ಎಡನೀರು: ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರು ಸಂಚರಿಸುತ್ತಿದ್ದ ವಾಹನಕ್ಕೆ ತಡೆಯೊಡ್ಡಿ ಆಕ್ರಮಿಸಿದ ಘಟನೆ ನಡೆದಿದೆ.
ನಿನ್ನೆ ಸಂಜೆ ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ತೆರಳುವಾಗ ವಾಹನವನ್ನು ತಡೆದ ಪುಂಡರ ತಂಡವೊಂದು ತಗಾದೆ ಎಬ್ಬಿಸಿತ್ತು. ಬಳಿಕ ಸಂಚಾರ ಮುಂದುವರಿದಿತ್ತು. ಇದೇ ದಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದವರ ಪೈಕಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದರೆಂದೂ, ಕಾರಿನ ಗಾಜಿಗೆ ಹಾನಿಯಾಗಿದೆಯೆಂದೂ ತಿಳಿದುಬಂದಿದೆ. ಈ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದಾರೆ.
ಪ್ರಸ್ತುತ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಹಿಂದೂ ಐಕ್ಯವೇದಿ ಘಟನೆಯನ್ನು ಖಂಡಿಸಿ ಪ್ರತಿಭಟನೆಗೆ ಆಹ್ವಾನ ಇತ್ತಿದೆ. ನಾಳೆ ನ.5ರಂದು ಸಂಜೆ 5ಘಂಟೆಗೆ ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಬೋವಿಕಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಎಡನೀರು ಮಠದ ಶ್ರೀಗಳ ವಾಹನವನ್ನು ತಡೆದು, ಆಕ್ರಮಿಸಿರುವುದರ ಉದ್ದೇಶವೇನೆಂದು ಪ್ರಶ್ನಿಸಿರುವ ಹಿಂದೂ ಐಕ್ಯವೇದಿ ಪೀಠದ ಗುರುಗಳಿಗೆ ಸಂಚಾರಕ್ಕೆ ಕಷ್ಟವಾದರೆ ಈ ನಾಡಿನ ಪರಿಸ್ಥಿತಿ ಏನಾದೀತೆಂದು ಪ್ರಶ್ನಿಸಿ ರಂಗಕ್ಕಿಳಿದಿದೆ.