- ದೀಪಾವಳಿಯ ಬೆನ್ನಲ್ಲೇ ಮೇಳಗಳು ಹೊರಡುವುದು ವಾಡಿಕೆ. ಕಾರ್ತಿಕ ಮಾಸದಲ್ಲಿ ಕರಾವಳಿಯ ತುಳುನಾಡಲ್ಲಿ ಬೆಳಕಿನ ಸೇವೆಗೆ ನಾಂದಿ. ಯಕ್ಷಗಾನ ಪ್ರೇಮಿಗಳ ಪಾಲಿಗೆ ಇನ್ನು ಆರು ತಿಂಗಳು ಯಕ್ಷಗಾನದ ಹಬ್ಬ. ಕರಾವಳಿಯ ಉದ್ದಕ್ಕೂ ಇನ್ನು ಆರು ತಿಂಗಳು ಮುಸ್ಸಂಜೆಯಾಗುತ್ತಿದ್ದಂತೆಯೇ ಬಯಲಾಟಗಳ ಅನುರಣನ ಸಹಜ. ಕಾಸರಗೋಡಿನಿಂದ ಉ.ಕ ತನಕ ದೈನಂದಿನ ಬಯಲಾಟಗಳಿಲ್ಲದ ಊರೇ ಇಲ್ಲ ಎನ್ನುವಂಥ ಸಂಭ್ರಮ. ಹೊರನಾಡುಗಳಿಂದ ಕರಾವಳಿಗೆ ಬರುವವರಿಗೆ ಇದೊಂದು ಸಾಂಸ್ಕೃತಿಕ ಕಲಾ ಪ್ರವಾಸೋದ್ಯಮದ ಋತು…
ದೀಪಾವಳಿಯ ಬೆನ್ನಲ್ಲೇ ನವಂಬರಿನಲ್ಲಿ ಮೇಳ ಹೊರಡುವುದು ವಾಡಿಕೆ. ಯಕ್ಷಗಾನದ ವೃತ್ತಿಪರ ಕಲಾವಿದರಿಗಿನ್ನು ಮೇಳವೇ ಮನೆಯಾಗುವ ತಿರುಗಾಟ..
ಈಗ ಮೇಳ ತಿರುಗಾಟದಲ್ಲಿ ಕಾಲಮಿತಿಯ ಪರಿಷ್ಕರಣೆಗಳು ಬಂದು ಕಲಾವಿದರಿಗೆಲ್ಲ ಅನುಕೂಲವಾದರೂ, ಹಿಂದೆ ಇಡೀ ರಾತ್ರಿಯ ಆಟದ ಕಾಲದಲ್ಲಿ ಕಲಾವಿದರಿಗೆ ಮೇಳವೇ ಮನೆಯೂ, ಬದುಕೂ ಆಗಿತ್ತು. ಆಗ ಆರು ತಿಂಗಳು ಮನೆ ಬಿಟ್ಟಿರುತ್ತಿದ್ದ ಕಲಾವಿದರೂ ಇದ್ದರು!
ವರ್ಷಂಪ್ರತಿ ಮೇಳ ಹೊರಡುವಾಗ ಯಾವ ಮೇಳಕ್ಕೆ ಯಾವುದು ಹೊಸ ಪ್ರಸಂಗ, ಯಾರೆಲ್ಲಾ ಕಲಾವಿದರೆಂಬುದು ಆಟದ ವಲಯದ ಸಹಜ ಕುತೂಹಲವಾಗಿತ್ತು. ಆದರೀಗ ಟೆಂಟ್ ಕಳಚಿ ಆಟಗಳೆಲ್ಲ ಬಯಲಾಟವಾಗಿರುವುದರಿಂದ ಪ್ರಸಂಗ ಕೌತುಕ, ಕಲಾವಿದರ ತಾರಾ ವರ್ಚಸ್ಸಿನ ಬೇಡಿಕೆ ಟೆಂಟ್ ಕಾಲದಂತಿಲ್ಲ..
2024-25ರ ಈ ಬಾರಿ ಧರ್ಮಸ್ಥಳ ಮೇಳ ಇತರೆಲ್ಲ ಮೇಳಗಳಿಗಿಂತ ಮೊದಲು ಸೇವೆಯಾಟದೊಂದಿಗೆ ಹೊಸ ಯಕ್ಷ ಋತುವಿಗೆ ನಾಂದಿ ಹಾಡಿದೆ. ನ.3ರಂದು ಕ್ಷೇತ್ರದಲ್ಲಿ ಸೇವೆ ಆರಂಭಿಸಿ, ನ20ರ ತನಕ ಸೇವೆ ಪೂರೈಸಿ 21ರಂದು ತಿರುಗಾಟಕ್ಕೆ ಹೊರಡಲಿದೆ. ಈ ಬಾರಿಯ ತಿರುಗಾಟದಿಂದ ಧರ್ಮಸ್ಥಳ ಮೇಳದಲ್ಲಿ ನುರಿತ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು, ಮಾಧವ ಪಾಟಾಳಿ ನೀರ್ಚಾಲು ಗೈರಾದ ಕಲಾವಿದರು. ಧರ್ಮಸ್ಥಳ ಮೇಳಕ್ಕೆ ಕ್ಷೇತ್ರಮಹಾತ್ಮೆಯೇ ಅತ್ಯಧಿಕ ಬೇಡಿಕೆಯ ಪ್ರಸಂಗ. ಉಳಿದಂತೆ ಸೇವಾಕರ್ತರ ಅಪೇಕ್ಷೆಯ ವಾಡಿಕೆಯ ಪ್ರಸಂಗಗಳ ಹೊರತು ಈ ಬಾರಿ ನೂತನ ‘ವಿಶ್ವವಂದ್ಯ ವಿನಾಯಕ, ಗಂಧರ್ವ ಕನ್ಯೆ”ಎಂಬೆರಡು ಪ್ರಸಂಗಗಳನ್ನು ಪ್ರದರ್ಶನಕ್ಕೆ ಆಯ್ದುಕೊಂಡಿದೆ.
ಭಾಗವತ ಪಟ್ಲ ಸತೀಶ ಶೆಟ್ಟಿ ಅವರ ಸಾರಥ್ಯದ ಪಾವಂಜೆ ಮೇಳ ನ.13ಕ್ಕೆ ಸೇವೆಯೊಂದಿಗೆ ತಿರುಗಾಟ ಆರಂಭಿಸಲಿದೆ. ವರ್ಷಂಪ್ರತಿ ನೂತನ ಪ್ರಸಂಗಗಳನ್ನು ನೀಡುವ ಮೇಳಕ್ಕೆ ಈ ಬಾರಿ ಭಾರತ ವರ್ಷಿಣಿ ಹೊಸ ಪ್ರಸಂಗ. ದಿ. ಸಿದ್ದಕಟ್ಟೆ ವಿಶ್ವನಾಥ ಶೆಟ್ಟರ ಪುತ್ರ ಭಾಗವತ ಭರತ್ ರಾಜ್ ಶೆಟ್ಟಿ ಅವರು ಭಾಗವತರಾಗಿ ಮೇಳ ತಿರುಗಾಟಕ್ಕೆ ಪಾವಂಜೆ ಮೇಳದಲ್ಲಿ ನಾಂದಿ ಹಾಡುವುದು ಈ ಬಾರಿಯ ವೈಶಿಷ್ಟ್ಯ.
ಡಾ.ಟಿ.ಶಾಂಭಟ್ ಸಾರಥ್ಯದ ಹನುಮಗಿರಿ ಮೇಳ ಈ ಬಾರಿ ನ.20ರಂದು ಸೇವೆಯೊಂದಿಗೆ ತಿರುಗಾಟಕ್ಕೆ ಹೊರಡಲಿದೆ. ವರ್ಷಂಪ್ರತಿ ಸೂಪರ್ ಹಿಟ್ ಪ್ರಸಂಗಗಳನ್ನು ನೀಡುವ ಮೇಳ ಈ ಬಾರಿ ಸಾಕೇತ ಸಾಮ್ರಾಜ್ಞಿ ಎಂಬ ಪೌರಾಣಿಕ ಪ್ರಸಂಗವನ್ನು ಆವಿಷ್ಕರಿಸಿಕೊಂಡಿದೆ. ತೆಂಕುತಿಟ್ಟಿನ ಯುವ, ಜನಪ್ರಿಯ ಕಲಾವಿದರ ಗಡಣವೇ ಹೊಂದಿದ ಹನುಮಗಿರಿ ಮೇಳ ಕಳೆದ ಬಾರಿ 185ರಷ್ಟು ದಾಖಲೆಯ ಆಟಗಳನ್ನು ಪ್ರದರ್ಶಿಸಿತ್ತು.
ಹೊಸ ಮೇಳಗಳ ಪೈಕಿ ಗೆಜ್ಜೆಗಿರಿ ಮೇಳ ತಿರುಗಾಟ ಅವಧಿ ಪೂರ್ಣ ಪ್ರದರ್ಶನಾವಕಾಶ ಪಡೆಯುತ್ತಿದ್ದು, ಈ ಬಾರಿ ನ.22ರಂದು ಸೇವೆಯೊಂದಿಗೆ ಹೊರಡಲಿದೆ. ತುಳು ಪ್ರಸಂಗಗಳಿಗೆ ಆದ್ಯತೆಯಿರುವ ಮೇಳದಲ್ಲಿ ಕುಲದೈವೊ ಬ್ರಹ್ಮ, ಕಾಲ ಕಲ್ಜಿಗ, ಎಣ್ಮೂರ ಮುಗೇರ ಸತ್ಯೊಲು ನೂತನ ಪ್ರಸಂಗಗಳಾಗಿವೆ.
ಕಟೀಲು ದೇವಳದಿಂದ ಹೊರಡುವ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ನ.25ರಂದು ಹೊರಡಲಿದ್ದು, ಈ ಬಾರಿ ಹೊಸ ಕಲಾವಿದರ ಸೇರ್ಪಡೆಯೊಂದಿಗೆ ಹೊರಡಲಿದೆ. ಉಳಿದಂತೆ ಬಪ್ಪನಾಡು, ಸಸಿಹಿತ್ಲು, ಬೆಂಕಿನಾಥೇಶ್ವರ, ಬಾಚಕೆರೆ ಮೊದಲಾದ ಮೇಳಗಳು ನ.ಕೊನೆಯ ವಾರ ಹೊರಡಲಿದೆ. ಹರಿಕೆ ಸೇವೆಯಾಟಗಳನ್ನಾಡುವ ಕಟೀಲು, ಧರ್ಮಸ್ಥಳದ ಹೊರತಾದ ಮೇಳಗಳಿಗೆ ಆಟ ಆಯೋಜಿಸುವ ಸಂಘಟಕರೇ ಆಧಾರ. ತಾರಾ ಮೌಲ್ಯದ ಪ್ರಸಿದ್ಧ ಮೇಳಗಳಿಗೆ 150ಕ್ಕೂ ಮಿಕ್ಕು ಆಟಗಳು ಸಿಕ್ಕರೆ ಇತ್ತೀಚಿನ ವರ್ಷಗಳಲ್ಲಿ ಅರೆಕಾಲಿಕ ಮೇಳಗಳಿಗೆ ಆಟದ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ತೆಂಕು ಮತ್ತು ಬಡಗುತಿಟ್ಟಿನಲ್ಲಿ ಸುಮಾರು 40ರಷ್ಟು ಪೂರ್ಣಾವಧಿ ಮೇಳಗಳಿದ್ದು, 1ಸಾವಿರದಷ್ಟು ಕಲಾವಿದರು ನಿತ್ಯ ಯಕ್ಷಗಾನ ರಂಗಭೂಮಿಯನ್ನೇ ಅನ್ನದ ಬಟ್ಟಲನ್ನಾಗಿಸಿಕೊಂಡಿರುವ ಇಂಥ ವೃತ್ತಿರಂಗಭೂಮಿಯ ತಿರುಗಾಟ ಬಹುಶಃ ದೇಶದಲ್ಲೇ ಮತ್ತೊಂದೆಡೆ ಇಲ್ಲ.
ಕರಾವಳಿ ಪ್ರದೇಶದ ಸಮೃದ್ಧತೆ, ಸಾಂಸ್ಕೃತಿಕ ವೈಶಿಷ್ಠ್ಯಗಳಿಗೆಲ್ಲ ದೀಪಾವಳಿಯ ಬೆನ್ನಲ್ಲೇ ನಾಂದಿಯಾಗುವುದರಿಂದ ಇನ್ನು ಆರು ತಿಂಗಳ ಋತುವನ್ನು ಕರಾವಳಿಯ ಪ್ರವಾಸೋದ್ಯಮ ಋತುವನ್ನಾಗಿಸಿ ಪ್ರತ್ಯೇಕ ಪ್ಯಾಕೇಜ್ ನೀಡಬಹುದು. ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಕೈ ಜೋಡಿಸಿ ಹೀಗೊಂದು ಯೋಜನೆ ರೂಪಿಸಿದರೆ ಆಟಗಳಿಲ್ಲದೇ ಬಸವಳಿಯುವ ಅರೆಕಾಲಿಕ ಮೇಳಕ್ಕೂ ಪೋಷಣೆಯ ಪುನಶ್ಚೇತನ ಸಿಕ್ಕಂತಾಗುತ್ತದೆ. ಕರ್ನಾಟಕದ ಬೇರೆಡೆ ನಡೆಯುವಂತಹ ಉತ್ಸವಗಳನ್ನು ಕರಾವಳಿಯಲ್ಲಿ ಆಯೋಜಿಸಿ, ಅದರೊಂದಿಗೆ ಪ್ರವಾಸಿಗರನ್ನೂ ಆಕರ್ಷಿಸಿದರೆ ಈ ಮೂಲಕ ನೆಲದ ಕಲೆಗಳ ಉದ್ಯಮಕ್ಕೂ ಪುನಶ್ಚೇತನ ನೀಡಬಹುದಾಗಿದೆ.