ಕಣಿಪುರ ಸುದ್ದಿಜಾಲ, ಚೆನ್ನೈ( ನ.3)
ಅಬ್ಬಬ್ಬಾ…
ಪರಿಸರ ವಿನಾಶಿ ರಾಸಾಯನಿಕ ಪಟಾಕಿ ಹೊಡೆಯದೇ, ಪ್ರಕೃತಿ ಪೂರಕ ಹಸಿರು ಪಟಾಕಿ ಮಾತ್ರವೇ ಸಿಡಿಸಿ ದೀಪಾವಳಿ ಆಚರಿಸಿ ಎಂದು ಸುಪ್ರೀಂ ಕೋರ್ಟು ತೀರ್ಪು ನೀಡಿದ್ದೇ ತಡ…
ಇದು ನಮ್ಮ ಹಬ್ಬ, ನಾವ್ ಪಟಾಕಿ ಹೊಡೆದು ಸಂಭ್ರಮಿಸುತ್ತೇವೆ ಎಂದೇ ಹೊರಟವರಿಂದಾಗಿ ತಮಿಳುನಾಡಿನ ಪಟಾಕಿ ನಿರ್ಮಾಣ ಕಂಪೆನಿಗಳಿಗೆ ಚಾರಿತ್ರಿಕ ದಾಖಲೆಯ ವ್ಯಾಪಾರವಾಗಿದೆ. ದೀಪಾವಳಿ ಮುಗಿಯುವ ಮುನ್ನವೇ ಕೋಟಿ, ಕೋಟಿ ವ್ಯಾಪಾರ ದಾಟಿದ್ದು ಈ ಬಾರಿಯ ವಿಶೇಷ!!
ಪಟಾಕಿ ನಿರ್ಮಾಣದ ಅತ್ಯಧಿಕ ಕಾರ್ಖಾನೆಗಳಿರೂವುದೇ ತಮಿಳುನಾಡಿನ ಶಿವಕಾಶಿಯಲ್ಲಿ. ಇಲ್ಲಿನ 1,150ರಷ್ಟು ನಿರ್ಮಾಣ ಕಂಪೆನಿಗಳು ಈ ಬಾರಿಯ ದೀಪಾವಳಿಗೆ ಉತ್ಪಾದನೆ ಕಡಿತಗೊಳಿಸಿದ್ದರೂ, ಬರೋಬ್ಬರಿ 6ಸಾವಿರ ಕೋಟಿಯ ವ್ಯಾಪಾರ ದೀಪಾವಳಿಯ ಮುನ್ನವೇ ಇಲ್ಲಿ ನಡೆದಿದೆ. ಇದು ವಾಡಿಕೆಯ ವ್ಯಾಪಾರಕ್ಕಿಂತ ದುಪ್ಪಟ್ಟು ವ್ಯಾಪಾರವೆಂದು ಸ್ವತಃ ಪಟಾಕಿ ನಿರ್ಮಾಣ ಘಟಕಗಳ ಸಂಘಟನಾ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿ ಸುಪ್ರೀಂ ಕೋರ್ಟು ರಾಸಾಯನಿಕ ಮಿಶ್ರಿತ, ಭಾರೀ ಸ್ಫೋಟದ ಪರಿಸರ ಮಾರಕ ಸಿಡಿಮದ್ದುಗಳಿಗೆ ದೇಶವ್ಯಾಪಕ ನಿಷೇಧ ಹೇರಿತ್ತು. ಪರಿಸರ ಪೂರಕ ಹಸಿರು ಪಟಾಕಿ ಸಿಡಿಸಿ ದೀಪಾವಳಿ ಆಚರಿಸಬೇಕೆಂದು ಆದೇಶಿಸಿತ್ತು. ಈ ತೀರ್ಪಿನ ಆತಂಕದ ನಡುವೆಯೂ ದೇಶವ್ಯಾಪಕ ಸಿಡಿಮದ್ದು ಸಿಡಿತಕ್ಕೇನೂ ನಿಯಂತ್ರಣವಾಗಿಲ್ಲ. ವರ್ಷಂಪ್ರತಿ ಬರುವ ದೀಪಾವಳಿಗೆ ಪಟಾಕಿ ಹೊಡೆಯದಿದ್ದರೆ ಮತ್ತೆಂಥ ಆಚರಣೆ ಎಂಬಂತೆ ಜನತೆ ಬರೋಬ್ಬರಿ ಶಿವಕಾಶಿಯ ಸಂಸ್ಥೆಗಳಿಗೆ ಮಾತ್ರ 600ಕೋಟಿಗೂ ಅಧಿಕ ವ್ಯಾಪಾರ ನೀಡಿದ್ದಾರೆಂದರೆ, ದೀಪಾವಳಿಯ ರಾತ್ರಿ ಗರ್ಭಗಳನ್ನು ಸ್ಫೋಟಿಸಿದ ಸದ್ದಿನ ಪಟಾಕಿಗಳೆಷ್ಟೋ..?!
ದೀಪಾವಳಿ ಬಂದರೆ ಸಾಕು, ಅದು ದೇಶಕ್ಕೇ ಹಬ್ಬ. ಮೊದಲೆಲ್ಲ ಪ್ರಾದೇಶಿಕ ಆಚರಣಾ ವ್ಯತ್ಯಾಸಗಳು ಏನಿದ್ದರೂ, ದೀಪಾವಳಿಗೆ ಹೊಸ ಉಡುಪು, ಸಿಡಿಮದ್ದು ಸಿಡಿಸುವ ಬಲೀಂದ್ರ ಪೂಜೆಯ ಆಚರಣೆ ನಮ್ಮ ತುಳುನಾಡಲ್ಲಿ ವಾಡಿಕೆ. ಆದರೀಗ ಬಲೀಂದ್ರ ಆರಾಧನೆ, ಗೋಪೂಜೆ ಮನೆಯಂಗಳದಿಂದ, ಮನದಿಂಗಳದಿಂದ ಖಾಲಿಯಾಗುತ್ತಿದೆ. ಪಟಾಕಿ ಸಿಡಿಸುವ ಸಂಭ್ರಮ ವಿಫುಲ ಅವಕಾಶ ವ್ಯಾಪ್ತಿ ವಿಸ್ತರಿಸುತ್ತಿದೆ. ಒಟ್ಟಂದದಲ್ಲಿ ದೀಪಾವಳಿ ಎಂದರೆ ಕತ್ತಲನ್ನು ಸೀಳುವ ಬೆಳಕಿನ ಹಬ್ಬವೂ ಹೌದು. ಕಾರ್ಗತ್ತಲ್ಲನ್ನು ಸ್ಪೋಟಿಸಿ ಬೆಳಗಿಸುವ ಪಟಾಕಿ ಸಂಭ್ರಮವೂ ಹೌದು..
ಇಷ್ಟಕ್ಕೂ ದೇಶದ ಪರಿಸರದ ವಾಯು ಮಾಲಿನ್ಯಕ್ಕೆ ವರ್ಷಕ್ಕೊಮ್ಮೆ ಸಿಡಿಸುವ ಪಟಾಕಿಯೇ ಕಾರಣವಲ್ಲ ತಾನೇ??
ಕಟ್ಟುನಿಟ್ಟಿನ ನಿಯಂತ್ರಣಗಳೇನಿದ್ದರೂ ಬರಲಿ, ಅದು ದೀಪಾವಳಿ ಪಟಾಕಿಗೆ ಸೀಮಿತವಾಗದಿರಲಿ ಎಂದಷ್ಟೇ ಹಿಂದೂ ಸಂಘಟನೆಗಳ ಅಭಿಪ್ರಾಯ.