ಕಣಿಪುರ ಸುದ್ದಿಜಾಲ, ಬೋವಿಕಾನ (ನ.5)
- ಅವಿಚ್ಛಿನ್ನ ಶಂಕರಾಚಾರ್ಯ ಪರಂಪರೆಯ ಶ್ರೀ ಎಡನೀರು ಪೀಠವೆಂದರೆ ಅದು ಭಾರತದ ಹಿಂದೂ ಹೃದಯದ ಅಭಿಮಾನ. ಅಲ್ಲಿನ ಸ್ವಾಮೀಜಿ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರು ಸಂಚರಿಸಿದ ವಾಹನವನ್ನು ತಡೆಯುವುದು ಮತ್ತು ಸಂಚರಿಸುವಾಗಲೇ ಕಾಷಾಯ ಕಂಡು ಆಕ್ರಮಿಸುವುದೆಂದರೆ ಯಾವ ಕಾರಣಕ್ಕೂ ಅದೊಂದು ಕ್ಷುಲ್ಲಕ ವಿಚಾರವಲ್ಲ. ಆದರೆ ಪ್ರಕರಣದಲ್ಲಿ ಪ್ರತಿಭಟಿಸುವ ಹಿಂದೂ ಸಮಾಜದ ಪ್ರತಿಭಟನೆಯನ್ನೇ ಹಿಂತೆಗಿಸಲು ಯತ್ನಿಸುವ ಪೋಲೀಸ್ ಇಲಾಖೆ ಕೇಸರಿ ತೊಟ್ಟ ಸ್ವಾಮೀಜಿಯನ್ನು ಆಕ್ರಮಿಸಿದಾತನನ್ನು ಕೇಸು ದಾಖಲಿಸಿ ಬಂಧಿಸದೇ, ರಕ್ಷಿಸಲು ಪ್ರಯತ್ನಿಸುವುದು ಅತ್ಯಂತ ಶೋಚನೀಯ ಮತ್ತು ಆಘಾತಕಾರಿ ಬೆಳವಣಿಗೆ ಎಂದು ಆರ್. ಎಸ್.ಎಸ್. ಕಾಸರಗೋಡು ಜಿಲ್ಲಾ ಕಾರ್ಯವಾಹ್ ಪವಿತ್ರನ್ ಅಭಿಪ್ರಾಯಪಟ್ಟರು.
ಎಡನೀರು ಸ್ವಾಮೀಜಿ ಸಂಚರಿಸಿದ ವಾಹನವನ್ನು ಆದಿತ್ಯವಾರ ಬೋವಿಕಾನ ಬಳಿಯ ಬಾವಿಕೆರೆಯಲ್ಲಿ ಆಕ್ರಮಿಸಿದ ಘಟನೆ ಖಂಡಿಸಿ ಹಿಂದೂ ಐಕ್ಯ ವೇದಿಕೆ ನೇತೃತ್ವದಲ್ಲಿ ಸಂಘಪರಿವಾರ ಮತ್ತು ಹಿಂದೂ ಸಮಾಜದ ಸಾರಥ್ಯದಲ್ಲಿ ನಡೆದ ಖಂಡನಾ ಸಭೆಯಲ್ಲವರು ಮಾತನಾಡುತ್ತ ಈ ಅಭಿಪ್ರಾಯ ಪ್ರಕಟಿಸಿದರು.
ಎಡನೀರು ಶ್ರೀಮಠ ಎಂದರೆ ಹಿಂದೂಗಳ ಅಭಿಮಾನದ ಮಠ. ಆದರೆ ಅದು ಮತೀಯ ಸಾಮರಸ್ಯದ ರಾಷ್ಟ್ರೀಯ ಪ್ರತೀಕ. ಅಂಥಾ ಸ್ವಾಮೀಜಿಗಳ ವಾಹನ ಆಕ್ರಮಣ ಕ್ಷುಲ್ಲಕ ಘಟನೆಯಲ್ಲ. ಕಾಷಾಯ ತೊಟ್ಟ ಸ್ವಾಮೀಜಿ ವಾಹನ ಆಕ್ರಮಿಸಬೇಕೆಂದೆ ಮಾಡಿದ ದುಷ್ಕೃತ್ಯ. ಇಂಥ ಘಟನೆ ನಡೆದೂ ಪೋಲೀಸರು ಕೇಸು ದಾಖಲಿಸದೇ, ಆರೋಪಿಯನ್ನು ಸಂರಕ್ಷಿಸುವ ನಿಲುವು ತೋರುತ್ತಾರೆಂದರೆ ಕೇರಳದಲ್ಲಿ ಕಾಷಾಯ ವಿರೋಧಿ ಚಟುವಟಿಕೆಗೆ ಆಡಳಿತವೇ ಬೆಂಬಲ ನೀಡುತ್ತಿದೆ ಎಂದಲ್ಲವೇ ಅರ್ಥ ?ಎಂದು ಪ್ರಶ್ನಿಸಿದ ಅವರು ಇಂಥಾ ಘಟನೆಗೆ ತಿರುಗೇಟು ನೀಡಲು ಹಿಂದೂಗಳಿಗೂ ಗೊತ್ತಿದೆ ಎಚ್ಚರ ಇರಲಿ ಎಂದು ತಾಕೀತು ನೀಡಿದರು.
ಬೋವಿಕಾನ ದಲ್ಲಿ ಬೃಹತ್ ನಾಮಜಪ ಪ್ರತಿಭಟನೆ
ಎಡನೀರು ಶ್ರೀಗಳ ಮೇಲಣ ನಿಂದೆ, ವಾಹನ ಆಕ್ರಮಣ ಖಂಡಿಸಿ ಹಿಂದೂ ಐಕ್ಯ ವೇದಿ ಕರೆಯಂತೆ ಜಿಲ್ಲೆಯ ಸಂಘ ಪರಿವಾರ ಸಂಘಟನೆಗಳ ಪ್ರತಿನಿಧಿಗಳ ನೇತೃತ್ವದಲ್ಲಿ ನ.5ರಂದು ಸಂಜೆ ಪ್ರತಿಭಟನಾ ಜಾಥ ನಡೆಯಿತು. ರಾಮ-ಕೃಷ್ಣ ನಾಮ ಜಪ ಉಚ್ಛಾರಣೆಯೊಂದಿಗೆ ಶಾಂತರೀತಿಯಲ್ಲಿ ನಡೆದ ಮೆರವಣಿಗೆಯಲ್ಲಿ ಎಡನೀರು ಮಠ, ಸ್ವಾಮೀಜಿ ಅಭಿಮಾನಿಗಳಾದ ನೂರಾರು ಮಂದಿ ಸಂಯಮದಿಂದ ಪಾಲ್ಗೊಂಡರು. ಮೆರವಣಿಗೆಯಲ್ಲಿ ಯಾವುದೇ ಧಿಕ್ಕಾರ ಪ್ರವೃತ್ತಿಗಳ ರೋಷಾವೇಷ ಇರಲಿಲ್ಲ. ಉದ್ವಿಗ್ನಕಾರಿ ಘೋಷಣೆ ಮೊಳಗಿಲ್ಲ. ನಾಮಜಪದೊಂದಿಗೆ ನಡೆದ ಮೆರವಣಿಗೆಯಲ್ಲಿ ಪೋಲೀಸರೂ ಹೆಜ್ಜೆ ಹಾಕಿದರು.
ಹಿಂದೂ ಐಕ್ಯವೇದಿಕೆಯ ಜಿಲ್ಲಾಧ್ಯಕ್ಷ ಶಾಜಿ ಎಂ.ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ಷುಲ್ಲಕ ಕಾರಣಗಳಿದ್ದರೂ, ಎದ್ದದ್ದಕ್ಕೂ ಕೂತದ್ದಕ್ಕೂ ಸಂಘ ಪರಿವಾರದ ಮೇಲೆ ಕೇಸು ದಾಖಲಿಸುವ ಪೋಲೀಸರು ಈ ಪ್ರಕರಣದಲ್ಲಿ ಆರೋಪಿಯನ್ನೇ ಗೊತ್ತಿಲ್ಲ ಎಂದು ಕೊಡೆ ಹಿಡಿದು ರಕ್ಷಿಸುತ್ತಿರುವುದು ನಾಡಿನ ಸಾಮರಸ್ಯಕ್ಕೆ ಕನ್ನಡಿ ಹಿಡಿಯುತ್ತಿದೆ. ಆರೋಪಿಯನ್ನು ಪತ್ತೆ ಹಚ್ಚಿ ಕೇಸು ಹಾಕಿ ಬಂಧಿಸದಿದ್ದರೆ ಆಂದೋಲನದ ರೂಪ ಬದಲಾಗಲಿದೆ ಎಂದವರು ಎಚ್ಚರಿಸಿದರು.
ಮೆರವಣಿಗೆಯ ಬಳಿಕ ಬೋವಿಕಾನ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಸ್ವಾಗತ ಕೋರಿದ ಸಂಯೋಜಕ , ಹಿಂದೂ ಐಕ್ಯ ವೇದಿಕೆ ಜಿಲ್ಲಾ ಪ್ರ.ಕಾರ್ಯದರ್ಶಿ ರಾಜನ್ ಮುಳಿಯಾರ್ ಮಾತನಾಡಿ ಎಡನೀರು ಶ್ರೀಗಳ ವಾಹನ ಆಕ್ರಮಣವೆಂದರೆ ನಮ್ಮ ನಾಡಿನ ಹಿಂದುತ್ವದ ಮೇಲಣ ಆಕ್ರಮಣ. ಪೋಲೀಸ್ ಇಲಾಖೆ ಈ ಘಟನೆಯನ್ನು ಲಘುವಾಗಿ ಚಿತ್ರಿಸುವುದರ ಹಿಂದೆ ಕೇಸರೀ ವಿರೋಧಿ ನೀತಿಯ ಬೆಂಬಲ ಸ್ಪಷ್ಟವಾಗುತ್ತಿದೆ. ಎಡನೀರು ಮಠ ಮತ್ತು ಸ್ವಾಮೀಜಿಗಳ ಪರವಾಗಿ ಮಾತಾಡಲು ಇಲ್ಲಿ ಹಿಂದೂ ಸಮಾಜವಿದೆ, ಎಚ್ಚರವಿರಲಿಲ ಎಂದರು.
ಸಂಚಾರ ನಿಯಂತ್ರಣವನ್ನು ಕಾಷಾಯ ವಿರೋಧಿಗಳಿಗೆ ಒಪ್ಪಿಸಿದ್ದಾರು?
ಅವಿಚ್ಛಿನ್ನ ಶಂಕರಾಚಾರ್ಯ ಪರಂಪರೆಯ ಎಡನೀರು ಮಠದ ಸ್ವಾಮೀಜಿ ಎಂದರೆ ದೇಶವೇ ಗೌರವಿಸುವ ಪೀಠ. ಅಂಥ ಶ್ರೀಗಳ ಸಂಚಾರಕ್ಕೆ ಅಡ್ಡಿಯೊಡ್ಡಿ, ಅವರ ವಾಹನ ಆಕ್ರಮಿಸಿದ ಕ್ರಿಮಿಯೊಬ್ಬನ ಸಂರಕ್ಷಣೆಗೆ ಪೋಲೀಸರೇ ಮುಂದಾಗಿದ್ದಾರೆಂದರೆ ಈ ಘಟನೆಯ ಹಿಂದೆ ನಿಗೂಢತೆ ಇದೆ. ಇಡೀ ರಸ್ತೆಯ ಸಂಚಾರಸ್ವಾತಂತ್ರ್ಯವನ್ನು
ಪೋಲೀಸರಿಗೆ ತಿಳಿಯದೇ, ಕಾಷಾಯ ಕಂಡವರನ್ನಾಗದವರಿಗೆ ಒಪ್ಪಿಸಿದ್ಯಾರು? ಈ ಕುರಿತು ತನಿಖೆಯಾಗಿ, ದುಷ್ಕರ್ಮಿಯನ್ನು ಬಂಧಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಅಭಿಪ್ರಾಯಪಟ್ಟರು.
ಪ್ರಸ್ತುತ ಘಟನೆಯಲ್ಲಿ ಪೋಲೀಸರ ಅಸಡ್ಡೆ ಮತ್ತು ಹಿಂದೂವಿರೋಧ ನೀತಿಯನ್ನು ಪ್ರಶ್ನಿಸಿದ ಅವರು ಪೋಲೀಸರು ಪ್ರಾಮಾಣಿಕವಾಗಿ ಕೇಸು ಕೈಗೊಂಡು ಆರೋಪಿಯನ್ನು ಬಂಧಿಸದೇ ಇದ್ದರೆ ಇಂಥದೇ ಕೃತ್ಯದ ತಿರುಗೇಟು ಎದುರಿಸಬೇಕಾದೀತು. ಹಿಂದೂ ಸಮಾಜವೇನೂ ಕೈಗೆ ಬಳೆತೊಟ್ಟು ಕುಳಿತಿಲ್ಲ ಎಂದರು.
ಜಿಲ್ಲಾ ಸಂಘಚಾಲಕ ಪ್ರಭಾಕರನ್ ಮಾಸ್ತರ್, ವಿ.ಹಿಂ ಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ವಿವಿಧ ದೇವಸ್ಥಾನ ಮುಖಂಡರು, ಜಾತಿ ಮುಖಂಡರು, ತರವಾಡು ಮುಖ್ಯಸ್ಥರು ಸಹಿತ ಸಂಘಪರಿವಾರ ಪ್ರಮುಖರು ಪಾಲ್ಗೊಂಡರು.ಗೋವಿಂದ ಭಟ್ ಬಳ್ಳಮೂಲೆ ಪ್ರಾರ್ಥನೆ ಹಾಡಿದರು.