ಕಣಿಪುರ ಸುದ್ದಿಜಾಲ (ನ.4)
- ಕಾಸರಗೋಡು ಸಹಿತ ಕರ್ನಾಟಕ ಕರಾವಳಿ ಮತ್ತು ಮಲೆನಾಡಲ್ಲಿ ನೆಲೆಸಿರುವ ಪ್ರಾಚೀನ ಬುಡಕಟ್ಟು ಜನಾಂಗಗಳಲ್ಲೊಂದಾದ ಮರಾಟಿ ಸಮುದಾಯ 22 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಮಗ್ರ ಸಮ್ಮೇಳನ ನಡೆಸಲು ಸಿದ್ಧತೆಯಲ್ಲಿದೆ.
ಇದೇ ನ.10ರಂದು ಮೂಡಬಿದಿರೆ ಆಳ್ವಾಸ್ ನ ನುಡಿಸಿರಿ ವೇದಿಕೆಯಲ್ಲಿ ಮರಾಟಿ ಸಮಾಜದ ಐತಿಹಾಸಿಕ “ಗದ್ದಿಗೆ” ಸಮ್ಮೇಳನ ನಡೆಯಲಿದ್ದು, 20ಸಾವಿರ ಮಂದಿ ಪಾಲ್ಗೊಳ್ಳುವರೆಂದು ಅಂದಾಜಿಸಲಾಗಿದೆ.
ಮರಾಟಿ ಸಮಾಜದ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುತ್ತಾ, ಸಮಾಜದ ಶೈಕ್ಷಣಿಕ, ಸಾಮಾಜಿಕ ಶ್ರೇಯೋಭಿವೃದ್ಧಿಯ ಮುನ್ನಡೆಯ ಧ್ಯೇಯದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾಜದ “ಶೈಕ್ಷಣಿಕ ಸಂಘಟನೆ ಮತ್ತು ಸ್ವಾಭಿಮಾನ” ಎಂಬ ಧ್ಯೇಯವಾಕ್ಯದಲ್ಲಿ ನಡೆಯುವ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸುವರು.
ಕಾಸರಗೋಡು ಸಹಿತ ಕರ್ನಾಟಕದಲ್ಲಿ 3ಲಕ್ಷಕ್ಕೂ ಅಧಿಕ ಮರಾಟಿಗರು ನೆಲೆಸಿದ್ದಾರೆ. ಮೂಲತಃ ಮಹಾರಾಷ್ಟ್ರದಿಂದ ವಲಸಿಗರಾಗಿ ಬಂದು ಗಿರಿಕಂದರಗಳ ನಡುವೆ ಜನಪದವನ್ನು ಪೋಷಿಸಿ ಬದುಕಿದ ಇವರದ್ದು ಬುಡಕಟ್ಟು ಜನಾಂಗ. ಈ ಪೈಕಿ 80ಶೇ. ಜನರು ಇಂದಿಗೂ ಸಾಮಾಜಿಕವಾಗಿ ಹಿಂದುಳಿದವರು. ಇವರ ಶೈಕ್ಷಣಿಕ ಮುನ್ನಡೆ, ಉದ್ಯೋಗ ಮೀಸಲಾತಿ ಸಂರಕ್ಷಣೆ ಮತ್ತು ಇತರ ಸೌಲಭ್ಯಗಳ ಸಂರಕ್ಷಣಾ ಧ್ಯೇಯದ ಚಿಂತನೆಗಾಗಿ ಸಮ್ಮೇಳನ ನಡೆಯಲಿದೆ. ಈ ಕುರಿತಾಗಿ ಸಮ್ಮೇಳನದಲ್ಲಿ ಪ್ರಮುಖ ಮೂರು ಗೋಷ್ಠಿಗಳು ಜರಗಲಿವೆ.
ಸಮ್ಮೇಳನದಲ್ಲಿ ಮರಾಟಿ ಸಮಾಜದ ವೈಶಿಷ್ಟ್ಯದ ಕುರಿತಾದ ಆಕರ ಗ್ರಂಥ “ಗದ್ದಿಗೆ”ಎಂಬ ಸ್ಮರಣ ಸಂಚಿಕೆಯನ್ನು ಡಾ. ಎಂ ಮೋಹನ ಆಳ್ವ ಬಿಡುಗಡೆಗೊಳಿಸುವರು. ಮರಾಟಿ ಸಮಾಜ ಎದುರಿಸುವ ಸಮಕಾಲೀನ ಸಮಸ್ಯೆ ಮತ್ತು ಸರಕಾರದಿಂದ ಬಯಸುವ ಬೇಡಿಕೆಗಳ ಅಹವಾಲನ್ನು ಸಮಾವೇಶದ ಗೌ. ಅಧ್ಯಕ್ಷ ಡಾ.ಕೆ.ಸುಂದರ ನಾಯ್ಕ್ ಈ ಸಂದರ್ಭ ಮುಖ್ಯಮಂತ್ರಿಗಳಿಗೆ ಸಲ್ಲಿಸುವರು. ಇದೇ ಸಂದರ್ಭದಲ್ಲಿ ಮರಾಟಿ ಸಮಾಜದ ಸಾಧಕ , ಸುರಂಗ ತೋಡಿ ಪದ್ಮಶ್ರೀ ಪ್ರಶಸ್ತಿ ಮುಡಿದ ಅಮೈ ಮಹಾಲಿಂಗ ನಾಯ್ಕ್ ರಿಗೆ ಸನ್ಮಾನ ನಡೆಯಲಿದೆ. ಅಲ್ಲದೇ ರಾಷ್ಟ್ರ,ರಾಜ್ಯ ಮಟ್ಟದ ಮರಾಟಿ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.
ನ.9,10ರಂದು ಸಮ್ಮೇಳನ ನಡೆಯಲಿದ್ದು, ಮೊದಲ ದಿನ ಕರ್ನಾಟಕ ಮರಾಟಿ ಸಂಘದ ನೇತೃತ್ವದಲ್ಲಿ ಮರಾಟಿ ಸಮುದಾಯದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮೇಳ ನಡೆಯಲಿದೆ. ಇದರಲ್ಲಿ 1500ಮಂದಿ ಪ್ರತಿನಿಧಿಗಳು ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎಂ.ಮೋಹನ ಆಳ್ವ, ಎನ್.ಎಸ್.ಮಂಜುನಾಥ್, ರತಿ ಪ್ರಭಾಕರ ನಾಯ್ಕ್, ಪ್ರವೀಣ ಕುಮಾರ್ ಮುಗುಳಿ ಪಾಲ್ಗೊಳ್ಳುವರು.
ನ.10ರಂದು ಮರಾಟಿ ಸಮಾಜದ ಸಮಾವೇಶ ನಡೆಯಲಿದೆ. ಇದರಲ್ಲಿ ಸಮಾಜದ ನಾಯಕರೆಲ್ಲರ ಸಹಿತ ಕರ್ನಾಟಕದ ಪ್ರಮುಖರು , ಸಚಿವರುಗಳು, ಶಾಸಕರು, ಗಣ್ಯರು ಭಾಗವಹಿಸುವರು.