*ಎಂ.ನಾ. ಚಂಬಲ್ತಿಮಾರ್
- ಅಜ್ಜ-ಅಜ್ಜಿಯ ದಾಂಪತ್ಯದ ಷಷ್ಠ್ಯಬ್ದಿ ಸಂಭ್ರಮಕ್ಕೆ ಮೊಮ್ಮಕ್ಕಳ ಗೃಹಪ್ರವೇಶೋತ್ಸವದ ಸಡಗರ..!
ಇಂಥದ್ದೊಂದು ಅಪರೂಪದ ಸಂಭ್ರಮಾಚರಣೆ ನಡೆದಿರುವುದು ಕಾಸರಗೋಡಿನ ಮಾನ್ಯದಲ್ಲಿ..
ಈ ಸಂಭ್ರಮದ ಸುದ್ದಿಯ ನೇಪಥ್ಯದಲ್ಲಿ 75 ವರ್ಷಗಳ ಹಿಂದೆಯೇ ಮಹಿಳೆಯೊಬ್ಬರು ಗಡಿನಾಡಲ್ಲಿ ಆರಂಭಿಸಿದ ಹೋಟೆಲ್ ಉದ್ಯಮದ ಸಾಹಸಗಾಥೆಯೂ ಇದೆ….!!
ಆ ಬೆವರಿನ ಪರಿಮಳದಿಂದಲೇ ಇಂದೀಗ ಇವರ ಸಂತಸ ಅರಳಿದೆ…!!
ಮಾನ್ಯ ಎಂದರೆ ಹೆಸರಿನಂತೆಯೇ ಮಾನ್ಯತೆಯ ನೆಲ. ಅದು ಸಾಂಸ್ಕೃತಿಕವಾಗಿ ಗಡಿನಾಡಿನ ಮಣ್ಣಿನ ಕಲೆ ಯಕ್ಷಗಾನವನ್ನು ಪೋಷಿಸುವ, ನೆಲಮೂಲದ ಕಲೆಯನ್ನು ಪೀಳಿಗೆಯಿಂದ ಪೀಳಿಗೆಗೆ ಕೈದಾಟಿಸುವ ಸಂಸ್ಕೃತಿಯ ಕಾವಲಿನ ನಾಡು..!
ಈ ನಾಡಿನಲ್ಲಿ ಆಗಿ ಹೋದ, ಗತಕಾಲದ ಪ್ರಮುಖರಲ್ಲಿ ಮಾನ್ಯ ರಾಮ ಎಂದರೆ ಸುಪ್ರಸಿದ್ಧರು. ಕೂಡ್ಳು ಮೇಳ ಮೆರೆದ ಗತಕಾಲದಲ್ಲಿ ಮಾನ್ಯ ರಾಮ ಆ ಮೇಳ ಎಂದಲ್ಲ, ಇಡೀ ತೆಂಕುತಿಟ್ಟಿನ ಬೆಂಕಿಕಿಡಿಯಂತೆ ರಾರಾಜಿಸಿದ ತಾರಾ ಕಲಾವಿದರು.
ಅವರಿಗೊಬ್ಬರು ಸೋದರಿಯಿದ್ದರು. ಹೆಸರು ನಾರಾಯಣಿ. ಅದು ಸ್ವಾತಂತ್ರ್ಯ ಪೂರ್ವದ ಕಾಲಘಟ್ಟ. ಎಲ್ಲೆಲ್ಲೂ ಬಡತನದ ತಾಂಡವದ ಕಾಲ.ಅಂಥಾ ದಿನಗಳಲ್ಲೇ ಮಾನ್ಯದಂಥ ಹಳ್ಳಿಯಲ್ಲಿ ನಾರಾಯಣಿಯಮ್ಮ ಮಡಲು ಹೆಣೆದ ಗುಡಿಸಲಿನಲ್ಲೊಂದು ಹೋಟೆಲ್ ಮಾಡಿದ್ದರು! ಇದುವೇ ಮಾನ್ಯದ ಮೊದಲ ಹೋಟೆಲ್. ಕಾಸರಗೋಡು ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಆರಂಭಿಸಿದ ಮೊದಲ ಹೋಟೆಲೂ ಇದೇ ಹೌದು.!!
ಈ ಹೋಟೆಲನ್ನು ಮುಂದೆ ನಾರಾಯಣಿಯಮ್ಮನ ಮಗ ಕುಂಞ್ಞಪ್ಪು ಮಣಿಯಾಣಿ ನೋಡುತ್ತಾ, ಅಭಿವೃದ್ಧಿಪಡಿಸುತ್ತಾರೆ. ಎಷ್ಟೇ ಮುಪ್ಪಾದರೂ ನಾರಾಯಣಿಯಮ್ಮ ಮಾತ್ರ ಹೋಟೆಲಿಗೆ ಬಾರದೇ ಇರುತ್ತಿರಲಿಲ್ಲ..ಕ್ರಮೇಣ ಅವರಿಗೆ ವಯಸ್ಸಾಗಿ 15ವರ್ಷಗಳ ಹಿಂದೆ ನಿಧನರಾಗುತ್ತಾರೆ.
ಈ ನಡುವೆ ಕುಂಞ್ಞಪ್ಪು ಮಣಿಯಾಣಿ 1964ರಲ್ಲಿ ವಿವಾಹವಾಗುತ್ತಾರೆ. ಇಬ್ಬರು ಪುತ್ರ, ಇಬ್ಬರು ಪುತ್ರಿಯರನ್ನು ಹೊಂದುತ್ತಾರೆ. ಇವರೆಲ್ಲರ ಬದುಕಿನ ಉನ್ನತಿಗೆ ಇದೇ ಹೋಟೆಲ್ ಉದ್ಯಮ ಆಸರೆಯಾಗುತ್ತದೆ. ಇಂಥ ಕುಂಞ್ಞಪ್ಪು ಮಣಿಯಾಣಿ-ರೋಹಿಣಿ ದಂಪತಿಯರ ದಾಂಪತ್ಯಕ್ಕೀಗ ಭರ್ತಿ 60ವರ್ಷದ ಷಷ್ಠ್ಯಬ್ದ ಸಂಭ್ರಮ.
ಅಂದು ನಾರಾಯಣಿಯಮ್ಮ ಆರಂಭಿಸಿದ ಹೋಟೆಲ್ ಈಗ ಮಾನ್ಯದ “ಕದಂಬ ಹೋಟೆಲ್” ಎಂದು ನಾಮಾಂಕಿತವಾಗಿ ಹಳ್ಳಿಯ ಗ್ರಾಮೀಣರೆಲ್ಲರ ಉದರ ಪೋಷಿಸುತ್ತದೆ. ಯಕ್ಷಗಾನ ಪ್ರಿಯರಾದಿ ಕಲಾವಿದರು ಯಾರೇ ಬರಲಿ ಮೊದಲು ಕಾಲೂರುವ ಜಾಗವೇ ಈ ಹೋಟೆಲ್. ಈಗ ಇದು ಕುಂಞ್ಞಪ್ಪು ಮಣಿಯಾಣಿಯವರ ಮಗ ರಾಮ.ಕೆ ಅವರ ಮಾಲಕತ್ವದಲ್ಲಿದೆ. ಸೋದರ ವಿಜಯಕುಮಾರ್ ಮಾನ್ಯ ಹೋಟೆಲ್ ನಡೆಸುತ್ತಾರೆ. ಕುಂಞ್ಞಪ್ಪು ಮಣಿಯಾಣಿ ಅವರಿಗೀಗ 85ರ ಹರೆಯ. ಆದರೂ ಅವರು ಕುಗ್ಗದ ಉತ್ಸಾಹದಿಂದ ಹೋಟೆಲಿಗೆ ಬಂದು ಕೂರುತ್ತಾರೆ. ನಾಡ ಜನತೆಯ ವರ್ತಮಾನಕ್ಕೆಲ್ಲ ಕಿವಿಯಾಗುತ್ತಾರೆ. ಈ ಹೋಟೆಲ್ ಊರಿನ ಜನರ ಉದರ ಪೋಷಿಸಿದಂತೆಯೇ ಇವರ ಕುಟುಂಬ ಪೊರೆದಿದೆ. ಮನೆ ಬೆಳಗಿಸಿ ಅಭ್ಯುದಯವನ್ನಿತ್ತಿದೆ..
ಈಗ ಕುಂಞ್ಞಪ್ಪು ಮಣಿಯಾಣಿಯವರ ಹಿರಿಯ ಪುತ್ರಿ ಅದಿತಿ ಎಸ್.ಮಣಿಯಾಣಿ ಅವರ ಮಕ್ಕಳು ರಂಜಿತ್, ರವೀಶ್ ಬಲಿತಿದ್ದಾರೆ. ವಿವಾಹಿತರಾದ ಈ ಮೊಮ್ಮಕ್ಕಳು ಅಜ್ಜ ಕೊಟ್ಟ ಜಾಗದಲ್ಲಿ, ಮಾವಂದಿರ ಮನೆಯಂಗಳದಲ್ಲೇ ನೂತನ ಮನೆ ಕಟ್ಟಿದ್ದಾರೆ. ನ.9ರಂದು ಮಾನ್ಯದ ಕಾರ್ಮಾರಿನಲ್ಲಿ ಪರಮವೈಭವದ ಸಂಭ್ರಮದಿಂದ “ಪರಂ” ಮನೆಯ ಗೃಹಪ್ರವೇಶೋತ್ಸವ ನಡೆದಿದೆ. ಇದೇ ಹೊತ್ತಲ್ಲಿ ಅಜ್ಜ- ಅಜ್ಜಿಯ ವೈವಾಹಿಕ ಬದುಕಿನ ಷಷ್ಠ್ಯಬ್ದ ಸಂಭ್ರಮವನ್ನಾಚರಿಸಿದ್ದಾರೆ. ಹಿರಿಯರ ಚರಣಕ್ಕೆರಗಿ ಆಶೀರ್ವಾದ ಪಡೆದಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರೂ ಚಿತ್ತೈಸಿ ಹರಸಿದ್ದಾರೆನ್ನುವುದು ವೈಶಿಷ್ಠ್ಯ..ಜತೆಗೆ ಕುಟುಂಬ,ಬಂಧು ಮಿತ್ರರಾದಿ ಸಾವಿರಾರು ಮಂದಿ ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ.
ನೂತನ ಮನೆ “ಪರಂ” ಗೃಹಪ್ರವೇಶದಲ್ಲಿ ಎಡನೀರು ಶ್ರೀಗಳ ಪಾದಪೂಜೆ
ಗೃಹಪ್ರವೇಶಕ್ಕೆ ಬಂದವರೆಲ್ಲರ ಮುಂದೆ ಕುಂಞ್ಞಪ್ಪು ಮಣಿಯಾಣಿ ದಂಪತಿಯರು ಮತ್ತೆ ಮದುವೆಯಾದ ನೂತನ ವಧೂವರರಂತೆ ಸಂಭ್ರಮಿಸಿದ್ದಾರೆ. ಎಲ್ಲರ ಹಾರೈಕೆಯ ಶುಭಸೇಸೆ ಪಡೆದಿದ್ದಾರೆ. ಹಳ್ಳಿಯ ಪುಟ್ಟ ಹೋಟೆಲಿನ ಬೆವರ ಪರಿಮಳದಲ್ಲಿ ಅರಳಿದ ಈ ಕುಟುಂಬ ಕಲೆ, ಸಂಸ್ಕಾರಗಳ ನೆರಳಲ್ಲಿ ರೂಪುಗೊಂಡಿದೆ.ಆದ್ದರಿಂದಲೇ ಆದರ್ಶಪ್ರಾಯ ಸಂಸ್ಕಾರದ ಕಾರ್ಯಕ್ರಮ ನಡೆಸಿದೆ..