- ವಿಮಾನನಿಲ್ದಾಣವೊಂದು ವಿಮಾನಗಳನ್ನು ಹಾರಾಡಿಸದೇ ಸ್ತಬ್ದವಾಗಿ ದಾರಿಯನ್ನು ದೇವರ ಆರಾಟುಪಥವನ್ನಾಗಿಸುವ ಪ್ರಪಂಚದ ಏಕೈಕ ಘಟನೆ..!
- ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಹಣೆಪಟ್ಟಿಗಳಿಂದ ಅಲಂಕೃತವಾದ ಗಜರಾಜನ ಮೇಲೆ ಬಲಿಮೂರ್ತಿಗಳ ಘನಗಾಂಭೀರ್ಯದ ಅಪೂರ್ವ ನೋಟ..!!
- ಶತಮಾನಗಳ ಹಿನ್ನೆಲೆಯುಳ್ಳ ತಿರುವನಂತಪುರ ಪದ್ಮನಾಭನ ಜಳಕದ ಪಯಣಕ್ಕೆ ಅಂತರಾಷ್ಟ್ರೀಯ ವಿಮಾನಗಳೇ ಹಾರಾಡದೇ ಸರಿದು ನಿಲ್ಲುತ್ತವೆ
ಕಣಿಪುರ ಸುದ್ದಿಜಾಲ (ನ.9)
ತಿರುವನಂತಪುರ: ಜಗತ್ಪ್ರಸಿದ್ಧ ತಿರುವನಂತಪುರ ಶ್ರೀಪದ್ಮನಾಭ ಸ್ವಾಮೀ ದೇವರ ಪೈಂಗುನ್ನಿ ಆರಾಟುತ್ಸವದ ಅಂಗವಾಗಿ ಇಂದು (ನ.9)ಸಂಜೆ 4ರಿಂದ ತಿರುವನಂತಪುರ ಅಂತರ್ರ್ ರಾಷ್ಟ್ರೀಯ ವಿಮಾನ ನಿಲ್ದಾಣವೇ ಸಂಪೂರ್ಣ ಸ್ಥಬ್ದವಾಗಿ, ಸರ್ಪಗಾವಲಿನ ಕಟ್ಟೆಚ್ಚರದಲ್ಲಿ ವಿಮಾನನಿಲ್ದಾಣವನ್ನೇ ದೇವರ ಪಥವನ್ನಾಗಿಸಿತು!
ಜಗತ್ತಿನಲ್ಲೇ ದೇವರ ಆರಾಟುತ್ಸವಕ್ಕಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೊಂದು ಭರ್ತಿ ಐದು ತಾಸು ವಿಮಾನ ಹಾರಾಡಿಸದೇ ಸ್ಥಬ್ಧವಾಗುವ ಏಕೈಕ ಘಟನೆ ಇದಾಗಿದೆ.
ತಿರುವನಂತಪುರ ಶ್ರೀಪದ್ಮನಾಭ ಸ್ವಾಮೀ ದೇಗುಲದಲ್ಲಿ ನಡೆಯುವ ವರ್ಷದ ಎರಡು ಉತ್ಸವಗಳ ಸಂದರ್ಭದಲ್ಲಿ ದೇವರ ಜಳಕಕ್ಕಾಗಿ ಆರಾಟು ಮೆರವಣಿಗೆ ನಡೆಯುತ್ತಿದೆ. ವಿಮಾನನಿಲ್ದಾಣದ ಒಳಗೆ ರನ್ ವೇ ದಾಟಿ, ಶಂಖಮುಖಂ ಕಡಲತೀರಕ್ಕೆ ತೆರಳಿ ದೇವರ ಆರಾಟು ಜಳಕ ಪೂರೈಸಿ ಬರುವುದಕ್ಕಾಗಿ ವರ್ಷಕ್ಕೆರಡು ಬಾರಿ ವಿಮಾನನಿಲ್ದಾಣವನ್ನೇ ಸ್ಥಬ್ದಗೊಳಿಸಿ, ವೈಮಾನಿಕ ಹಾರಾಟ ಸ್ಥಗಿತಗೊಳಿಸಲಾಗುತ್ತಿದೆ.
ಇಂದು ಸಂಜೆ 4ರಿಂದ ರಾತ್ರಿ 9ರ ತನಕ ವಿಮಾನಗಳ ಸಂಚಾರ ಸ್ಥಗಿತಗೊಳಿಸಿ, ನಿಲ್ದಾಣವನ್ನೇ ದೇವರ ಜಳಕಪಥವನ್ನಾಗಿಸಲಾಗಿದೆ. ಇದೇ ರೀತಿ ತಿರುವನಂತಪುರ ಮಹಾನಗರದಲ್ಲೂ ಸಾರಿಗೆ ಸಂಚಾರ ನಿಯಂತ್ರಣಗಳಿವೆ.
1935ರಲ್ಲಿ ತಿರುವನಂತಪುರದಲ್ಲಿ ಕೇರಳದ ಪ್ರಥಮ ವಿಮಾನ ನಿಲ್ದಾಣ ನಿರ್ಮಿಸುವಾಗ ಅದಕ್ಕಾಗಿ ದೇವರ ಆರಾಟು ಪಥದ ದಾರಿಯನ್ನೊಳಗೊಂಡ ಭೂಮಿಯನ್ನೇ ಗುರುತಿಸಲಾಗಿತ್ತು. ತಿರುವಾಂಕೂರು ರಾಜ ಶ್ರೀ ಚಿತ್ತಿರತಿರುನಾಳ್ ಅವರೇ ಮುತುವರ್ಜಿ ವಹಿಸಿ ವಿಮಾನನಿಲ್ದಾಣ ಸಾಕಾರಗೊಳಿಸಿದ್ದರು. ಈ ಸಂದರ್ಭ ವರ್ಷದ 363ದಿನ ಈ ಪಥ ಸಾರ್ವಜನಿಕರಿಗಾದರೆ 2ದಿನ ದೇವರ ಜಳಕಕ್ಕೆ ಮೀಸಲಿಡುವಂತೆ ಅವರು ಒಡಂಬಡಿಕೆ ಮಾಡಿದ್ದರು. ಈ ದಾರಿಯಾಗಿ ತಿರುವನಂತಪುರ ಶ್ರೀಪದ್ಮನಾಭ ದೇವರ ಆರಾಟು ಪಯಣಕ್ಕೆ ಶತಮಾನಗಳ ಇತಿಹಾಸವೇ ಇರುವುದರಿಂದ ಇಂದಿಗೂ ಇದು ಪಾಲಿಸಲ್ಪಡುತ್ತದೆ. ಪ್ರಸ್ತುತ ವಿಮಾನ ನಿಲ್ದಾಣ ಅದಾನಿ ಗ್ರೂಪ್ ನಿಯಂತ್ರಣದಲ್ಲಿದ್ದರೂ ಪಾರಂಪರಿಕವಾದ ದೇವರ ಪಥಕ್ಕೆ ಯಾವುದೇ ಅಡ್ಡಿ ಇಲ್ಲದೇ ಶತಮಾನದ ಪರಂಪರೆ ಮುಂದುವರಿಯುತ್ತದೆ.