ಕಾಸರಗೋಡು ಜಿಲ್ಲೆಯೆಂದಲ್ಲ ಇಡೀ ನಾಡನ್ನೇ (ನಿನ್ನೆ) ಮಂಗಳವಾರ ಮುಂಜಾನೆ ಎದ್ದೇಳುವಾಗ ಗಾಬರಿ ಪಡಿಸಿದ ಸುದ್ದಿಯೆಂದರೆ ಜಿಲ್ಲೆಯ ನೀಲೇಶ್ವರ ಪೇಟೆಯಲ್ಲೇ ಇರುವ ಅಂಞ್ಞೂಟಂಬಲಂ ವೀರರ್ಕಾವ್ ದೈವಸ್ಥಾನದಲ್ಲಿ ನಟ್ಟ ನಡುರಾತ್ರಿಯ ವೇಳೆ ನಡೆದ ಪಟಾಕಿ ಶೇಖರಣೆಯ ಸ್ಫೋಟ!
150ಕ್ಕೂ ಅಧಿಕ ಮಂದಿ ಗಾಯಗೊಂಡು ಒಂದಿಡೀ ಊರು ಕಳಿಯಾಟ ಆರಂಭಕಾಲದ ಮೊದಲ ದಿನವೇ ನೆಮ್ಮದಿಯ ನಿದ್ದೆ ಇಲ್ಲದೇ ಆತಂಕದಿಂದ ಭಯವಿಹ್ವಲತೆಯಿಂದ ನಡುಗುತ್ತಲೇ ಮಲಗಿದೆ ಎಂದರೆ ನಿಜಕ್ಕೂ ನಡೆದದ್ದು ದುರಂತವೋ?
ದೈವ ದೋಷವೋ..???
ಮಳೆಗಾಲದ ಭರ್ತಿ ಐದು ತಿಂಗಳ ವಿಶ್ರಾಂತಿಯ ಬಳಿಕ ಅತ್ಯುತ್ತರ ಕೇರಳದ ಮಲಬಾರಿನಲ್ಲಿ ವರ್ಷಂಪ್ರತಿ ನೂತನ ಕಳಿಯಾಟಂ ಕಾಲದ ದೈವಾರಾಧನಾ(ತೈಯ್ಯಂ) ರುತುವಿಗೆ ಆರಂಭವಾಗುವುದೇ ನೀಲೇಶ್ವರದ ಅಂಞೂಟ್ಟಂಬಲಂ ವೀರರ್ಕಾವ್ ದೈವಸ್ಥಾನದಿಂದ. ಇಲ್ಲಿನ ಕಳಿಯಾಟವೇ ನಾಡಿನೆಲ್ಲಡೆಯ ಇತರ ಕಳಿಯಾಟಕ್ಕೆ ಮುನ್ನುಡಿ ಬರೆಯುವುದು, ಇಂದು ನಿನ್ನೆಯಿಂದಲ್ಲ ಪ್ರಾಚೀನ ವಾಡಿಕೆ.
ಹೀಗೆ ತುಲಾ ಮಾಸದ 10ನೇ ದಿನ ಅ. 27ರಂದು ಆರಂಭಗೊಂಡ ಇಲ್ಲಿನ ಕಳಿಯಾಟ ಸೋಮವಾರ ರಾತ್ರಿ ದೈವದರ್ಶನ ಆಗುತ್ತಿದ್ದಂತೆಯೇ ಸಿಡಿಮದ್ದು ಶೇಖರಣೆಯೇ ಸ್ಫೋಟಗೊಂಡು, ನೂರಾರು ಮಂದಿ ಗಾಯಗೊಂಡು, ನಾಡನ್ನಿಡೀ ಮೂಕವಾಗಿಸುತ್ತಾ ಸ್ತಬ್ಧವಾಗಿದೆ. ನಾಡಿನ ಕಳಿಯಾಟ ಉತ್ಸವಕ್ಕೆ ಮುನ್ನುಡಿ ಬರೆಯುವ ಕಳಿಯಾಟವೇ, ಇತಿಹಾಸದಲ್ಲಿ ಮೊದಲ ಬಾರಿಗೆ ಅಪೂರ್ಣವಾಗಿ ಆರಂಭದಲ್ಲಿ ಅಂತ್ಯ ಕಂಡಿದೆ! ಇದು ಏಕಾಯಿತು? ಈಗ ದೈವಾರಾಧಕರ ನಡುವೆ ಇದೇ ಮಾತು-ಕತೆ. ಇದೇ ಚರ್ಚೆ.
ಪ್ರಾಥಮಿಕ ತನಿಖೆಯಂತೆ ದೈವಸ್ಥಾನದ ಉತ್ಸವ ಸಮಿತಿಯವರ ನಿರ್ಲಕ್ಷಿತ ಬೇಜವಾಬ್ದಾರಿಯೇ ಕಾರಣ ಎಂದೆನ್ನಲಾಗುತ್ತಿದೆ. ಯಾವುದೇ ಪೂರ್ವಾನುಮತಿ ಪಡೆಯದೇ, ಪಾಲಿಸಬೇಕಾದ ಮುನ್ನೆಚ್ಚರಿಕೆಗಳಿಲ್ಲದೇ, ಯಾವುದೇ ಸುರಕ್ಷೆ ಇಲ್ಲದೇ ಉತ್ಸವದ ಸಿಡಿಮದ್ದನ್ನು ಸಂಗ್ರಹಿಸಿಟ್ಟದ್ದೇ ದುರಂತಕ್ಕೆ ಕಾರಣ ಎಂದು ಪೋಲೀಸರು ಮೇಲ್ನೋಟಕ್ಕೆಗುರುತಿಸಿ, ಕೇಸು ದಾಖಲಿಸಿಕೊಂಡಿದೆ. ಆದರೆ ಮಲಬಾರಿನ ಕಳಿಯಾಟಂ ರುತುವಿಗೆ ಮುನ್ನುಡಿ ಬರೆಯುವ ನೀಲೇಶ್ವರದ ಅಂಞ್ಞೂಟಂಬಲಂ ದೈವಸ್ಥಾನದಲ್ಲಿ ಇದೇ ಮೊದಲಬಾರಿಗೆ ಸಿಡಿಮದ್ದು ಸಿಡಿಸುವುದೇನಲ್ಲ! ಈ ಪರಂಪರೆ ಯಾವಾಗ ಆರಂಭವಾಯಿತೆಂದು ಯಾರಿಗೂ ಗೊತ್ತಿಲ್ಲ. ಈ ತಲೆಮಾರು ಹುಟ್ಟಿದಾರಭ್ಯದಿಂದ ಕಳಿಯಾಟ ದ ವೇಳೆ ಸಿಡಿಮದ್ದಿನ ಸ್ಫೋಟದ ಸದ್ದು ಕೇಳಿದ್ದಾರೆ, ವರ್ಣರಂಜಿತ ಪಟಾಕಿಗಳ ಚೆಲುವು ಆಸ್ವದಿಸಿದ್ದಾರೆ. ಆದರೆ ಈ ಬಾರಿ ಇದೇ ಮೊದಲ ಸಲ ಆರಂಭವೇ ಹೀಗೇಕಾಯಿತು??
ಇದಕ್ಕೆ ಉತ್ತರ ಹುಡುಕಬೇಕಿದೆ.
ನೀಲೇಶ್ವರ ವೀರರ್ಕಾವ್ ಅಂಞೂಟಂಬಲಂ ದೈವಸ್ಥಾನ ಕಾರಣಿಕ ದೈವ ಮೂವಾಳಂ ಕುಯಿ ಚಾಮುಂಡಿಯ ಮಲಬಾರಿನ ಆವಾಸಸ್ಥಾನ. ತುಳುನಾಡಿನ ಮಾತೃದೈವ ಚಾಮುಂಡಿ ಕೇರಳದಲ್ಲೂ ಇದ್ದು, ವರ್ಷಂಪ್ರತಿ ಅದರ ನೇಮಾರಂಭಗೊಳ್ಳುವುದೇ ನೀಲೇಶ್ವರದ ಇದೇ ದೈವಸ್ಥಾನದಿಂದ. ಆದರೆ ಈ ಬಾರಿ ಚಾಮುಂಡಿಯ ಕೋಲ ಕಟ್ಟುವ ಮೊದಲೇ ನಡುರಾತ್ರಿ ದೈವಸ್ಥಾನದಲ್ಲಿ ಪಟಾಕಿ ಶೇಖರಣೆ ಸ್ಪೋಟಿಸಿದೆ. ಕಟ್ಟಿದ ದೈವವೇ ಬಣ್ಣ ಅದ್ದಿ ಮಲಗಿದೆ. ಈ ಬಾರಿಯ ಕೋಲವನ್ನೇ ಬೇಡ ಎಂದು ನಿರ್ಧರಿಸಿದಾಗ, ಕೋಲಧಾರಿಗಳು ಮರಳಿದ್ದಾರೆ.!
ಕಳಿಯಾಟ ಆರಂಭವಾಗುವ ನೆಲದಿಂದಲೇ ದೈವಾರಾಧಕ ಕೋಲಧಾರಿಗಳು ನಿಷಾದಭಾವದಿಂದ ನಿರ್ಮಿಸಿದ್ದಾರೆ!!
ಏನಿದು ದುರಂತ..??
ನೀಲೇಶ್ವರ ಅಂಜ್ಞೂಂಟಂಬಲಂ ವೀರರ್ ಕಾವ್ ದೈವಸ್ಥಾನದಲ್ಲಿ ವಾಡಿಕೆಯಂತೆ ಅ. 27ರಂದು ಆದಿತ್ಯವಾರ ತುಲಾ 10ರಂದು ಸಾಂಪ್ರದಾಯಿಕ ಆಚರಣೆಯ ನೈಮಿತ್ತಿಕಗಳೊಂದಿಗೆ ಮಳೆಗಾಲ ಮುಗಿದು ನೂತನ ಕಳಿಯಾಟಂಗಳ ದೈವಕೋಲದ ಸೀಸನ್ ಗೆ ನಾಂದಿಯಾಗಿತ್ತು. ಹಗಲೂ ರಾತ್ರಿ ಎಂದಿಲ್ಲದೇ ದೈವಕೋಲಗಳಾಗುವುದು ರೂಢಿ. ಇದರಂತೆ ಸೋಮವಾರ ರಾತ್ರಿ ಸಾವಿರಾರು ಮಂದಿ ಸೇರಿದ್ದರು. ಆಗಾಗ ಸಿಡಿಸುವ ಪಟಾಕಿಯ ಕಿಡಿ ಮಧ್ಯರಾತ್ರಿ 12.30ರ ಸುಮಾರಿಗೆ ಪಟಾಕಿ ಶೇಖರಿಸಿಟ್ಟ ಕೋಣೆಗೂ ತಗುಲಬೇಕೇ?
ಅಲ್ಲೇ ಹತ್ತಿರ ನೂರಾರು ಮಹಿಳೆ, ಮಕ್ಕಳು ನೆರೆದು ತೈಯ್ಯಂ ನೋಡುತ್ತಿದ್ದರು. ಏಕಕಾಲಕ್ಕೆ ದಾಸ್ತಾನಿದ್ದ ಪಟಾಕಿ ಒಮ್ಮೆಲೇ ಸ್ಫೋಟಿಸಿ ಅಗ್ನಿಯ ಕೆನ್ನಾಲಗೆ ಚಾಚಿದಾಗ ನೆರೆದ ಸಾವಿರಾರು ಮಂದಿ ಭಯದಿಂದ ದಿಕ್ಕುಪಾಲಾಗಿ ಓಡಿದರು. ದೈವದ ವೆಳ್ಳಾಟವೂ ಸ್ತಬ್ಧವಾಯಿತು. ನಡುರಾತ್ರಿ ಭಕ್ತ ಜನತೆಗೆಂದೇ ತಯಾರಿಸಿಟ್ಟ 6ಸಾವಿರ ಮಂದಿಯ ಆಹಾರವೂ ಅನಾಥವಾಯಿತು..! ಎಲ್ಲಿ ಅಶರಣರಿಗೆ ದೈವ ಅಭಯವಾಕ್ಯಗಳನ್ನಿತ್ತು ಹರಸುತಿತ್ತೋ ಅದೇ ನೆಲ ನಟ್ಟ ನಡುರಾತ್ರಿ ಬಾಂಬ್ ಸಿಡಿದ ಯುದ್ಧ ಭೂಮಿಯಂತಾಯಿತು!
ದುರಂತದಲ್ಲಿ ಅದೃಷ್ಟವಶಾತ್ ಯಾರೊಬ್ಬರ ಜೀವಕ್ಕೂ ಈ ವರೆಗೆ ಅಪಾಯ ಸಂಭವಿಸಿಲ್ಲ. 158 ಮಂದಿಗಳನ್ನು ದುರಂತದ ಗಾಯಾಳುಗಳೆಂದು ಗುರುತಿಸಲಾಗಿದೆ. ರಾತ್ರೋ ರಾತ್ರಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಗಾಯಾಳುಗಳು ಬೆಂಕಿಯ ಬಲೆಯಿಂದ ಪಾರಾಗಿದ್ದಾರೆ. ಆದರೆ ರಾತ್ರಿಯ ಮಹಾಸ್ಫೋಟಕ್ಕೆ ಸಿಲುಕಿದ್ದನ್ನು ಈಗಲೂ ಗಾಬರಿಯಿಂದ ಮೆಲುಕುತ್ತಾರೆ.
ಇಷ್ಟಕ್ಕೂ ನೀಲೇಶ್ವರದ ದೈವಸ್ಥಾನದಲ್ಲಿ ಇಕ್ಕಟ್ಟಾದ ಜಾಗದಲ್ಲಿ ಕಳಿಯಾಟದ ವೇಳೆ ಸಿಡಿಮದ್ದು ಪ್ರದರ್ಶನ ನಡೆಯುತಿತ್ತು. ಯಾವ ಸುರಕ್ಷಿತ ವಾತಾವರಣವೂ ಇರಲಿಲ್ಲ. ಯಾವ ಪೂರ್ವಾನುಮತಿ ಪಡೆದಿರಲಿಲ್ಲ. ಪರಿಣಾಮ ಗಡಿನಾಡಿನ ದೇವಾಲಯಗಳ ಜಾತ್ರೆಯಂಗವಾದ ಸಿಡಿಮದ್ದು ಪ್ರದರ್ಶನಗಳಿಗೆ ಅಂಕುಶ ಬಲವಾಗಲು ಬೇರೆ ಕಾರಣಗಳೇ ಬೇಕಿಲ್ಲ!