37
- ಗಡಿನಾಡಿನ ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ನೂತನ ವೆಬ್ಸೈಟನ್ನು ( www.madhurtemple.in) ಉದ್ಯಮಿ, ಮಹಾಬಲೇಶ್ವರ ಭಟ್ ಎಡಕ್ಕಾನ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.
ನ.3.ಭಾನುವಾರ ಮಧೂರು ದೇಗುಲದಲ್ಲಿ ನಡೆದ ವೆಬ್ಸೈಟ್ ಅನಾವರಣ, ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಆಧುನಿಕ ಯುಗದಲ್ಲಿ ವೆಬ್ಸೈಟ್ ಹೊಂದುವುದು ಮತ್ತು ಅದರಲ್ಲಿ ಸಕಾಲಿಕ ಮಾಹಿತಿಗಳನ್ನು, ಅಗತ್ಯ ವಿವರಗಳನ್ನು ಹಂಚುವುದು ಅನಿವಾರ್ಯ. ಇದರಿಂದಾಗಿ ಪ್ರಪಂಚದ ಎಲ್ಲೇ ಇದ್ದರೂ ಭಕ್ತರಿಗೆ ಮಾಹಿತಿ ಲಭಿಸುತ್ತದೆ” ಎಂದರು.
ಶ್ರೀ ಕ್ಷೇತ್ರದ ಪ್ರ.ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಸಿದ್ಧಿವಿನಾಯಕ ಸ್ತುತಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್.ರಾವ್, ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಪ್ರ.ಕಾರ್ಯದರ್ಶಿ ಜಯದೇವ ಖಂಡಿಗೆ, ಖಜಾಂಜಿ ಸುರೇಶ್, ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ವೈಬ್ಸೈಟ್ ವಿನ್ಯಾಸಗೊಳಿಸಿದ ಬೆಂಗಳೂರಿನ ಧ್ಯೇಯ ಮೀಡಿಯಾ ಪ್ರೈ.ಲಿ. ಕಾರ್ಯನಿರ್ವಹಣಾಧಿಕಾರಿ ರವಿನಾರಾಯಣ ಗುಣಾಜೆ ವೈಬ್ಸೈಟ್ ಕುರಿತಾದ ಮಾಹಿತಿ ನೀಡಿದರು. ಕಛೇರಿ ಸಮಿತಿ ಸಂಚಾಲಕ ಎ.ಮನೋಹರ್ ಸ್ವಾಗತಿಸಿದರು. ಧನಂಜಯ ಮಧೂರು ವಂದಿಸಿದರು.