ಕಾಸರಗೋಡು : ಜಿಲ್ಲೆಯಲ್ಲಿ ಕಳಿಯಾಟಂ, ನೇಮ, ಜಾತ್ರೆ ನಡೆಯುವ ಪ್ರಮುಖ ತರವಾಡುಗಳಿಗೆ ಮತ್ತು ದೈವಸ್ಥಾನಗಳಿಗೆ ಅಕ್ರಮವಾಗಿ ಸಿಡಿಮದ್ದು ದಾಸ್ತಾನಿರಿಸದಂತೆ ಜಿಲ್ಲಾ ಪೋಲೀಸ್ ವರಿಷ್ಠರ ಆದೇಶದಂತೆ ನೋಟೀಸು ಜಾರಿ ಮಾಡಲಾಗಿದೆ.
ಅನುಮತಿ ರಹಿತವಾಗಿ ಸಿಡಿಮದ್ದು ಸಿಡಿಸಕೂಡದು ಮತ್ತು ಹಾಗೇನಾದರೂ ಅನಾಹುತ ಸಂಭವಿಸಿದರೆ ಆಯಾಯ ಸಮಿತಿಗಳೇ ಹೊಣೆಯಾಗಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆಂದು ನೋಟೀಸಿನಲ್ಲಿ ಎಚ್ಚರಿಸಲಾಗಿದೆ.
ನೀಲೇಶ್ವರದ ಅಂಞ್ಞೂಟಂಬಲಂ ವೀರರ್ಕಾವ್ ನಲ್ಲಿ ಸಿಡಿಮದ್ದು ಸ್ಫೋಟಿಸಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ವಹಿಸಲಾಗಿದೆ.
ಜಾತ್ರೆ, ಉತ್ಸವಗಳ ಸಿಡಿಮದ್ದು ಪ್ರದರ್ಶನಕ್ಕೆ ಇಲಾಖೆಯ ಪೂರ್ವಾನುಮತಿಯನ್ನು ಕಡ್ಡಾಯ ಪಡೆಯಬೇಕು ಮತ್ತು ಅನುಮತಿ ರಹಿತವಾಗಿ ಸಿಡಿಮದ್ದು ದಾಸ್ತಾನಿಟ್ಟರೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪ ತಿಳಿಸಿದ್ದಾರೆ.
ನೀಲೇಶ್ವರ ದುರಂತದ ಹಿನ್ನೆಲೆಯಲ್ಲಿ ಕಟ್ಟೆಚ್ಚರಕ್ಕೆ ಆದೇಶ ನೀಡಿರುವ ಅವರು ಪಟಾಕಿ ತಯಾರಕರು ಮತ್ತು ದಾಸ್ತಾನಿರಿಸುವವರಿಗೂ ಈ ಆ
ದೇಶ ಅನ್ವಯವೆಂದು ತಿಳಿಸಿದ್ದಾರೆ.
ಇದರಿಂದಾಗಿ ಕಾಸರಗೋಡು ತಾಲೂಕಿನ ಪ್ರಮುಖ ಜಾತ್ರೆಗಳು, ಕಳಿಯಾಟಗಳು ಕಳೆಗುಂದುವ ಆತಂಕ ಎದುರಿಸಿದೆ. ಈ ವರೆಗೆ ಇಲಾಖೆ ಮತ್ತು ಉತ್ಸವ ಸಮಿತಿ ನಡುವಣ ಸೌಹಾರ್ದ ಒಪ್ಪಂದ ಮತ್ತು ರಾಜಕೀಯ ಪ್ರಭಾವದ ಮರೆಯಲ್ಲಿ ಸಿಡಿಮದ್ದು ಪ್ರದರ್ಶನಗಳು ನಡೆಯುತ್ತಿದ್ದವು. ಆದರೆ ಸಿಡಿಮದ್ದು ದುರಂತಗಳು ಹೆಚ್ಚಿದ ಅನಾಹುತಗಳ ಕಾರಣದಿಂದ ಯಾವುದೇ ಕಾರಣಕ್ಕೂ ಅನುಮತಿ ರಹಿತ ಸಿಡಿಮದ್ದು ಪ್ರದರ್ಶನಕ್ಕೆ ಅವಕಾಶ ಇಲ್ಲವೆಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.