ಹೊಸಂಗಡಿ : ಕನ್ನಡ ಭಾಷೆ ,ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ ,ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ‘ ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ ಎಂಬ ಕಾರ್ಯಕ್ರಮದಂಗವಾಗಿ 95 ರ ಹರೆಯದ ಹಿರಿಯ ಚೇತನ,ಕವಿ,ಪ್ರಸಂಗಕರ್ತ,ನಿವೃತ್ತ ಅಧ್ಯಾಪಕ ಯಂ.ತಿಮ್ಮಣ್ಣ ಭಟ್ಟರನ್ನು ಧರ್ಮತ್ತಡ್ಕದ ಮೇಪೋಡಿನಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆ ತ್ತೋಡಿ ಅವರು ತಿಮ್ಮಣ್ಣ ಭಟ್ ಅವರಿಗೆ ಶಾಲುಹೊದೆಸಿ,ಫಲಪುಷ್ಪ,ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.
ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ರಬಂಧಕ ಎನ್. ಶಂಕರನಾರಾಯಣ ಭಟ್ ಅಭಿನಂದನಾ ಭಾಷಣ ಮಾಡಿ ಅಧ್ಯಾಪಕರಾಗಿ,ಕವಿಯಾಗಿ,ಯಕ್ಷಗಾನ ಪ್ರಸಂಗಕರ್ತರಾಗಿ ತಿಮ್ಮಣ್ಣ ಭಟ್ ಅವರು ನೀಡಿದ ಕೊಡುಗೆಗಳನ್ನು ವಿವರಿಸಿದರು.ಕಸಾಪ ಸಂಘಟನಾ ಕಾರ್ಯದರ್ಶಿ ಪಿ. ರಾಮಚಂದ್ರ ಭಟ್ ತಿಮ್ಮಣ್ಣ ಭಟ್ ಅವರ ಕವನಗಳ ವಾಚನ ಮಾಡಿದರು.
ನ್ಯಾಯವಾದಿ ಪ್ರದೀಪ್ ರಾವ್ ಮೇಪೋಡು, ಸಮಾಜ ಸೇವಕ ಶಂಕರ ರಾವ್ ಕಕ್ವೆ,ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ ರಾವ್, ಕೃಷಿಕ ದಂಡೆಪಾಡಿ ಕೇಶವ ಭಟ್, ಧರ್ಮತ್ತಡ್ಕ,ಗ್ರಂಥಾಲಯ ಕಾರ್ಯದರ್ಶಿ ರವಿಚಂದ್ರ, ‘ಯುವಶಕ್ತಿ’ ಅಧ್ಯಕ್ಷ ಮಾಧವ.ಯಂ ಶುಭಹಾರೈಸಿದರು.ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ತಿಮ್ಮಣ್ಣ ಭಟ್ ಅವರು ನಶ್ವರವಾದ ಮಾನವನ ಬದುಕನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೆ ಪರೋಪಕಾರಕ್ಕೆ,ಸಮಾಜಸೇವೆಗೆ ಮೀಸಲಿರಿಸಬೇಕೆಂದು ಕರೆನೀಡಿದರು.
ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಧರ್ಮತ್ತಡ್ಕ ಯುವಕ ಸಂಘ ಗ್ರಂಥಾಲಯದ ಅಧ್ಯಕ್ಷ ರವಿಲೋಚನ ಚೆಕ್ಕೆ ಧನ್ಯವಾದ ಸಮರ್ಪಿಸಿದರು.