- ಅತ್ಯುತ್ತರ ಕೇರಳದ ಏಕೈಕ ಶಂಕರ ಪೀಠವಾದ ಶ್ರೀಮದೆಡನೀರು ಮಠಾಧೀಶ ಸಚ್ಛಿದಾನಂದ ಭಾರತಿ ಶ್ರೀಪಾದಂಗಳ ವಾಹನ ತಡೆದು ಆಕ್ರಮಿಸಿದ ಘಟನೆ ನಾಡಿನಾದ್ಯಂತ ಆಸ್ತಿಕರ ಪ್ರತಿಭಟನೆ, ಖಂಡನಾ ಸುರಿಮಳೆಗೆ ಕಾರಣವಾದರೂ ಪೋಲೀಸರು ಇನ್ನೂ ಒಂದೇ ಒಂದು ಕೇಸನ್ನು ದಾಖಲಿಸಿಲ್ಲ ಯಾಕೆ??
ಇದು ಇಡೀ ಪ್ರಕರಣದಲ್ಲಿ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆ.
ಪ್ರಕರಣವನ್ನು ಬಿಗಡಾಯಿಸುವುದು ಬೇಡ ಎಂದು ಸ್ವತಃ ಸ್ವಾಮೀಜಿಯವರೇ ಮನ್ನಿಸಿದ ಬಳಿಕ ಕೇಸು ಯಾಕೆ ಎಂಬುದು ಪೋಲೀಸ್ ನಿಲುವು. ಆದರೆ ನಾಡಿನಾದ್ಯಂತ ಭಕ್ತರು, ಮಠದ ಅಭಿಮಾನಿಗಳು, ವಿವಿಧ ಸಂಘಟನೆಗಳೆಲ್ಲ ಸ್ವಾಮೀಜಿ ವಾಹನ ತಡೆದಿರುವುದನ್ನು ಖಂಡಿಸಿ, ಆರೋಪಿಯನ್ನು ಬಂಧಿಸಲು ಒತ್ತಾಯಿಸುತ್ತಲೇ ಇದ್ದರೂ ಈ ವಿಚಾರದಲ್ಲಿ ಪೋಲೀಸರಂತೂ ಕದಲುತ್ತಿಲ್ಲ ಯಾಕೆ? ಎಂಬುದೇ ಸೋಜಿಗ!
ನ.4ರಂದು ಬೋವಿಕಾನ ಸಮೀಪ ಇರಿಯಣ್ಣಿಯಲ್ಲಿ ರೋಡ್ ಸೈಕ್ಲಿಂಗ್ ಅಸೋಸಿಯೇಷನ್ ಕೇರಳ ರಾಜ್ಯ ಘಟಕದ ಸೈಕ್ಲಿಂಗ್ ಸ್ಪರ್ಧಾ ಕಾರ್ಯಕ್ರಮವಿತ್ತು. ತನ್ನಿಮಿತ್ತ ಬೋವಿಕಾನ -ಕಾನತ್ತೂರು ಮಾರ್ಗದಲ್ಲಿ ಪೋಲೀಸ್ ಅನುಮತಿ ಪಡೆಯದೇ ರಸ್ತೆ ನಿಯಂತ್ರಣವನ್ನು ಅಸೋಸಿಯೇಷನ್ ಕೈಗೆತ್ತಿಕೊಂಡಿತ್ತು. ಸಾರ್ವಜನಿಕ ಸಂಚಾರಕ್ಕೆ ತಡೆಯೊಡ್ಡಿತ್ತು. ಇದನ್ನರಿಯದೇ ಕಾರ್ಯಕ್ರಮವೊಂದಕ್ಕೆ ಈ ದಾರಿಯಲ್ಲಿ ಹೋಗುವಾಗ ಎಡನೀರು ಶ್ರೀಗಳ ವಾಹನ ತಡೆಯಲಾಗಿತ್ತು. ಇದೇ ದಾರಿಯಲ್ಲಿ ಮರಳುವಾಗಲೂ ಇರಿಯಣ್ಣಿಯಲ್ಲಿ ವಾಹನ ತಡೆದು, ವಾಹನದ ಫೋಟೋ ತೆಗೆದಿದ್ದರು. ವಾಹನ ಬಾವಿಕೆರೆ ತಲುಪುವಾಗ ಕಾರಿನಲ್ಲಿ ಸ್ವಾಮೀಜಿಗಳಿರುವುದನ್ನೂ ಕಂಡೂ ವಾಹನ ತಡೆಯಲೆತ್ನಿಸಿ ಆಕ್ರಮಿಸಲಾಗಿದೆ. ಅಂದರೆ ಮೊದಲು ಫೋಟೋ ತೆಗೆದವರು ಚಿತ್ರ ರವಾನಿಸಿ ಇಲ್ಲಿದ್ದವರಿಗೆ ಸಂದೇಶ ನೀಡಿದ್ದಾರಾ??
ಶಂಕರಾಚಾರ್ಯ ಪೀಠದ ರಾಷ್ಟ್ರೀಯ ಗೌರವದ ಎಡನೀರು ಮಠದ ಶ್ರೀಗಳನ್ನು ಈ ರೀತಿ ಅಗೌರವಿಸಿ ಆಕ್ರಮಿಸಲು ಸೈಕ್ಲಿಂಗ್ ಅಸೋಸಿಯೇಷನ್ ಗೆ ಅಧಿಕಾರ ಕೊಟ್ಟವರಾರೆಂಬುದೇ ಶ್ರೀಮಠದ ಅಭಿಮಾನಿಗಳ ಪ್ರಶ್ನೆ. ಪ್ರಸ್ತುತ ಪ್ರಕರಣದಲ್ಲಿ ಸ್ವಾಮೀಜಿಯವರ ವಾಹನ ತಡೆದು ಆಕ್ರಮಿಸಿರುವುದು ಒಂದನೇ ಅಪರಾಧವಾದರೆ ಇಲಾಖೆಯ ಅನುಮತಿ ಪಡೆಯದೇ, ಮುಂಚಿತವಾಗಿ ನಾಗರಿಕ ಸಮಾಜಕ್ಕೆ ತಿಳಿಸದೇ ರಸ್ತೆ ಸಂಚಾರವನ್ನೇ ನಿಯಂತ್ರಿಸುವ ಅಧಿಕಾರದ ಸ್ವಾತಂತ್ರ್ಯ ಪುಂಡರ ಕೈಗೆ ಕೊಟ್ಟದ್ದು ಎರಡನೇ ಅಪರಾಧ. ಈ ಹಿನ್ನೆಲೆಯಲ್ಲಿ ಪೋಲೀಸರೇಕೆ ಸ್ವಯಂ ಪ್ರಚೋದನೆಯಿಂದ ಸೈಕ್ಲಿಂಗ್ ಅಸೋಸಿಯೇಷನ್ ವಿರುದ್ದ ಕೇಸು ದಾಖಲಿಸಲಿಲ್ಲ??
ದಿನ ಬೆಳಗಾದರೆ ಅನುಮತಿ ರಹಿತ ವಿಚಾರಗಳ ಹೆಸರಲ್ಲಿ ನೂರಾರು ಕೇಸು ದಾಖಲಿಸಿ, ದಂಡ ವಸೂಲಿಗಿಳಿಯುವ ಪೋಲೀಸರು ಈ ವಿಷಯದಲ್ಲೇಕೆ ಕಣ್ಣಾಮುಚ್ಚಾಲೆ ಆಡುತ್ತಾರೆಂಬುದೇ ಜನರಿಗರಿಯದ ವಿಷಯ.
ಸ್ವಾಮೀಜಿ ವಾಹನದ ಮೇಲಣ ಆಕ್ರಮಣದಂತೆಯೇ ಇದು ಕೂಡಾ ನಿರ್ಲಕ್ಷಿತ ವಿಚಾರಗಳೇನಲ್ಲ. ಇಡೀ ಪ್ರಕರಣವನ್ನೇ ಸ್ವಾಮೀಜಿ ಮನ್ನಿಸಿದ್ದಾರೆಂಬ ಕಾರಣದಿಂದ ಕ್ಷುಲ್ಲಕ ಘಟನೆಯನ್ನಾಗಿಸುವುದಕ್ಕೆ ಪೋಲೀಸರಿಗೇಕೆ ಆಸಕ್ತಿ? ಇದು ಸಾರ್ವಜನಿಕ ಕಳಕಳಿಯ ಪ್ರಶ್ನೆ. ಈ ಪ್ರಶ್ನೆಯೊಂದಿಗೆ ನ್ಯಾಯಾಲಯಕ್ಕೊಂದು ಮನವಿ ನೀಡಿದರೆ ಸಾಕು, ಸ್ವಾಮೀಜಿಯವರ ವಾಹನ ತಡೆದ ಘಟನೆಯಲ್ಲಿ ನಡೆದದ್ದೇನೆಂದು ತಾನೇ ಬೆಳಕಿಗೆ ಬರಬಹುದು.
ಶಾಂತಿ, ಸಂಯಮದಿಂದ ಬದುಕುವ ಊರಿನ ನೆಮ್ಮದಿ ಕೆಡಿಸಿ, ಯುದ್ಧ ಸಾರುವುದಲ್ಲ ಬದಲು ಗಡಿನಾಡು ಕಾಸರಗೋಡಿನ ಸರ್ವರ ಅಭಿಮಾನದ ಭಾವೈಕ್ಯತೆಯ ಮಠದ ಶ್ರೀಗಳಿಗೆ ತನ್ನೂರಲ್ಲೇ ಇಂಥ ಅನುಭವ ಆಗಿರುವುದು ಮಠಕ್ಕಲ್ಲ, ಇಡೀ ಕಾಸರಗೋಡಿಗೆ ಅವಮಾನ ತಾನೇ..?
ಆದ್ದರಿಂದ ಗುರುತರವಾದ ಅಕ್ಷಮ್ಯ ಅಪರಾಧ ಎಸಗಿದ ವ್ಯಕ್ತಿ ಯಾರೆಂಬುದನ್ನು ಸೈಕ್ಲಿಂಗ್ ಅಸೋಸಿಯೇಷನ್ ಕಾನೂನಿನ ಮುಂದಕ್ಕೊಡ್ಡಬೇಕು. ಇಲ್ಲವೇ ಶ್ರೀಮಠದ ಸ್ವಾಮೀಜಿಗಳವರಲ್ಲಿ ಕ್ಷಮೆ ಯಾಚಿಸಬೇಕು. ಏಕೆಂದರೆ ಕಾಷಾಯ ತೊಟ್ಟ ಯತಿಗಳನ್ನು, ತನ್ನ ಮಠದ ಲಾಂಛನ ಸಹಿತವಾದ ಕಾರಿನಲ್ಲಿ ಹೋಗುವಾಗ ಗೌರವಿಸುವುದು ಬಿಟ್ಟು ಆಕ್ರಮಿಸುವುದೆಂದರೆ ಆ ಮನಸ್ಸಿನೊಳಗೆ ಎಂಥ ಅಪಾಯಕಾರಿ ಕೋಮುಧ್ವೇಷ ಇರಬೇಡ..??
ಒಂದೂರಿನ ನಿಯಂತ್ರಣವನ್ನೆ ಕೈಗೊಂಡು, ತಾವು ಸಮ್ಮತಿಸಿದವರಷ್ಟೇ ಹೋದರೆ ಸಾಕೆಂದು ನಿರ್ಣಯಿಸಲು, ಹೋದವರನ್ನು ಆಕ್ರಮಿಸಲು ಇವರು ಮುಂದಾಗುತ್ತಾರೆ ಎಂದಾದರೆ ನಾವೆಲ್ಲಿ ಕಾಶ್ಮೀದಲ್ಲಿದ್ದೇವಾ???
ಇದು ಸಾತ್ವಿಕರಾದ ಮಠದ ಅಭಿಮಾನಿಗಳನ್ನು ಕಾಡುವ, ಅವರು ಕೇಳುವ ಪ್ರಶ್ನೆ. ಇಂಥಾ ಘಟನೆಗಳು ಇನ್ನೊಮ್ಮೆಯೂ ಆವರ್ತಿಸಬಾರದು ಎಂದು ಬಯಸುವಂತೆಯೇ, ಇಂಥ ಘಟನೆಗಳು ನಡೆಸಿದವರಲ್ಲೂ ಕಾನೂನು ಭಯ ಉಂಟಾಗಿಸುವ ಕಾಯಕಗಳೆಲ್ಲಿದೆ??
ಖಂಡನೆ,ಪ್ರತಿಭಟನೆಗಳ ಬೀದಿ ಧ್ಷೇಷಕ್ಕಿಂತ ಸಂಘಟನೆಗಳು ಖುದ್ದು ಜಿಲ್ಲಾ ಪೋಲೀಸ್ ವರಿಷ್ಠರನ್ನೇ ಪ್ರಶ್ನಿಸಿ, ಅಹವಾಲು ಸಲ್ಲಿಸಬೇಕು. ಘನ ಪದಂಪರೆಯ ಗೌರವದ ಪೀಠಕ್ಕಾದ ಅಗೌರವವನ್ನು ಮನವಿಯಿಂದ ನ್ಯಾಯಾಲಯದಲ್ಲೂ ಪ್ರಶ್ನಿಸಬೇಕು. ಇಂಥ ಕೆಲಸ ನಡೆದರೆ ಇಲಾಖೆ ಮೈ ಕೊಡವಿ ಏಳುತ್ತದೆ ಎಂದು ನಿರೀಕ್ಷಿಸಬಹುದು.