ಕಾಸರಗೋಡು : ಅತ್ಯುತ್ತರ ಕೇರಳದ ತೈಯ್ಯಂ ಉತ್ಸವಗಳಿಗೆ ನಾಂದಿಯಾಗುವ ನೀಲೇಶ್ವರ ವೀರಕ್ಕಾವ್ ಅಂಞ್ಞೂಟಂಬಲಂ ಕಳಿಯಾಟದ ವೇಳೆ ಸಿಡಿಮದ್ದು ಶೇಖರಣೆ ಸ್ಪೋಟಿಸಿ 150ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ.
ಸೋಮವಾರ ಮಧ್ಯರಾತ್ರಿ 12ಗಂಟೆಯ ಬಳಿಕ ಈ ದುರ್ಘಟನೆ ನಡೆದಿದ್ದು, ಕೆಲವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ.
ರಾತ್ರಿ ಮೂವಾಳಂಕುಯಿ ಚಾಮುಂಡಿ ದೈವದ ವೆಳ್ಳಾಟ ನಡೆದ ಬೆನ್ನಲ್ಲೇ ಕ್ಷೇತ್ರ ಪರಿಸರದಲ್ಲಿ ಉತ್ಸವಕ್ಕೆಂದು ಶೇಖರಿಸಿಟ್ಟಿದ್ದ ಸಿಡಿಮದ್ದು ದಾಸ್ತಾನಿಗೆ ಅಗ್ನಿ ಸ್ಪರ್ಶವಾಗಿ ಅವಘಡ ಸಂಭವಿಸಿದೆ.
ರಾತ್ರಿ ತೈಯ್ಯಂ ಉತ್ಸವ ನೋಡಲೆಂದು ಬಂದಿದ್ದವರಲ್ಲನೇಕರು ಸ್ಪೋಟದಲ್ಲಿ ಗಾಯಗೊಂಡಿದ್ದು ಗಂಭೀರ ಗಾಯಗೊಂಡವರನ್ನು ಮಂಗಳೂರು, ಕಣ್ಣೂರು ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಹಲವರು ಕಾಙಂಗಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 150ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗುರುತಿಸಲಾಗಿದೆ.
ಐದು ತಿಂಗಳ ವಿಶ್ರಾಂತಿಯ ಬಳಿಕ ತುಲಾ ಹತ್ತರಂದು ಮತ್ತೊಂದು ತೈಯ್ಯಂ ಸೀಸನಿನ ಕಳಿಯಾಟ ಉತ್ಸವಕ್ಕೆ ನಾಂದಿಯಾಗುವ ದೈವಸ್ಥಾನಗಳಲ್ಲಿ ಇದು ಪ್ರಮುಖವಾಗಿದೆ.