150
ಕಣಿಪುರ ಸುದ್ದಿಜಾಲ, ಮಾನ್ಯ:
- ಮಾನ್ಯ ಅಯ್ಯಪ್ಪ ಮಂದಿರದಿಂದ ಕಳವುಗೈದ ಶ್ರೀ ಅಯ್ಯಪ್ಪ ಸ್ವಾಮಿಯ ರಜತ ಉಬ್ಬುಶಿಲ್ಪ ವಿಗ್ರಹದ ಫ್ರೇಮ್ ಒಡೆದು ಹಾಕಿ ಉಪೇಕ್ಷಿಸಿರುವುದು ಪತ್ತೆಯಾಗಿದೆ.
- ಮಾನ್ಯದ ಕಾರ್ಮಾರಿನ ರಸ್ತೆ ಬದಿಯ ಪೊದೆಯೊಂದರಲ್ಲಿ ಗಾಜಿನ ತುಂಡುಗಳು ಇಂದು ಮಧ್ಯಾಹ್ನದ ವೇಳೆ ಮಕ್ಕಳಿಗೆ ಕಂಡುಬಂದಿದ್ದು, ಇನ್ನಷ್ಟು ಶೋಧಿಸಿದಾಗ ಅಯ್ಯಪ್ಪ ಮಂದಿರದ ಪ್ರತಿಷ್ಠೆಯ ಫ್ರೇಮ್ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂದಿರದಿಂದ ಸುಮಾರು 6ಲಕ್ಷ ರೂ ಬೆಲೆಬಾಳುವ ಬೆಳ್ಳಿಯಲ್ಲಿ ಮೆತ್ತಿಸಿದ ಅಯ್ಯಪ್ಪ ವಿಗ್ರಹ ಕದ್ದೊಯ್ಯವ ದಾರಿಮಧ್ಯೆ ಅದರ ಫ್ರೇಮ್, ಗಾಜು ಒಡೆದು ಉಪೇಕ್ಷಿಸಿ, ಬೆಳ್ಳಿಶಿಲ್ಪವನ್ನು ಕದ್ದೊಯ್ಯಲಾಗಿದೆ.
ಪೋಲೀಸ್ ಮತ್ತು ನಾಗರಿಕರು ಪೊದೆ ಕಾಡು ಪರಿಶೋಧಿಸುತ್ತಿರುವುದು
ರಜತ ಶಿಲ್ಪದ ಗಾಜು ಒಡೆದು ಹಾಕಿರುವುದು
ಪ್ರಸ್ತುತ ಘಟನೆಯ ಮಾಹಿತಿ ಸಿಗುವಂತೆಯೇ ನಾಗರಿಕರು, ಬದಿಯಡ್ಕ ಪೋಲೀಸರು ಸ್ಥಳಕ್ಕಾಗಮಿಸಿ ಪರಿಸರದ ಪೊದೆ ಕಾಡುಗಳಲ್ಲಿ ಇನ್ನಷ್ಟು ಹುಡುಕಾಟ ನಡೆಸಿದರು. ಕಳ್ಳತನಗೈದ ಪ್ರಕರಣದಲ್ಲಿ ಈ ಬೆಳವಣಿಗೆ ಮಹತ್ತರ ಸಾಕ್ಷ್ಯದ ಸುಳಿವಾಗಿ ಪರಿವರ್ತಿತವಾಗಲಿದೆ. ಒಡೆದ ಗಾಜು, ಫ್ರೇಮುಗಳಿಂದ ಕಳ್ಳರ ಬೆರಳಚ್ಚು ಸಿಗಲಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಇದು ನೆರವಾಗಲಿದೆ.
ನ.3,4ರಂದು ಎಡನೀರು,ನೆಲ್ಲಿಕಟ್ಟೆ,ಮಾನ್ಯ,ಪೊಯಿನಾಚಿ ಸಹಿತ 6ಆರಾಧನಾಲಯಗಳಲ್ಲಿ ಕಳ್ಳತನ ನಡೆದಿದೆ. ಈ ಕುರಿತು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಅವರು ಸ್ಥಳಕ್ಕಾಗಮಿಸಿದ್ದಾರೆ.