ಕಣಿಪುರ ಸುದ್ದಿಜಾಲ, ಉಪ್ಪಳ
ಎಡನೀರು ಶ್ರೀಗಳ ವಾಹನ ಆಕ್ರಮಣಗೈದ ಪ್ರಕರಣದಲ್ಲಿ ಪೋಲೀಸರು ಕಣ್ಕಟ್ಟಿನ ನಾಟಕವಾಡುತ್ತಿದ್ದು, ಆರೋಪಿಯನ್ನ ಪತ್ತೆ ಹಚ್ಚಿ ಶೀಘ್ರವೇ ಬಂಧಿಸದಿದ್ದರೆ ಜಿಲ್ಲಾ ಪೋಲೀಸ್ ವರಿಷ್ಠರ ಕಚೇರಿಗೆ ಮಾರ್ಚ್ ಸಹಿತ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು ತಿಳಿಸಿದರು.
ಎಡನೀರು ಶ್ರೀಗಳ ವಾಹನ ಆಕ್ರಮಣಗೈದ ಘಟನೆಯಲ್ಲಿ ಹಿಂದೂ ಸಮಾಜಕ್ಕೆ ಆಕ್ರೋಶವಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂಬ ಪ್ರಬಲ ಒತ್ತಾಯವಿದೆ. ಈ ಕುರಿತು ಈಗಾಗಲೇ ಹಿಂದೂ ಐಕ್ಯವೇದೌ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸದೇ, ಪತ್ತೆ ಹಚ್ಚಲು ತನಿಖೆ ನಡೆಸದೇ, ಸೈಕ್ಲಿಂಗ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ಪ್ರಶ್ನಿಸದೇ ಇರುವ ನಿರ್ಲಕ್ಷಿತ ಧೋರಣೆ ಖಂಡನೀಯ. ಆದ್ದರಿಂದ ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಅವರು ತಿಳಿಸಿದರು.
ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ನಿನ್ನೆ ಐಲದಲ್ಲಿ ಪ್ರತಿಭಟನಾ ಸಭೆ ನಡೆದು ಆರೋಪಿಗಳ ಬಂಧನಕ್ಕೆ ಒತ್ತಾಯಿಸಲಾಗಿದೆ. ಐಲ ಶ್ರೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ವಿ.ಹಿಂ.ಪ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಎಂ.ಬಿ ಪುರಾಣಿಕ್, ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜನ್ ಮುಳಿಯಾರ್, ವೀರಪ್ಪ ಅಂಬಾರ್, ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಗೋಪಾಲ ಶೆಟ್ಟಿ ಅರಿಬೈಲು,ಹರಿನಾಥ ಭಂಡಾರಿ ಮಾತಾಡಿದರು. ಐಲ ದೇವಳದ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಲಕ್ಷ್ಮಣ ಕುಂಬ್ಳೆ ಸ್ವಾಗತಿಸಿ, ವಸಂತ ಕುಮಾರ ಮಯ್ಯ ನಿರೂಪಿಸಿದರು.