ಬದಿಯಡ್ಕ: ನಾಡಿನ ಶಾಂತಿ ಸಮಾಧಾನವನ್ನು ಹಾಳುಗೆಡಹುವಲ್ಲಿ ಕಾರಣವಾದ ಸಮಾಜ ವಿದ್ರೋಹಿಗಳ ಗುಂಪನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸ್ ಇಲಾಖೆಯು ನಿರ್ಲಕ್ಷ್ಯವನ್ನು ತೋರುತ್ತಿದೆ. ದೇಶದಾದ್ಯಂತ ಗೌರವಿಸಲ್ಪಡುವ ಕೇರಳದ ಏಕೈಕ ಶಂಕರಾಚಾರ್ಯ ಪೀಠವಾದ ಎಡನೀರು ಮಠದ ಯತಿಗಳಿಗೆ ಕಾಸರಗೋಡು ಜಿಲ್ಲೆಯಲ್ಲಿ ಆದ ಅನ್ಯಾಯವನ್ನು ಇಡೀ ಹಿಂದೂಸಮಾಜವು ಪ್ರತಿಭಟಿಸುತ್ತದೆ ಎಂದು ಪರಿವಾರ ಸಂಘಟನೆಗಳ ಮುಖಂಡ ಸುನಿಲ್ ಪಿ.ಆರ್. ಹೇಳಿದರು.
ಎಡನೀರು ಶ್ರೀಗಳ ಕಾರಿಗೆ ಹಾನಿಗೈದವರನ್ನು ಬಂಧಿಸಬೇಕೆಂದು ಆಗ್ರಹಿಸಿ ವಿಶ್ವಹಿಂದೂಪರಿಷತ್ ನೇತೃತ್ವದಲ್ಲಿ ಬದಿಯಡ್ಕದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಂದೂ ಸಂಘಟನಾ ಮುಖಂಡರಾದ ಸಂಕಪ್ಪ ಭಂಡಾರಿ, ಸುಧಾಮ ಗೋಸಾಡ, ಹರಿಪ್ರಸಾದ ರೈಪುತ್ರಕ್ಕಳ, ಮಂಜುನಾಥ ಮಾನ್ಯ, ಸುನಿಲ್ ಕಿನ್ನಿಮಾಣಿ, ಪರಿವಾರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ಗಣೇಶ್ ಮಾವಿನಕಟ್ಟೆ ವಂದಿಸಿದರು. ಬದಿಯಡ್ಕ ಮೇಲಿನ ಪೇಟೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆ ಬಸ್ಸುತಂಗುದಾಣದಲ್ಲಿ ಸಮಾಪನಗೊಂಡಿತು.
ಪೆರಡಾಲ ದೇವಳದಲ್ಲಿ ಪ್ರಾರ್ಥನೆ
ಮಾನ್ಯ, ನೆಲ್ಲಿಕಟ್ಟೆ ಎಡನೀರು ಪರಿಸರದ ದೇವಸ್ಥಾನ, ಮಂದಿರಗಳಿಂದ ಕಳವು ಹಾಗೂ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಸಂಚರಿಸುತ್ತಿದ್ದ ವಾಹನವನ್ನು ಬೋವಿಕ್ಕಾನ ಬಾವಿಕೆರೆ ಬಳಿ ಕಿಡಿಗೇಡಿಗಳು ತಡೆಯೊಡ್ಡಿ ದಾಳಿ ನಡೆಸಿದ ಹಿನ್ನಲೆಯಲ್ಲಿ ಸಮಾಜಘಾತುಕ ಶಕ್ತಿಗಳಿಗೆ ತಕ್ಕಶಿಕ್ಷೆಯಾಗಬೇಕೆಂದು ಶ್ರೀ ಉದನೇಶ್ವರ ದೇವಸ್ಥಾನ ಪೆರಡಾಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕ ಶ್ರೀ ಕೃಷ್ಣ ಪ್ರಸಾದ ಅವರು ಪ್ರಾರ್ಥಿಸಿದರು. ದೇವಸ್ಥಾನದ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಕ್ಲಬ್ ಗಳ ಸದಸ್ಯರು ಹಾಗೂ ಭಕ್ತಜನರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.