ಬೆಂಗಳೂರು: ಕನ್ನಡದ ಹಿರಿಯ ಸಿನಿಮ ಪತ್ರಕರ್ತ, ಖ್ಯಾತ ಅಂಕಣಗಾರ ಗಣೇಶ್ ಕಾಸರಗೋಡು ಅವರಿಗೆ ಕರ್ನಾಟಕ ರಾಜ್ಯ ಸುವರ್ಣ ಸಂಭ್ರಮಾಚರಣೆಯಂಗವಾಗಿ ನೀಡಲಾಗುವ ವಿಶ್ವದ ಹೆಮ್ಮೆಯ ಕನ್ನಡಿಗ -2024 ಪ್ರಶಸ್ತಿ ಘೋಷಣೆಯಾಗಿದೆ.
ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ವತಿಯಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಿಂದ ಗಣೇಶ್ ಅವರನ್ನಾಯ್ದುಕೊಳ್ಳಲಾಗಿದೆ.
ನ.27ರಂದು ಬೆಂಗಳೂರಿನ ಜೇಸಿ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.
ಸಿನಿಮಾ ಪತ್ರಕರ್ತರಾಗಿಯೇ ವೃತ್ತಿಬದುಕು ಆರಂಭಿಸಿದ ಗಣೇಶ್ ಅವರು ಮೂಲತಃ ಕಾಸರಗೋಡಿನವರು. ಕರ್ಮವೀರ ವಾರಪತ್ರಿಕೆ, ಸಂಯುಕ್ತ ಕರ್ನಾಟಕದ ಚಿತ್ರಸೌರಭ ಪುರವಣಿ ಮೂಲಕ ಪ್ರಸಿದ್ದಿಗೆ ಬಂದ ಅವರು ವಿಜಯಕರ್ನಾಟಕದ ಸಿನಿವಿಜಯ ಪುರವಣಿಯ ವೈಶಿಷ್ಟ್ಯದಿಂದ ಖ್ಯಾತರಾದರು. ಸಿನಿಯಾನದ ಮಧುರ ಮೆಲುಕುಗಳನ್ನು ಮತ್ತು ಹಿರಿಯ ಕಲಾವಿದರ ಬದುಕಿನ ಗಾಥೆಗಳನ್ನು ಚದುರಿದ ಚಿತ್ರಗಳೆಂದು ಪೋಣಿಸಿದ ಅವರು ನುಡಿಚಿತ್ರಗಳಿಂದ ಖ್ಯಾತರಾದವರು. ಹುಟ್ಟೂರು ಕಾಸರಗೋಡಿನ ಸಂಜೆ ಪತ್ರಿಕೆ ಕಾರವಲ್ ಗೂ “ಪರದೆ” ಎಂಬ ಅಂಕಣ ಬರೆಯುತ್ತಿರುವ ಅವರು ಸಿನಿಮಾ ಬರವಣಿಗೆಗೆ ಮಾನವೀಯತೆಯ ಸಾಹಿತ್ಯ ಸ್ಪರ್ಶ ಇತ್ತವರು.