ಕಣಿಪುರ ಸುದ್ದಿಜಾಲ,( ನ.8):
ಬೆಂಗಳೂರು ಗಾಯನ ಸಮಾಜ ನೀಡುವ ‘ಶ್ರೀ ಕಲಾಜ್ಯೋತಿ ಪ್ರಶಸ್ತಿ’ಗೆ ವಿದುಷಿ ಶಂಕರಿಮೂರ್ತಿ , ಬಾಳಿಲ ಆಯ್ಕೆಯಾಗಿದ್ದಾರೆ.
ಕೆ. ಆರ್ ರಸ್ತೆಯ ಗಾಯನ ಸಮಾಜ ಸಭಾಂಗಣದಲ್ಲಿ ನವೆಂಬರ್ 10 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸುವರು
ಇದೇ ಸಂದರ್ಭದಲ್ಲಿ ವೀಣಾವಾದಕ ವಿದ್ವಾನ್ ಆರ್. ಕೆ ಶಂಕರ್, ಮೃದಂಗ ವಾದಕ ವಿದ್ವಾನ್ ಎನ್. ವಾಸುದೇವ, ಪಿಟೀಲು ವಾದಕ ವಿದ್ವಾನ್ ಕೊಳ್ಳೇಗಾಲ ಗೋಪಾಲಕೃಷ್ಣ ಅವರಿಗೂ ಶ್ರೀಕಲಾ ಜ್ಯೋತಿ ಪ್ರಶಸ್ತಿ ನೀಡಲಾಗುವುದು. 54ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಎಲ್ಲ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ವಿದ್ವಾನ್ ಡಾ ಎಸ್ . ಸಿ. ಶರ್ಮ ಅವರಿಗೆ ‘ಸಂಗೀತ ಕಲಾರತ್ನ’ ಪ್ರಶಸ್ತಿ, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಅವರಿಗೆ ‘ಕರ್ನಾಟಕ ಕಲಾಚಾರ್ಯ’ ಪ್ರಶಸ್ತಿ ಪ್ರದಾನ ಮಾಡುವರು.
ಇದೇ ಸಂದರ್ಭದಲ್ಲಿ ಎಂ. ಎ . ಮೀರಾ ಅವರಿಗೆ ‘ಸ್ವರ ಭೂಷಿಣಿ’ ಪ್ರಶಸ್ತಿ, ಶ್ರೀಮತಿ ಗೀತಾ ಸೀತಾರಾಮ ಅವರಿಗೆ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು
ಕಲಾಜ್ಯೋತಿ ಪ್ರಶಸ್ತಿಗೆ ಭಾಜನರಾಗುತ್ತಿರುವ ಶಂಕರಿಮೂರ್ತಿ ಬಾಳಿಲ ಅವರು ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಜೇನುಮೂಲೆಯ
ವಯೋಲಿನಿಸ್ಟ್ ಕೃಷ್ಣ ಭಟ್ಟರ ಪುತ್ರಿ. ವಿವಾಹಾನಂತರ ಬಾಳಿಲದಲ್ಲಿ ನೆಲೆಸಿ ಸಂಗೀತವನ್ನೇ ಆರಾಧಿಸಿದ ಇವರಿಗೀಗ ಬೆಂಗಳೂರು ಗಾಯನಸಮಾಜದ ಅಂಗೀಕಾರವೊಲಿದಿದೆ
. ಈ ಹಿನ್ನೆಲೆಯಲ್ಲಿ “ಕಣಿಪುರ”ದ ಜತೆ ಮಾತನಾಡಿದ ಅವರು “ನಾನೆಂದೂ ಪ್ರಶಸ್ತಿ, ಪಾರಿತೋಷಕಗಳನ್ನು ಬಯಸಿದವಳೇ ಅಲ್ಲ. ಈಗ ಸಂತೋಷ ಸಹಜ. ಇದು ನನ್ನ ತಂದೆ, ಪತಿ ಸತ್ಯಮೂರ್ತಿ ಬಾಳಿಲ ಸಹಿತ ಹಿರಿಯರೆಲ್ಲರ ಪ್ರೋತ್ಸಾಹ,ಆಶೀರ್ವಾದದ ಫಲ. ಮಹಾನಗರಗಳಲ್ಲಿ ನೆಲೆಸಿ, ತಾರಾಪೋಷಾಕು ತೊಟ್ಟು, ಪ್ರಚಾರ,ಪ್ರಶಸ್ತಿಗಳಿಂದ ಮೆರೆಯುವ ಯಾವೊಂದು ಹಂಬಲವೂ ನನಗಿರಲಿಲ್ಲ. ಅನೇಕರು ನನ್ನಲ್ಲಿ ಮಹಾನಗರ ಸೇರುವಂತೆ ಒತ್ತಾಯಿಸಿದ್ದರು. ಆದರೆ ನನಗೆ ನನ್ನೂರೇ ವಾಸಿ ಎನಿಸಿತು. ಅದೇ ಸಂತೃಪ್ತಿ ನೀಡಿತು. ಅರ್ಹತೆಗೆ ಯೋಗವೂ ಕೂಡಿದರೆ ಯಾವ ಕಾಡೊಳಗೆ ಇದ್ದರೂ ಅಂಗೀಕಾರ ಒಲಿದು ಬರುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರು ಸಂಗೀತದಲ್ಲಿ ಸ್ನಾತ್ತಕೋತ್ತರ ಪದವೀಧರೆಯಾದ ಶಂಕರಿಮೂರ್ತಿ ಬಾಳಿಲ.
17ವರ್ಷಗಳಿಂದ ಶ್ರುತಿಲಯ ಸಂಗೀತ ಶಾಲೆ ಬಾಳಿಲ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸುಳ್ಯ, ಮಂಗಳೂರಲ್ಲಿ ಶಾಖೆ ತೆರೆದು ಶಿಕ್ಷಣ ನೀಡುತ್ತಿದ್ದ ಇವರು ಕೋರೋನದ ಬಳಿಕ ಆನ್ಲೈನ್ ಶಿಕ್ಷಣ ನೀಡುತ್ತಿದ್ದಾರೆ. ಸಂಗೀತ ಕುಟುಂಬದ ಕುಡಿಯಾದ ಇವರ ಪುತ್ರ ಕೀರ್ತನ್ ಬಾಳಿಲ “ದಾಮಾಯಣ” ಸಿನಿಮಕ್ಕೆ ಸಂಗೀತ ನೀಡಿ ಗಮನ ಸೆಳೆದಿದ್ದಾನೆ. ಶಂಕರಿಮೂರ್ತಿಯವರು ಪ್ರತಿಭೆ, ಯೋಗ್ಯತೆ, ಅರ್ಹತೆಗಳಿದ್ದರೂ ದೊಡ್ಡ,ದೊಡ್ಡ ಅವಕಾಶಗಳ ಬೆನ್ನೇರಿ ನಡೆಯದ ಕಲಾವಿದೆ. ಅವರು ಬಾಳಿಲದಂಥ ಗ್ರಾಮದ ತೋಟ, ಕಾಡುಗಳ ನಡುವೆ ಸಂಗೀತ ಸುಧೆ ಹರಿಸಿದವರು. ಸಂಗೀತ ಅವರಿಗೆ ಆರಾಧನೆ, ಅಂತರಂಗದ ಪೂಜೆ…