ಕಣಿಪುರ ಸುದ್ದಿಜಾಲ(ನ.3)
ಕಾಸರಗೋಡು: ನೀಲೇಶ್ವರ ಅಂಞ್ಞೂಟಂಬಲಂ ವೀರರ್ ಕಾವ್ ದೈವಸ್ಥಾನದಲ್ಲಿ ಕಳಿಯಾಟ ಸಂದರ್ಭ ನಡೆದ ಸಿಡಿಮದ್ದು ಸ್ಪೋಟದಲ್ಲಿ ಗಾಯಗೊಂಡವರ ಪೈಕಿ ಇತ್ತೀಚಿನ ವರದಿಯಂತೆ ಮೂವರು ಮೃತಪಟ್ಟಿದ್ದಾರೆ.
ಕೋಝಿಕ್ಕೋಡ್ ಮಿಂಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನೀಲೇಶ್ವರದ ಬಿಜು ಇಂದು ಸಂಜೆ ಮೃತಪಟ್ಟರು. ನೀಲೇಶ್ವರ ವಾಸಿ ರಮೇಶ್ (41) ಆದಿತ್ಯವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತರಾಗಿದ್ದರು. ನೀಲೇಶ್ವರ ಕರಿಂದಳಂ ಕಿನಾನೂರಿನ ಸಂದೀಪ್ (30) ಎಂಬವರು ಶನಿವಾರ ಸಂಜೆಯೇ ಮೃತಪಟ್ಟಿದ್ದರು. ಇದರೊಂದಿಗೆ ದುರಂತದಲ್ಲಿ ಮೃತರಾದವರ ಸಂಖ್ಯೆ 3ಕ್ಕೇರಿದೆ. ಮೂರ್ನಾಲ್ಕು ಮಂದಿ ಸಾವು/ ಬದುಕಿನ ನಡುವೆ ತೊಳಲಾಡುತ್ತಿದ್ದು ಮರಣ ಸಂಖ್ಯೇ ಏರುವ ಶಂಕೆ ಇದೆ.
ಸಿಡಿಮದ್ದು ಶೇಖರಣೆ ಸ್ಪೋಟಿಸಿದ ದುರಂತದಲ್ಲಿ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರೂ ಬಹುತೇಕರು ಚೇತರಿಸಿದ್ದಾರೆ. 10ಮಂದಿ ಇದೀಗ ಗಂಭೀರ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಐವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುವವರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರಕಾರ ಭರಿಸುವುದಾಗಿ ಪ್ರಕಟಿಸಿದೆ.
ಇದೇ ವೇಳೆ ದುರಂತಕ್ಕೆ ಕಾರಣರೆಂದು ಉಲ್ಲೇಖಿಸಿ ದೈವಸ್ಥಾನದ ಮೂವರು ಪದಾಧಿಕಾರಿಗಳನ್ನು ಬಂಧಿಸಿ, ಕೇಸು ದಾಖಲಿಸಲಾಗಿತ್ತು. ಇವರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಬಿಡುಗಡೆ ನೀಡಿದೆ.
ಅತ್ಯುತ್ತರ ಕೇರಳದ ಮಲಬಾರಿನ ತೈಯ್ಯಂ ಸೀಸನಿಗೆ ನಾಂದಿಯಾಗುವ ಕಳಿಯಾಟದಲ್ಲೇ ಪಟಾಕಿ ಶೇಖರಣೆ ಸ್ಪೋಟಿಸಿ ದುರಂತ ಸಂಭವಿಸಿರುವುದು ಉತ್ಸವ ಸಮಿತಿಯ ನಿರ್ಲಕ್ಷ್ಯ ಮತು ಜವಾಬ್ದಾರಿ ರಹಿತ ವರ್ತನೆ ಕಾರಣದಿಂದ ಎಂದು ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿಗಳು ನೀಡಿದ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.