“ಆಟ ಅಂದ್ರೆ ಹೀಗಿರಬೇಕು. ನೋಡಿ ಇದ್ರಲ್ಲಿ ಎಲ್ಲಾದರೂ ಒಂದು ತುಟಿ ಮೀರಿದ ಶಬ್ದ, ವಿನಾ ಕಾರಣದ ಅತಿಯಾದ ನರ್ತನ, ಅತಿರಂಜಕತೆ, ಅಸಭ್ಯ ಹಾಸ್ಯ ಏನಾದರೂ ಇತ್ತೇ…??
ಪಕ್ಕದಲ್ಲಿ ಕುಳಿತು ಯಕ್ಷಗಾನ ವೀಕ್ಷಿಸುತ್ತಿದ್ದ ಗತಕಾಲದ ಯಕ್ಷರಂಗದ ಮೋಹಕತಾರೆ, ರಾಜ್ಯೋತ್ಸವ ಪುರಸ್ಕೃತ ಕಲಾವಿದ ಎಂ. ಕೆ. ರಮೇಶಾಚಾರ್ ಕೇಳಿದರು.ನಾವೀರ್ವರೂ ಅಕ್ಕಪಕ್ಕ ಕುಳಿತು ಮಂಗಳೂರು ರಥಬೀದಿಯ ಕಾಳಿಕಾಂಬಾ ವಿನಾಯಕ ದೇವಾಲಯದಲ್ಲಿ ನಿನ್ನೆ ಕಡಬದ್ವಯ ಸಂಸ್ಮರಣೆಯಂಗವಾದ “ನಳ ದಮಯಂತಿ” ಆಖ್ಯಾನದ ಬಯಲಾಟ ನೋಡುತ್ತಿದ್ದವು.
ನಿಜಕ್ಕೂ ಅಪರೂಪದ ಮನೋಜ್ಞ ವಾದ ರಸಸ್ಪಂದೀ ಪ್ರದರ್ಶನ.
ಅದಕ್ಕೆ ಕಾರಣ ಭಾಗವತ ದಿನೇಶ ಅಮ್ಮಣ್ಣಾಯರ ಗಾನಸಾರಥ್ಯ. ಯಕ್ಷಗಾನದಲ್ಲಿ 90ರ ದಶಕದಲ್ಲಿ ಅವರ ಯವ್ವನದಲ್ಲಿ ಅವರು ಯಾವ ಸ್ವರಗಾಂಭೀರ್ಯದಲ್ಲಿ ಹಾಡಿದ್ದರೋ, ಅದೇ ಹಾಡುಗಾರಿಕೆಯ ಮಧುರ ಮಾಧುರ್ಯತೆಯನ್ನುಳಿಸಿಕೊಂಡ ಏಕೈಕ ಭಾಗವತ ಅವರು. ಅವರ ಭಾಗವತಿಕೆಯೇ ರಂಗ ಸೃಜಿಸುವ, ರಸಪುಷ್ಟವಾದ ಗಾನ ಮಾಧುರಿ. ಅದು ರಂಗಕ್ಕೆ ಕಾವೇರಿಸುವುದಕ್ಕಿಂತ ಜೀವಾಮೃತವನ್ನುಣಿಸುತ್ತದೆ. ಅದನ್ನು ಆಸ್ವಾದಿಸುವುದೇ ಅನನ್ಯ ಅನುಭವ.
ಹೀಗೆ ನಾವಿಬ್ಬರೂ ರಂಗದ ಕುರಿತು ಮಥಿಸುತ್ತಲೇ ಆಟ ಆಸ್ವಾದಿಸುತ್ತಿದ್ದೆವು.
ಅದು ಸುದೇವ ದಮಯಂತಿಯನ್ನು ಆಕೆಯ ಚಿಕ್ಕಮ್ಮನ ಮನೆಯಲ್ಲಿ ಕಂಡು ಗುರುತು ಹಚ್ಚುವ ಸಂದರ್ಭ.
ಇದು ಇಡೀ ಪ್ರಸಂಗದ ಅತ್ಯಂತ ಭಾವೋತ್ಕೃಷ್ಟ ಸನ್ನಿವೇಶ. ರಂಗದಲ್ಲಿ ಹಿಲಿಯಾಣ(ದಮಯಂತಿ),ರಕ್ಷಿತ್ ಪಡ್ರೆ (ಚಿಕ್ಕಮ್ಮ), ವಾದಿರಾಜ ಕಲ್ಲೂರಾಯ (ಸುದೇವ) ಇದ್ದರು. ಪ್ರೇಕ್ಷಕರ ಮನಮುಟ್ಟುವಂತೆ, ಕಂಗಳೊದ್ದೆಯಾಗುವಂತೆ, ಗಂಟಲದರುವಂತೆ ಮನೋಜ್ಞವಾಗಿಯೇ ದೃಶ್ಯ ಚಿತ್ರಿಸಿ ರಂಗಕಟ್ಟಿದರು. ಕೈಚಪ್ಪಾಳೆ ಪಡೆದರು. ಸುಮಾರು ಅರ್ಧ ಗಂಟೆಯ ಈ ಸನ್ನಿವೇಶಗಳನ್ನು ಗಮನಿಸಿದ ಎಂ. ಕೆ. ಯವರು ನೆನಪಿಗೆ ಜಾರಿದರು. ಚಿಕ್ಕಮ್ಮ, ದಮಯಂತಿ ಎರಡೂ ಪಾತ್ರಗಳು ನನಗಿಷ್ಟ. ನೂರಾರು ಸಲ ಮಾಡಿದ್ದೇನೆ. ಇಲ್ಲಿ ರಂಗದಲ್ಲಿರುವ ಮೂರೂ ಪಾತ್ರಗಳೂ ಸಣ್ಣದಲ್ಲ. ಆದರೆ ಈ ಸನ್ನಿವೇಷದಲ್ಲಿ ಸುದೇವನ ಪಾತ್ರ ಭಾವಹೀನವಾಗಿ ಬೆದರುಗೊಂಬೆಯಂತೆ ರಂಗದಲ್ಲಿ ನಿಲ್ಲಬೇಕಾದುದು ವಿಷಾದನೀಯ..
ಅದಕ್ಕೇನ್ಮಾಡಬಹುದು..?
ಎಂದರು.
ಇಷ್ಟಕ್ಕೂ ಚಿಕ್ಕಮ್ಮ – ದಮಯಂತಿ ಸಂವಾದದ ನಡುವೆ ಸುದೇವ ಅಲ್ಲೇ ಇರಬೇಕೇಕೆ..? ದಮಯಂತಿಯನ್ನು ಗುರುತು ಹಚ್ಚಿದ ವಿಷಯ ತಿಳಿಸಿದ ಬಳಿಕ ಸುದೇವನಿಗೊಂದು ವಿಶ್ರಾಂತಿ ಕೊಡಿಸಬಾರದೇ?
ಒಂದು ಪದ್ಯ ಹೆಚ್ಚುವರಿ ಯಾದರೆ ಸಾಕಲ್ಲ? ಅಂದೆ. ಹೌದೌದು.. ಅದನ್ನು ನಾನೇ ಮಾಡ್ತೇನೆ. ಬೇರೆಲ್ಲಾದರೂ ಈ ಪ್ರಸಂಗ ಆಡುವಾಗ ಸೂಚಿಸಿ ಎಂದರು. ಯಕ್ಷಗಾನದಲ್ಲಿ ಇಂಥದ್ದು ಅನೇಕ ಇವೆ ಎಂದರು.
ಒಂದು ಸಭ್ಯ, ಮನೋಜ್ಞ ರಸಪೋಷಕ ಪ್ರಸಂಗವನ್ನು ಆಸ್ವಾದಿಸುತ್ತಲೇ ರಂಗದ ಮರ್ಮವನ್ನು ಹಿರಿಯರಾದ ಎಂ. ಕೆ.ರಮೇಶಾಚಾರ್ ಅಂತವರೊಂದಿಗೆ ಮಾತಾಡಿ ಅನುಭವಿಸುವುದರಲ್ಲೂ ಸಭ್ಯ ಸುಖವಿದೆ. ಇದು ಕಲೆಯನ್ನು ಚಿಕಿತ್ಸಾತ್ಮಕವಾಗಿ ನೋಡುವ ವಿಧಾನಗಳಲ್ಲೊಂದು
ಈಗ ಕಾಲ ಬದಲಾಗಿದೆ. ತಲೆಮಾರಿನ ಪ್ರೇಕ್ಷಕ ಮನೋಸ್ಥಿತಿ ಬದಲಾಗಿದೆ. ಯಕ್ಷಗಾನದ ಹೆಸರಲ್ಲಿ ಮಾಡಿದ್ದೆಲ್ಲವೂ ಯಕ್ಷಗಾನವಾದ ಕಾಲದಲ್ಲಿ ಭಾವರಸ ಗಂಭೀರವಾದ ದಮಯಂತಿ ಪುನರ್ ಸ್ವಯಂವರದಂಥ ಪ್ರಸಂಗ ಇರಿಸಿಕೊಳ್ಳುವವರೇ ಕಡಿಮೆ. ಇಟ್ಟರೂ ಗೆಲ್ಲಿಸಿಕೊಡುವ ಕಲಾವಿದರೂ ವಿರಳ. ಹಾಗಿದ್ದರೆ ಭಾವರಸ ಪೋಷಿಸುವ ರಸೋತ್ಕೃಷ್ಟತೆ ಸೃಜಿಸುವ ಕಲಾವಿದರು ಕ್ಷೀಣಿಸುತ್ತಾರೆ ಎಂದರ್ಥವಲ್ಲವೇ??
ಇರಲಿ, ಈಗ ಹಿರಿಯ ಕಲಾವಿದರು ಮೊದಲ ಸೀಟಲ್ಲಿ ಕುಳಿತು ಆಟ ನೋಡುವುದನ್ನೇ ಕಾಣುವುದಿಲ್ಲ. ಇದ್ದರೂ ವಿರಳಾತಿವಿರಳ. ಅಂಥದ್ರಲ್ಲಿ ಎಂ. ಕೆ. ರಮೇಶಾಚಾರ್ ಅವರು ಮಂಗಳೂರಲ್ಲಿ ಇಡೀ ಆಟವನ್ನು ಪ್ರೇಕ್ಷಕನಾಗಿ ನೋಡಿದ್ದೂ ವಿಶೇಷವೇ ಹೌದು. ಹಿರಿಯ ಕಲಾವಿದರು ನೋಡುವುದು ಎಂದರೇನು? ನೋಡುವುದೆಂದರೆ ಆಸ್ವಾದಿಸುವುದಷ್ಟೇ ಅಲ್ಲ, ಚಿಕಿತ್ಸಾತ್ಮಕವಾಗಿ ರಂಗನಿರ್ಣಯಿಸುವ ತೀರ್ಪುಗಾರಿಕೆಯೂ ಹೌದು.
ಒಂದರ್ಥದಲ್ಲಿ ಎಳೆಯ ಕಲಾವಿದರ ಪ್ರದರ್ಶನಗಳನ್ನೆಲ್ಲ ಹಿರಿಯರು ನೋಡಿದರೇನೇ ಚಂದ..