ಕಣಿಪುರ ಸುದ್ದಿಜಾಲ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಬಳಿ ಸರ್ವೀಸ್ ರಸ್ತೆಯಲ್ಲಿ ಸ್ಕೂಟರ್ ಮಗುಚಿದಾಗ ಬಿದ್ದ ವ್ಯಕ್ತಿಯ ಮೇಲೆ ಲಾರಿ ಚಲಿಸಿ ಮಧ್ಯವಯಸ್ಕ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಮೊಗ್ರಾಲ್ ಪುತ್ತೂರು ಸಮೀಪದ ಕಲ್ಲಂಗೈ ಬಳ್ಳೂರು ಐಶ್ವರ್ಯ ನಿವಾಸದ ದಿನೇಶ್ಚಂದ್ರ(55) ಎಂಬವರು ಅಪಘಾತದಲ್ಲಿ ಮೃತಪಟ್ಟವರೆಂದು ಗುರುತಿಸಲಾಗಿದೆ.
ಮೊಗ್ರಾಲ್ ಪುತ್ತೂರಿನಿಂದ ಕುಂಬಳೆ ಕಡೆಗೆ ಸ್ಕೂಟರಿನಲ್ಲಿ ಬರುವಾಗ ಸರ್ವೀಸ್ ರಸ್ತೆಯ ಡಿವೈಡರಿಗೆ ಬಡಿದು ಸ್ಕೂಟರ್ ಸಹಿತ ಸವಾರ ರಸ್ತೆಗೆ ಬಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿ ಸವಾರನ ದೇಹದ ಮೇಲೆಯೇ ಹರಿದು ಮರಣ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ 11ರ ವೇಳೆಗೆ ಘಟನೆ ನಡೆಯಿತು. ಅಫಘಾತದ ಹಿನ್ನೆಲೆಯಲ್ಲಿ ಕಾಸರಗೋಡು-ಮಂಗಳೂರು ನಡುವೆ ತಾಸುಗಳ ಕಾಲ ರಸ್ತೆ ಸಂಚಾರ ಮೊಟಕುಗೊಂಡಿತು.
ರಾ.ಹೆ.ಕಾಮಗಾರಿಯಂಗವಾಗಿ ಮೊಗ್ರಾಲ್ ಪುತ್ತೂರು ಭಾಗದಲ್ಲಿ ಸರ್ವೀಸ್ ರಸ್ತೆ ನಿರ್ಮಾಣವಾಗಿರುವುದು ಅಶಾಸ್ತ್ರೀಯವಾಗಿದ್ದು ಇದುವೇ ದುರಂತಕ್ಕೆ ಕಾರಣ ಎಂದು ನಾಗರಿಕರು ದೂರಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಮೂರು ಅಪಘಾತಗಳು ಇಲ್ಲಿ ಸಂಭವಿಸಿವೆ. ಈ ಕುರಿತು ಈಗಾಗಲೇ ನಾಗರಿಕರು ಹೆದ್ದಾರಿ ವಿಭಾಗಕ್ಕೆ ದೂರು ನೀಡಿದ್ದಾರೆ.