಂಗದ ಮಾನುಷಿಕ ಅಭ್ಯುದಯಕ್ಕೆ ಶಿಕ್ಷಣ, ಅರಿವು, ಆರೋಗ್ಯ ಸದೃಢತೆಯೇ ಅತ್ಯಂತ ಅಗತ್ಯವಾದ ಮೊದಲ ಅಂಶ. ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಹೃದ್ರೋಗ, ಹೃದಯ ಆಘಾತ ಮತ್ತು ರಕ್ತಹೀನತೆಗಳೇ ಮೊದಲಾದ ಸಮಸ್ಯೆಗಳಿಂದ ಸಮಾಜವನ್ನ ಕಾಪಾಡಬೇಕಿದೆ.
ಈ ಕಾರಣದಿಂದ ಶಿಬಿರದ ಪ್ರಯೋಜನವನ್ನು ನಾಗರಿಕರು ಪಡೆಯಬೇಕೆಂದು ಚಿರಂಜೀವಿ (ರಿ) ಅಧ್ಯಕ್ಷರು ತಿಳಿಸಿದ್ದಾರೆ.