ಕಣಿಪುರ ಸುದ್ದಿಜಾಲ(ನ.5)
- ಕಾಸರಗೋಡು: ಎಡನೀರು ಸ್ವಾಮೀಜಿ ಸಂಚರಿಸುತ್ತಿದ್ದ ಕಾರನ್ನು ತಡೆದು, ಆಕ್ರಮಿಸಿ, ಬೆದರಿಸಿದ ಘಟನೆಗೆ ಸಂಬಂಧಿಸಿ ಸ್ವಾಮೀಜಿಯವರು ಘಟನೆಯನ್ನು ಕ್ಷಮಿಸಿ, ಮನ್ನಿಸಿರುವುದಾಗಿ ತಿಳಿಸಿರುವುದರಿಂದ ಯಾವುದೇ ಕೇಸು ದಾಖಲಿಸಿಲ್ಲ ಎಂದು ಪೋಲೀಸಧಿಕಾರಿಗಳು ತಿಳಿಸಿದ್ದಾರೆ.
ಸ್ವಾಮೀಜಿಯವರ ವಾಹನ ಆಕ್ರಮಿಸಿರುವ ಘಟನೆಯ ಸುದ್ದಿ ಬೆಳಕಿಗೆ ಬರುವಂತೆಯೇ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪ ಅವರ ನಿರ್ದೇಶಾನುಸಾರ ವಿದ್ಯಾನಗರ ಠಾಣೆಯ ಎಸ್.ಐ ಯು.ಪಿ.ವಿಪಿನ್ ಹಾಗೂ ಆದೂರು ಠಾಣೆಯ ಎಸ್.ಐ ಕೆ.ಸುನು ಮೋನ್ ಅವರು ಎಡನೀರು ಮಠಕ್ಕೆ ತೆರಳಿ ಸ್ವಾಮೀಜಿಯವರನ್ನು ಭೇಟಿಯಾಗಿದ್ದರು.
ಇದೇ ರೀತಿ ಮುಳಿಯಾರು ಪಂಚಾಯತ್ ಸಮಿತಿ ಪದಾಧಿಕಾರಿಗಳು ಹಾಗೂ ಸೈಕ್ಲಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಮಠ ಸಂದರ್ಶಿಸಿ ಘಟಿಸಿದ ಘಟನೆಗೆ ವಿಷಾದ ಸೂಚಿಸಿದ್ದರು. ಈ ವೇಳೆ ಸ್ವಾಮೀಜಿಯವರು ಘಟನೆಯನ್ನು ತಾನು ಕ್ಷಮಿಸಿರುವುದಾಗಿ ತಿಳಿಸಿರುವುದರಿಂದ ಮತ್ತು ದೂರುಗಳಿಲ್ಲದಿರುವುದರಿಂದ ಪ್ರಕರಣದಲ್ಲಿ ಕೇಸು ದಾಖಲಿಸಿಲ್ಲ ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ಆದಿತ್ಯವಾರ ಮಧ್ಯಾಹ್ನ ಚೆರುಪುಯ ಮುತ್ತಪ್ಪನ್ ದೇವಾಲಯದಲ್ಲಿ ಕಾರ್ಯಕ್ರಮಕ್ಕೆಂದು ಬೋವಿಕಾನ-ಇರಿಯಣ್ಣಿ ದಾರಿಯಾಗಿ ಸ್ವಾಮೀಜಿ ಹೊರಟಿದ್ದರು. ಆದರೆ ಇದೇ ಸಂದರ್ಭ ಇರಿಯಣ್ಣಿಯಲ್ಲಿ ಸೈಕ್ಲಿಂಗ್ ಅಸೋಸಿಯೇಷನಿನ ರಾಜ್ಯ ಮಟ್ಟದ ಕಾರ್ಯಕ್ರಮ ಇದ್ದುದರಿಂದ ಬಸ್ ಹೊರತಾದ ವಾಹನಗಳ ಸಂಚಾರ ನಿಯಂತ್ರಿಸಿದ್ದರು. ಈ ಹಿನ್ನೆಲೆಯಲ್ಲಿ ಹೋಗುವಾಗ ರಸ್ತೆ ಸಂಚಾರ ನಿಯಂತ್ರಿಸುವವರಲ್ಲಿ ಹೇಳಿ ಹೋಗಿದ್ದರು. ಆದರೆ ಮರಳಿ ಬರುವಾಗ ಇರಿಯಣ್ಣಿಯಲ್ಲಿ ಮೊದಲು ತಡೆದರೆಂದೂ, ತದನಂತರ ಬಾವಿಕೆರೆ ತಲುಪಿದಾಗ ಒಬ್ಬಾತ ಕಾರು ತಡೆದು ಸಂಚಾರ ನಿಯಂತ್ರಿಸಿದ್ದು ಗೊತ್ತಿಲ್ಲವೇ ಎಂದು ಸ್ವಾಮೀಜಿಗಳಿರುವಂತೆಯೇ ದೊಣ್ಣೆಯಲ್ಲಿ ಕಾರಿನ ಗಾಜಿಗೆ ಹೊಡೆದನು.ಇದರಿಂದ ಗಾಜು ಒಡೆದಿದೆ. ಈ ವೇಳೆ ಸತೀಶ್ ಎಡನೀರು ಕಾರು ಚಲಾಯಿಸುತ್ತಿದ್ದು, ಕಾರಿನಲ್ಲಿ ನಾಲ್ವರಿದ್ದರು. ಸ್ವಾಮೀಜಿ ಘಟನೆ ಮನ್ನಿಸಿ, ಮರು ಮಾತಾಡದೇ ನೇರ ಮಠಕ್ಕೆ ಬಂದರು. ಬಳಿಕ ವಿಷಯ ತಿಳಿದು ಸೈಕ್ಲಿಂಗ್ ಅಸೋಸಿಯೇಷನ್ ನವರು ಮಠಕ್ಕೆ ಬಂದು ಕ್ಷಮೆಕೋರಿದರೆನ್ನಲಾಗಿದೆ.
ಪ್ರಸ್ತುತ ಘಟನೆ ಖಂಡಿಸಿ ನಿನ್ನೆ ಎಡನೀರಿನಲ್ಲಿ ಸರ್ವಪಕ್ಷ ಪ್ರತಿಭಟನಾ ಸಭೆ ನಡೆಸಲಾಗಿದೆ. ಶಾಸಕ ಎನ್.ಎ ನೆಲ್ಲಿಕುನ್ನ್ ಸಭೆ ಉದ್ಘಾಟಿಸಿ ನಡೆಯ ಬಾರದ್ದು ನಡೆದಿದೆ. ಇಂತದ್ದು ಮರುಕಳಿಸದಂತೆ ಎಚ್ಚರವಹಿಸಬೇಕೆಂದರು.
ಹಿಂದೂ ಐಕ್ಯವೇದಿಕೆ ಪ್ರತಿಭಟನೆ
ಎಡನೀರು ಶ್ರೀಗಳು ಘಟನೆ ಮನ್ನಿಸಿದರೂ, ನಾವು ಮನ್ನಿಸಲಾರೆವು. ಇದು ನಮ್ಮ ಸ್ವಾಮೀಜಿಯ ಮೇಲಣ, ಮಠದ ಮೇಲಣ ಆಕ್ರಮಣ ಎಂದು ಹಿಂದೂ ಐಕ್ಯವೇದಿಕೆ ಅಭಿಪ್ರಾಯಪಟ್ಟಿದೆ. ಇಂದು ಸಂಜೆ 5ಕ್ಕೆ ಬೋವಿಕಾನದಲ್ಲಿ ಬೃಹತ್ ಹಿಂದೂ ಪ್ರತಿಭಟನೆ ಹಮ್ಮಿಕೊಂಡಿದೆ. ಇದೇ ಸಂದರ್ಭ ಸ್ವಾಮೀಜಿಯವರು ಮನ್ನಿಸಿದ ಹಿನ್ನೆಲೆಯಲ್ಲಿ ಇಂದಿನ ಪ್ರತಿಭಟನೆ ರದ್ದುಪಡಿಸುವಂತೆ ಪೋಲೀಸ್ ಇಲಾಖೆ ಹಿಂದೂ ಮುಖಂಡರನ್ನು ಸಂಪರ್ಕಿಸಿ ಒತ್ತಾಯಿಸಿದ್ದಾರೆ. ಆದರೆ ಪ್ರತಿಭಟನೆ ಹಿಂತೆಯಲಾಗದು, ಆಕ್ರಮಣ ಎಸಗಿದ ವ್ಯಕ್ತಿಯೇ ಕ್ಷಮೆ ಯಾಚಿಸಬೇಕೆಂದು ಹಿಂದೂ ಐಕ್ಯ ವೇದಿ ಆಗ್ರಹಿಸಿದೆ.
ಕಾರಿಗೆ ಫಲಕ ಇಟ್ಟು ಬರುವ, ಕಾಷಾಯಧಾರಿ ಸ್ವಾಮೀಜಿಯವರನ್ನು ಗುರುತು ಸಿಗದೇ, ಸಂಚರಿಸಲು ತಡೆಯೊಡ್ಡಿದ ಘಟನೆ ಇದಲ್ಲ, ಇದು ಮತೀಯ ಮಲಿನ ಮನಸ್ಸಿನ ಪ್ರತೀಕ ಎಂದು ಹಿಂದೂ ಐಕ್ಯ ವೇದಿ ಅಭಿಪ್ರಾಯಪಟ್ಟಿದೆ.