ಮಂಜೇಶ್ವರ: ಆದಿತ್ಯವಾರ ಬೆಳಿಗ್ಗೆ ಮಂಜೇಶ್ವರದ ಕೊಡ್ಳಮೊಗರು ದೈಗೋಳಿ ಎಂಬಲ್ಲಿ ಬೇಂಕ್ ದರೋಡೆಗೆತ್ನಿಸಿ ಸಿಕ್ಕಿಬಿದ್ದವರ ಪೈಕಿ ಒಬ್ಬಾತ 15ಕ್ಕೂ ಅಧಿಕ ಪ್ರಕರಣಗಳಲ್ಲಿ ಕರ್ನಾಟಕ ಪೋಲೀಸರಿಗೆ ಬೇಕಾಗಿದ್ದ ಕುಖ್ಯಾತ ಕಳ್ಳನೆಂದು ತಿಳಿದು ಬಂದಿದೆ. ಉಳ್ಳಾಲದ ಫೈಜಲ್ ಎಂಬಾತನ ವಿರುದ್ದ 15 ಕೇಸುಗಳಿದ್ದು, ಈತ ತಲೆಮರೆಸಿಕೊಂಡವನೆಂದು ಪೋಲೀಸರು ತಿಳಿಸಿದ್ದಾರೆ.
ನಂಬರ್ ಪ್ಲೇಟಿಲ್ಲದ ಕಾರಿನಲ್ಲಿ ಬಂದು ದೈಗೋಳಿಯ ಬರೋಡ ಬೇಂಕ್ ದರೋಡೆಗೆ ಸಿದ್ಧತೆ ಮಾಡುತ್ತಿದ್ದಾಗ ಭಾನುವಾರ ಮುಂಜಾನೆ ಪೈಜಲ್ ಮತ್ತು ತುಮಕೂರಿನ ಸೆಯ್ಯದ್ ಅಮಾನ್ ಎಂಬಿಬ್ಬರನ್ನು ಬಂಧಿಸಲಾಗಿತ್ತು. ಪೋಲೀಸರು ಬಂದು ಕಾರ್ಯಾಚರಣೆ ನಡೆಸಿದಾಗ ಇತರ ನಾಲ್ವರು ಓಡಿ ಪರಾರಿಯಾಗಿದ್ದು, ಈ ಪೈಕಿ ದರೋಡೆ ತಂಡದ ಮುಖ್ಯಸ್ಥನೂ ಒಳಗೊಂಡಿದ್ದಾನೆಂಬ ಮಾಹಿತಿ ಇದೆ. ನಾಗರಿಕರು ನೀಡಿದ ಸುಳಿವಿನ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣಾ ಪೋಲೀಸರು ಬಂದು, ನಾಗರಿಕ ಸಹಾಯದೊಂದಿಗೆ ಆರೋಪಿಗಳಿಬ್ಬರನ್ನು ಬಂಧಿಸಿದ್ದರು.
ಕಳ್ಳರು ಆಗಮಿಸಿದ ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಆದರೆ ಕಾರಿನ ಒಳಗಿಂದ ಕೇರಳ -ಕರ್ನಾಟಕದ ಕೆಲವು ನಕಲಿ ನಂಬರ್ ಪ್ಲೇಟ್ ಪತ್ತೆಯಾಗಿದೆ. ಅಲ್ಲದೇ ದರೋಡೆಗೆ ಬಳಸುವ ಗ್ಯಾಸ್ ಕಟ್ಟರ್, ಆಕ್ಸಿಜನ್ ಸಿಲಿಂಡರ್,,ಗ್ಲೌಸ್ ಮೊದಲಾದುದು ಪತ್ತೆಯಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸ, ವಿಚಾರಣೆಗಾಗಿ ಮರಳಿ ವಶಪಡಿಸುವುದಾಗಿ ಮಂಜೇಶ್ವರ ಎಸ್.ಐ ಅನೂಪ್ ತಿಳಿಸಿದ್ದಾರೆ. ಆರೋಪಿಗಳು ತನಿಖೆಯ ವೇಳೆ ನೀಡಿದ ಹೇಳಿಕೆಗಳಲ್ಲಿ ವೈರುದ್ಯಗಳಿವೆ. ಹಾಗೆಯೇ ಪರಾರಿಯಾದ ನಾಲ್ವರ ಕುರಿತು ಇನ್ನಷ್ಟು ಮಾಹಿತಿ ಸಿಗಬೇಕಿದೆ ಎಂದು ಎಸ್.ಐ.ತಿಳಿಸಿದ್ದಾರೆ.
ಬೇಂಕ್ ದರೋಡೆಗೆತ್ನಿಸಿರುವುದು ಕುಖ್ಯಾತರ ದರೋಡೆ ತಂಡವಾಗಿದ್ದು, ರಾತ್ರಿ ವೇಳೆ ಗಸ್ತು ಸಂಚಾರ,ಊರ್ಜಿತಗೊಳಿಸಲಾಗಿದೆ. ಆದರೆ ನಾಗರಿಕರು ಕೂಡಾ ಕಾಳಜಿಯಿಂದ ಸಹಕರಿಸಿದರೆ ಮಾತ್ರವೇ ಜಾಲಗಳನ್ನು ಪತ್ತೆ ಹಚ್ಚಲು ನೆರವಾಗುವುದೆಂದು ಅವರು ತಿಳಿಸಿದ್ದಾರೆ.