ಕೇರಳದಲ್ಲಿ ವಂದೇಭಾರತ್ ರೈಲಿಗೆ ಭರ್ಜರಿ ಸ್ಪಂದನದ ಜನಪ್ರಿಯತೆ:

ತಿರುವನಂತಪುರ,ಕಾಸರಗೋಡು,ಮಂಗಳೂರು ರೂಟಿಗೆ ಹೆಚ್ಚುವರಿ ಭೋಗಿಯ ನೂತನ ರೈಲು ಶೀಘ್ರ..

by Narayan Chambaltimar

ಕಣಿಪುರ ಸುದ್ದಿಜಾಲ, ಕಾಸರಗೋಡು (ನ. 1)

ಕೇರಳದಲ್ಲಿ ಪ್ರಯಾಣಿಕರ ಭರ್ಜರಿ ಸ್ಪಂದನದೊಂದಿಗೆ ಜನಪ್ರಿಯವಾಗಿ ಓಡುವ ಎರಡು ವಂದೇಭಾರತ್ ರೈಲುಗಳು ಶೀಘ್ರವೇ ಬದಲಾಗಲಿದೆ. ಹೆಚ್ಚು ಕೋಚ್ (ಭೋಗಿ) ಗಳಿರುವ ನೂತನ ವಿನ್ಯಾಸದ ಹೊಚ್ಚ ಹೊಸ ವಂದೇ ಭಾರತ್ ಈ ರೂಟಿನಲ್ಲಿ ಸಂಚರಿಸಲಿವೆ.

ತಿರುವನಂತಪುರ-ಕಾಸರಗೋಡು ಮತ್ತು ಮಂಗಳೂರು – ತಿರುವನಂತಪುರ ನಡುವೆ ಎರಡು ವಂದೇಭಾರತ್ ರೈಲುಗಳು ಪ್ರಸ್ತುತ ಓಡಾಡುತ್ತಿದೆ. ಇವೆರಡಕ್ಕೂ ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನದ ಬೆಂಬಲ ದೊರೆತಿದೆ. ಈ ಕಾರಣದಿಂದಲೇ ಪ್ರಯಾಣಿಕರ ದಟ್ಟಣೆ ಗಮನಿಸಿ ಹೆಚ್ಚುವರಿ ಸೌಲಭ್ಯದ ನೂತನ ಕೋಚ್ ಗಳಿರುವ ಹೊಸ ವಂದೇಭಾರತ್ ರೈಲನ್ನು ಈ ರೂಟಿಗೆ ಹಾಕಲು ರೈಲ್ವೇ ಸಚಿವಾಲಯ ನಿರ್ಧರಿಸಿರುವುದಾಗಿ ಸುದ್ದಿಸಂಸ್ಥೆಗಳು ವರದಿಮಾಡಿವೆ

ಪ್ರಸ್ತುತ ಕಾಸರಗೋಡು – ತಿರುವನಂತಪುರ ನಡುವಣ ವಂದೇಭಾರತ್ ರೈಲಿಗೆ 16 ಕೋಚ್ ಗಳಿವೆ. ಇದನ್ನು 20ಕೋಚ್ ಗಳ ನೂತನ ರಾಕ್ ಆಗಿ ಮಾರ್ಪಡಿಸಲು ಉದ್ದೇಶಿಸಲಾಗಿದೆ. ಇದೇ ರೀತಿ ಮಂಗಳೂರು – ತಿರುವನಂತಪುರ ನಡುವಣ ವಂದೇಭಾರತ್ ನಲ್ಲಿ 8 ಕೋಚ್ ಗಳಿವೆ. ಇದನ್ನು 16ಕೋಚ್ ಗಳ ರೈಲಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.
ಕಾಸರಗೋಡು – ತಿರುವನಂತಪುರ ರೂಟಿನ 16ಕೋಚ್ ಗಳ ವಂದೇಭಾರತನ್ನು ಮಂಗಳೂರಿಗೆ ಹಾಕಿ 8ಕೋಚ್ ಗಳ ಮಂಗಳೂರು ರೂಟಿನ ವಂದೇ ಭಾರತನ್ನು ಕೇರಳದ ಹೊರಗಡೆಗೆ ಕೊಂಡೊಯ್ಯಲು ತೀರ್ಮಾನವಾಗಿದೆ. ಇದರಂತೆ ಕಾಸರಗೋಡು -ತಿರುವನಂತಪುರ ನಡುವೆ 20ಕೋಚ್ ಗಳ ನೂತನ ವಂದೇಭಾರತ್ ಓಡಲಿದೆ.

ದೇಶದ 40ರಷ್ಟು ರೈಲ್ವೇ ರೂಟಿನಲ್ಲಿ ವಂದೇ ಭಾರತ್ ಓಡುತ್ತಿದ್ದು, ಈ ಪೈಕಿ ಕೇರಳಕ್ಕೆ ನೀಡಿದ ಮೂರು ರೈಲುಗಳು ಅಪಾರ ಜನಪ್ರಿಯತೆ ಪಡೆದಿವೆ.
ಇತರೇ ರೈಲುಗಳಿಗಿಂತ ಪ್ರಯಾಣ ದರ ಅಧಿಕವಾದರೂ, ಆಕ್ಷೇಪಗಳಿಲ್ಲದೇ, ಆಧುನಿಕ ಸೌಲಭ್ಯದ ಸುಸಜ್ಜಿತ ಸುಖಯಾನದ ರೈಲಿಗೆ ಕೇರಳದ ಪ್ರಯಾಣಿಕರ ಸ್ಪಂದನ ರೈಲ್ವೇಗೆ ಭರ್ಜರಿ ಆದಾಯ ತಂದೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಹೆಚ್ಚುವರಿ ಕೋಚ್ ಗಳ ರೈಲನ್ನು ಈ ರೂಟಿಗೆ ಹಾಕುತ್ತಿರುವುದು ಕೇರಳದ ವಂದೇಭಾರತ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಕಾಸರಗೋಡು -ತಿರುವನಂತಪುರ ನಡುವಣ ವಂದೇಭಾರತ್ ಬೆಳಿಗ್ಗೆ 5.50ಕ್ಕೆ ತಿರುವನಂತಪುರದಿಂದ ಹೊರಟು ಮಧ್ಯಾಹ್ನ 1.20ಕ್ಕೆ ಕಾಸರಗೋಡು ತಲುಪುತ್ತದೆ. ಮರಳಿ 2.30ಕ್ಕೆ ಕಾಸರಗೋಡಿನಿಂದ ಹೊರಡುವ ರೈಲು ರಾತ್ರಿ 10.40ಕ್ಕೆ ತಿರುವನಂತಪುರ ತಲುಪುತ್ತದೆ. ಇದೇ ರೀತಿ ಬೆಳಿಗ್ಗೆ 6.15ಕ್ಕೆ ಮಂಗಳೂರು ಸೆಂಟ್ರಲ್ ನಿಂದ ಹೊರಡುವ ವಂದೇಭಾರತ್ ಸಂಜೆ 3.15ಕ್ಕೆ ತಿರುವನಂತಪುರ ತಲುಪುತ್ತಿದೆ. ತಿರುವನಂತಪುರದಿಂದ ಸಂಜೆ 4.05ಕ್ಕೆ ಮರಳಿ ಹೊರಟರೆ ರಾತ್ರಿ 12.40ಕ್ಕೆ ಮಂಗಳೂರು ತಲುಪುತ್ತಿದೆ.
ಕಳೆದ 2023 ಎ. 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಸರಗೋಡು – ತಿರುವನಂತಪುರ ನಡುವಣ ವಂದೇಭಾರತ್ ರೈಲಿಗೆ ಚಾಲನೆ ನೀಡಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00