ಕಣಿಪುರ ಸುದ್ದಿಜಾಲ(ನ.4)
- ಗಡಿನಾಡು ಕಾಸರಗೋಡಿನ ಅಭಿಮಾನದ ಮಠವಾದ ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದರು ವಾಹನದಲ್ಲಿರುವಂತೆಯೇ ಅವರ ವಾಹನವನ್ನು ಆಕ್ರಮಿಸಿ ಹಾನಿಗೈದು, ಭಯಮೂಡಿಸಿದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಒತ್ತಾಯಿಸಿದ್ದಾರೆ.
ಘಟನೆಯನ್ನು ಸ್ವಾಮೀಜಿ ಕ್ಷಮಿಸಿರಬಹುದು. ಆದರೆ ಹಿಂದೂ ಧರ್ಮದ ಆರಾಧ್ಯರಾದ, ನಮ್ಮೆಲ್ಲರ ನಾಡಿನ ಅಭಿಮಾನವಾದ ಸ್ವಾಮೀಜಿಯವರ ವಾಹನವನ್ನು ಉದ್ದೇಶಪೂರ್ವಕ ಆಕ್ರಮಿಸಿರುವುದನ್ನು ತಿಳಿದೂ ಹಿಂದೂ ಸಮಾಜ ಮತ್ತು ಸಂಘಟನೆ ಸುಮ್ಮನಿರದು. ಇಂಥ ಸಂದರ್ಭದಲಿ ಸುಮ್ಮನಿದ್ದರೆ ನಾಳೆ ಸ್ವಾಮೀಜಿಯವರಿಗೆ ಎಂದಲ್ಲ, ಹಿಂದೂಗಳೆಲ್ಲರಿಗೆ ದಾರಿ ನಡೆಯುವುದೇ ಕಷ್ಟವಾದೀತು ಎಂದು ರಾಜನ್ ಹೇಳಿದರು. ಈ ಹಿನ್ನೆಲೆಯಲ್ಲಿ ನ.5ರಂದು ಸಂಜೆ ಬೋವಿಕಾನದಲ್ಲಿ ಹಿಂದೂ ಐಕ್ಯವೇದಿ ನೇತೃತ್ವದಲ್ಲಿ ಬೃಹತ್ ಸಾರ್ವಜನಿಕ ಹಿಂದೂ ಪ್ರತಿಭಟನೆ ನಡೆಯಲಿದೆ ಎಂದವರು ತಿಳಿಸಿದರು.
ಹಿಂದೂ ಐಕ್ಯವೇದಿ ನಾಯಕ ರಾಜನ್ ಮುಳಿಯಾರ್ “ಕಣಿಪುರ ಡಿಜಿಟಲ್ ಮೀಡಿಯ” ಜತೆ ಮಾತನಾಡಿ ಘಟನೆಯ ಕುರಿತಾಗಿ ನೀಡಿದ ಪ್ರತಿಕ್ರಿಯೆ ಹೀಗಿದೆ…
“ಆದಿತ್ಯವಾರ ವೆಳ್ಳರಿಕುಂಡ್ ನಲ್ಲಿ ಸ್ವಾಮೀಜಿಯವರಿಗೊಂದು ಕಾರ್ಯಕ್ರಮವಿತ್ತು. ತನ್ನಿಮಿತ್ತ ಬೋವಿಕಾನ, ಇರಿಯಣ್ಣಿ ದಾರಿಯಾಗಿ ಅವರು ಸಾಗುತ್ತಿದ್ದರು. ಈ ವೇಳೆ ಸೈಕ್ಲಿಂಗ್ ಅಸೋಸಿಯೇಷನ್ ನ ಕಾರ್ಯಕ್ರಮ ನಿಮಿತ್ತ ಬೋವಿಕಾನದಿಂದ ಇರಿಯಣ್ಣಿಯ ವರೆಗೆ ರಸ್ತೆ ಸಂಚಾರ ನಿಯಂತ್ರಿಸಲು ಸಂಘಟನೆ ವತಿಯಿಂದಲೇ ಸ್ವಯಂಸೇವಕರನ್ನು ನೇಮಿಸಲಾಗಿತ್ತು. ಇವರ ಕಣ್ಣೆದುರೇ ತೆರಳಿದ್ದ ಸ್ವಾಮೀಜಿ ವೆಳ್ಳರಿಕುಂಡಿನಿಂದ ಬೇಗನೇ ಮಠಕ್ಕೆ ವಾಪಾಸು ಮರಳಿದ್ದರು. ಮರಳುವ ದಾರಿಮಧ್ಯೆಯೂ ಅಲ್ಲಲ್ಲಿ ತಡೆದು, ವಿಚಾರಿಸಿದರು. ಈ ಮಧ್ಯೆ ಬಾವಿಕೆರೆ ಎಂಬಲ್ಲಿ ವಾಹನವೊಂದಕ್ಕೆ ಸೈಡ್ ನೀಡುವಾಗ ಸೈಕ್ಲಿಂಗ್ ಅಸೋಸಿಯೇಷನ್ ಸ್ವಯಂಸೇವಕನೊಬ್ಬ ಕೈಯ್ಯಲ್ಲಿ ಕಾರಿಗೆ ಹೊಡೆದು ಜೋರುಮಾಡಿದ್ದಲ್ಲದೇ, ದೊಣ್ಣೆಯಲ್ಲಿ ಗಾಜಿಗೆ ಬಡಿದು ಹಾನಿ ಮಾಡಿದನು.
ಘಟನೆ ಇಷ್ಟೇ ಆದರೂ ಹಿಂದೂ ಐಕ್ಯವೇದಿ ಕೇಳುವುದೇನೆಂದರೆ “ಎಡನೀರು ಮಠ ಮತ್ತು ಶ್ರೀಗಳವರನ್ನು ಅರಿಯದವರ್ಯಾರೂ ಇಲ್ಲ. ಸ್ವತಃ ಸ್ವಾಮೀಜಿಯವರು ಇರುವ ಕಾರನ್ನು ಗೌರವಿಸದೇ, ಆಕ್ರಮಿಸಿದ್ದಾನೆಂದರೆ ಆತನಿಗೇನು ಸ್ವಾಮೀಜಿಯವರನ್ನು ಕಂಡರಾಗುವುದಿಲ್ಲವೇ?
ಸ್ವಾಮೀಜಿಯವರನ್ನು ಇಡೀ ಹಿಂದೂ ಸಮಾಜ ಗೌರವಿಸಿ, ಆದರಿಸುತ್ತಿದೆ. ಅಂಥಾ ಗುರುಗಳ ವಾಹನದ ಮೇಲೆ ನಡೆದ ಆಕ್ರಮಣವನ್ನು ಹಿಂದೂ ಐಕ್ಯವೇದಿ ಸಹಿಸುವುದಿಲ್ಲ ಎಂದು ರಾಜನ್ ಮುಳಿಯಾರು ಹೇಳಿದರು.
ಘಟನೆಯ ಹಿನ್ನೆಲೆಯಲ್ಲಿ ಸೈಕ್ಲಿಂಗ್ ಅಸೋಸಿಯೇಷನ್ ಪದಾಧಿಕಾರಿಗಳು ಎಡನೀರು ಮಠಕ್ಕೆ ತೆರಳಿ ಸ್ವಾಮೀಜಿ ಅವರಲ್ಲಿ ಕ್ಷಮಾಪಣೆ ಕೋರಿದ್ದಾರೆಂಬ ಮಾಹಿತಿ ಇದೆ. ಹೀಗೆ ಕ್ಷಮಾಪಣೆ ಕೇಳುವುದೆಂದರೆ ಅವರ ಭಾಗದಿಂದ ತಪ್ಪಾಗಿದೆ ಎಂದರ್ಥವಲ್ಲವೇ? ಎಂದ ರಾಜನ್, ಇಷ್ಟಕ್ಕೂ ಕ್ಷಮಾಪಣೆಗೆ ಆಕ್ರಮಣ ನಡೆಸಿದಾತನನ್ನೇ ಕರೆದೊಯ್ಯದಿರುವುದೇಕೆಂದೂ ಪ್ರಶ್ನಿಸಿದ್ದಾರೆ.
ಅಲ್ಲದೇ ಇದೇ ಘಟನೆ ಅನ್ಯ ಮತೀಯ ಮುಖಂಡರೊಬ್ಬರ ಮೇಲೋ, ಧಾರ್ಮಿಕ ನಾಯಕರ ಮೇಲೋ ಘಟಿಸಿರುತ್ತಿದ್ದರೆ ಈ ನಾಡಿನ ಸ್ಥಿತಿ ಏನಾಗುತಿತ್ತು?ಎಂದವರು ಪ್ರಶ್ನಿಸಿದ್ದಾರೆ.
ಪ್ರಸ್ತುತ ಘಟನೆಯನ್ನು ಕ್ಷುಲ್ಲಕವೆಂದು ಪರಿಗಣಿಸಲಾಗದು.ಕಾಷಾಯ ತೊಟ್ಟ ಸ್ವಾಮೀಜಿಯವರನ್ನು ಕಂಡರಾಗದ ಅಸಹಿಷ್ಣುತೆ ಉಳ್ಳವರನ್ನೆಲ್ಲ ಸೈಕ್ಲಿಂಗ್ ಅಸೋಸಿಯೇಷನ್ ಸ್ವಯಂಸೇವಕರನ್ನಾಗಿ ನೇಮಿಸುತ್ತದೆ ಎಂದರೆ ಇವರ ಸಾಮಾಜಿಕ ಜವಾಬ್ದಾರಿಯನ್ನು ಪ್ರಶ್ನಿಸಲೇಬೇಕು. ಈ ಹಿನ್ನೆಲೆಯಲ್ಲಿ ಹಿಂದೂ ಐಕ್ಯವೇದಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರ ಸಮಿತಿ, ಭಜನಾಮಂದಿರ ಸಮಿತಿ, ತರವಾಡು ಘಟಕ, ಜನಾಂಗಿಕ ಮುಖಂಡರುಗಳ ಸಹಿತ ಎಡನೀರು ಮಠದ ಮೇಲಿನ ಅಭಿಮಾನಿ ಭಕ್ತರು, ಹಿಂದೂ ಬಾಂಧವರೆಲ್ಲ ಭಾಗವಹಿಸುವರೆಂದು ರಾಜನ್ ಮುಳಿಯಾರು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಪೋಲೀಸರ ನಿಷ್ಕ್ರಿಯತೆಯೇ ಇಂಥ ಘಟನೆಗಳಿಗೆ ಕಾರಣ ಎಂದವರು ಹೇಳಿದ್ದಾರೆ.