ಕಣಿಪುರ ಸುದ್ದಿಜಾಲ, ಬದಿಯಡ್ಕ (ನ.8
- ಕುಂಬಳೆ ಸೀಮೆಯ ಸಮೃದ್ಧಿಯ ಧ್ಯೇಯದೊಂದಿಗೆ 2025 ಮೇ.12ರಂದು ನೆಕ್ರಾಜೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಾಲಯದಲ್ಲಿ ಧನ್ವಂತರಿ ಪುತ್ರಕಾಮೇಷ್ಠಿ ಯಾಗ ನಡೆಯಲಿದೆ
- ಕಾಸರಗೋಡು ತಾಲೂಕಿನಲ್ಲಿ ವರ್ಷಂಪ್ರತಿ ಕರ್ಕಾಟಕ ಮಾಸದಲ್ಲಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರು ನಡೆಸುತ್ತಾ ಬಂದ ರಾಮಾಯಣ ಮಾಸಾಚರಣೆಯ ದ್ವಾದಶ ವರ್ಷಾಚರಣೆಯ ಹಿನ್ನೆಲೆಯಲ್ಲಿ ವಿ.ಹಿಂ.ಪ ಮತ್ತು ಸಾಂದೀಪನಿ ಚಾರಿಟೇಬಲ್ ಟ್ರಸ್ಟ್ ಮತ್ತು ನೆಕ್ರಾಜೆ ಶ್ರೀ ಸಂತಾನಗೋಪಾಲಕೃಷ್ಣ ದೇವಾಲಯದ ಸಹಕಾರದೊಂದಿಗೆ ಕಶೆಕೋಡಿ ಸೂರ್ಯನಾರಾಯಣ ಭಟ್ ಕಲ್ಲಡ್ಕ ಇವರ ಕರ್ಮಿಕತ್ವದಲ್ಲಿ ಯಾಗ ಸಂಪನ್ನವಾಗಲಿದೆ.
ಶ್ರೀಧನ್ವಂತರಿ ಸಹಿತ ಪುತ್ರಕಾಮೇಷ್ಠಿ ಯಾಗ ಗಡಿನಾಡಿನಲ್ಲಿ ಮೊದಲ ಬಾರಿಗೆ ನಡೆಯುತ್ತಿದ್ದು, ಆಮಂತ್ರಣ ಪತ್ರಿಕೆಯನ್ನು ನೆಕ್ರಾಜೆ ದೇವಾಲಯದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಪ್ರಾರ್ಥಿಸಿ ಬಿಡುಗಡೆ ಮಾಡಿದರು.
ಸತ್ಸಂತಾನ ಪ್ರಾಪ್ತಿಯೇ ಯಾಗದ ಉದ್ದೇಶ. ಬುದ್ಧಿವಂತ, ಮೇಧಾವಿ ಶಿಶುವನ್ನು ಪಡೆಯಬೇಕೆಂಬುದು ಪ್ರತಿಯೊಬ್ಬರ ಬಯಕೆ. ಹೀಗಾಗಬೇಕಿದ್ದರೆ ಗರ್ಭಾದಾನಕ್ಕೂ, ಗರ್ಭಾವಸ್ಥೆಗೂ ಪ್ರಾಚೀನತೆಯಿಂದಲೇ ಬಂದ ಕೆಲವು ಆರೋಗ್ಯ ಸಂಸ್ಕಾರಗಳಿರಬೇಕು.ಈ ದೃಷ್ಟಿಯಲ್ಲಿ ಕೇವಲ ಪುತ್ರಕಾಮೇಷ್ಟಿ ಯಾಗವಲ್ಲದೇ ಅದರ ಜೊತೆ ಆರೋಗ್ಯ ಸಾಮರ್ಥ್ಯಕ್ಕೆ ಬೇಕಾದ ಯೋಗ -ಆಯುರ್ವೇದಗಳನ್ನೂ ಅಳವಡಿಸಿ ಯಾಗವನ್ನು ನಡೆಸಲಾಗುತ್ತಿದೆ.
ಕಾಸರಗೋಡಿನಲ್ಲಿ ಈ ಹಿಂದೆ ಪಳ್ಳತ್ತಡ್ಕ, ಕೂಡ್ಳು ಎಂಬಲ್ಲಿ ಪುತ್ರಕಾಮೇಷ್ಟಿ ಯಾಗ ಜರುಗಿದ್ದು, ಪಾಲ್ಗೊಂಡವರ ಪೈಕಿ 70ಶೇ.ದಂಪತಿಯರಿಗೆ ಪುತ್ರೋತ್ಸವ ಪ್ರಾಪ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಹೆಚ್ಚಿನ ಫಲಿತಾಂಶಕ್ಕಾಗಿ ಆಯುರ್ವೇದ ಸಹಿತವಾದ ವೈದ್ಯರ ನಿರ್ದೇಶನುಸಾರ ಯಾಗ ಜರಗಲಿದೆ.
ನೆಕ್ರಾಜೆ ದೇವಾಲಯದಲ್ಲಿ ನಡೆದ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆಯ ಸರಳ ಸಮಾರಂಭದಲ್ಲಿ ಯಾಗ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬ್ಳೆ ಅಧ್ಯಕ್ಷತೆ ವಹಿಸಿದರು. ಸಮಿತಿಯ ಮಹಾಪೋಷಕ ಮಧುಸೂಧನ್ ಆಯರ್, ಉದ್ಯಮಿ ಶಿವಶಂಕರ ನೆಕ್ರಾಜೆ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ಯ, ಗಣೇಶ ವತ್ಸ ಮುಳ್ಳೇರಿಯ, ಕ್ಷೇತ್ರದ ಅಧ್ಯಕ್ಷ ವಿ.ಡಿ.ಶೆಟ್ಟಿ, ಉಪಾಧ್ಯಕ್ಷ ರಾಮಚಂದ್ರ ಬಲ್ಲಾಳ್, ನಿತ್ಯಾನಂದ ನೆಲ್ಲಿಸ್ಥಳ, ಬಾಲಕೃಷ್ಣ ನೀರ್ಚಾಲ್ ಮೊದಲಾದವರು ಭಾಗವಹಿಸಿದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪ್ರಾಸ್ತಾವಿಕ ಮಾತನಾಡಿದರು.