ಕಣಿಪುರ ಸುದ್ದಿಜಾಲ(ನ4)
- ನೀಲೇಶ್ವರದ ತೆರು ಅಂಞೂಟಂಬಲಂ ವೀರರ್ಕಾವ್ ಕಳಿಯಾಟದ ವೇಳೆ ಪಟಾಕಿ ದಾಸ್ತಾನು ಸ್ಪೋಟಿಸಿದ ದುರಂತದಲ್ಲಿ ಮೃತರಾದವರ ಸಂಖ್ಯೆ 4ಕ್ಕೇರಿದೆ.
ಕೋಝಿಕ್ಕೋಡ್ ಮಿಂಮ್ಸ್ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ನಾಲ್ಶರು ಗೆಳೆಯರೂ ಒಬ್ಬರ ಬೆನ್ನಿಗೊಬ್ಬರಂತೆ ಸಾವಿಗೆ ಶರಣಾದ ಹಿನ್ನೆಲೆಯಲ್ಲಿ ಕಳಿಯಾಟ ಉತ್ಸವವೊಂದು ನೀಲೇಶ್ವರದ ನಾಡನ್ನೇ ಕಂಗೆಡಿಸಿದೆ.
ನಿನ್ನೆ ಆದಿತ್ಯವಾರ ತಡರಾತ್ರಿ 12ರ ಬಳಿಕ ನೀಲೇಶ್ವರ ತುರ್ತಿ ಓರ್ಕುಳಂ ನಿವಾಸಿ 19ರ ಹರೆಯದ ಶಿಬಿನ್ ರಾಜ್ ಕೂಡಾ ಮೃತಪಡುವುದರೊಂದಿಗೆ ಮೃತರಾದವರ ಸಂಖ್ಯೆ ನಾಲ್ಕಕ್ಕೇರಿತು. ಕಿನಾನೂರು ನಿವಾಸಿ ಸಂದೀಪ ಶನಿವಾರ ಮೃತಪಟ್ಟಿದ್ದರು. ಕರಿಂದಳಂ ನಿವಾಸಿ ರತೀಶ್ ಹಾಗೂ ಬಿಜು ಆದಿತ್ಯವಾರ ಬೆಳಿಗ್ಗೆ ಮತ್ತು ಸಂಜೆ ಮೃತರಾದರು. ಮೃತರಾದವರೆಲ್ಲರೂ ಅಂದಂದಿಗೆ ಅಂದು ದುಡಿಯುವ ಬಡ ಕೂಲಿಕಾರ್ಮಿಕರಾಗಿದ್ದಾರೆ.
ಮೃತರ ಕುಟುಂಬವನ್ನು ಸಂತೈಸಲಾಗದೇ ಊರಿಡೀ ಕಂಬನಿಯೊಂದಿಗೆ ಅವರ ಜತೆ ನಿಂತಿರುವುದನ್ನು ನೀಲೇಶ್ವರದ ನಾಡಲ್ಲಿ ಕಾಣಬಹುದು. ಅಂದಂದಿಗೆ ದುಡಿದು ಕುಟುಂಬಕ್ಕೆ ನೆರವಾಗುತ್ತಿದ್ದ ಗೆಳೆಯರು ಸಾವಿನಲ್ಲೂ ಒಂದಾದದ್ದು ದುರ್ದೈವಕರ.
ಎಲ್ಲೇ ಕಳಿಯಾಟವಿದ್ದರೂ ತಪ್ಪದೇ ಹೋಗುತ್ತಿದ್ದ ಇವರು ಪೂರಕಳಿ ಕಲಾವಿದರೂ ಆಗಿದ್ದರು.
ಸಿಡಿಮದ್ದು ದುರಂತದಲ್ಲಿ 150ರಷ್ಟು ಮಂದಿ ಗಾಯಗೊಂಡಿದ್ದರೂ ಬಹುತೇಕರು ಚೇತರಿಸಿದ್ದಾರೆ. ಇದೀಗ ಒಟ್ಟು ಐವರು ವೆಂಟಿಲೇಟರಿನಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಾರೆಂದು ತಿಳಿದುಬಂದಿದೆ.