ಮಂಗಳೂರು : ದುರಭಿಮಾನ, ಮದ, ಮಾತ್ಸರ್ಯಗಳಿಲ್ಲದ ಸಜ್ಜನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯರಂತಹ ಕಲಾವಿದರು ಬಹಳ ಅಪರೂಪ. ಶುದ್ಧವಾದ, ಯಾವುದೇ ಕಸರತ್ತುಗಳಿಲ್ಲದ ಯಕ್ಷಗಾನೀಯವಾದ ನೈಜ ಹಾಸ್ಯದಿಂದ ಸಹೃದಯಿ ಯಕ್ಷಪ್ರೇಮಿಗಳ ಹೃದಯ ಗೆದ್ದ ಕಲಾವಿದರು ಬಂಟ್ವಾಳ ಜಯರಾಮ ಆಚಾರ್ಯರು ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ, ಪ್ರಸಿದ್ಧ ಯಕ್ಷಗಾನ ಕಲಾವಿದ ಎಂ. ಕೆ. ರಮೇಶ ಆಚಾರ್ಯರು ನುಡಿದರು.
ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್, ಮಂಗಳೂರು ವಿಶ್ವಬ್ರಾಹ್ಮಣ ಸಮಾಜದ ಇತರ ಸಂಘಟನೆಗಳ ಸಹಯೋಗದೊಂದಿಗೆ ಪಟ್ಟೆ ಲಿಂಗಪ್ಪ ಆಚಾರ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಂಟ್ವಾಳ ಜಯರಾಮ ಆಚಾರ್ಯರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಮಂಗಳೂರು ಯಕ್ಷಾಂಗಣದ ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿಯವರು ಯಕ್ಷಗಾನದ ಪರಂಪರೆಯ ಹಾಸ್ಯದ ಅನರ್ಘ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಎಂದರು. ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಬಂಟ್ವಾಳ ಜಯರಾಮ ಆಚಾರ್ಯರ ವ್ಯಕ್ತಿತ್ವ ಹಾಗೂ ಸಾಧನೆ ಯುವ ಕಲಾವಿದರಿಗೆಲ್ಲಾ ಪ್ರೇರಣದಾಯಿ ಎಂದರು. ಕಡಬ ಸಂಸ್ಮರಣಾ ವೇದಿಕೆಯ ಗೌರವಾಧ್ಯಕ್ಷರಾದ ಜಿ. ಟಿ. ಆಚಾರ್ಯರು, ನಿಯತ್ತು ಹಾಗೂ ನಿರಭಿಮಾನದ ಪ್ರತೀಕ ಜಯರಾಮ ಆಚಾರ್ಯ ಎಂದರು. ತಮ್ಮ ಸಾಧನೆಯಿಂದ ವಿಶ್ವಕರ್ಮ ಸಮಾಜಕ್ಕೇ ಗೌರವವನ್ನು ತಂದಿತ್ತವರು ಜಯರಾಮ ಆಚಾರ್ಯರು, ಎಂದರು
ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷ, ಡಾ. ಎಸ್. ಆರ್. ಹರೀಶ ಆಚಾರ್ಯರು. ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಮಾಜಿ ಮೊಜ್ತೇಸರರಾದ ಜಿ. ಸುಂದರ ಆಚಾರ್ಯ ಬೆಳುವಾಯಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ ಸಿದ್ಧಕಟ್ಟೆ, ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್, ಎಸ್. ಕೆ. ಗೋಲ್ಡ್ ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ವಿ. ಜೆ. ಆಚಾರ್ಯ, ಮುಂಬೈ ವಿಶ್ವಕರ್ಮ ಅಸೋಸಿಯೇಷನ್ ನ ಉಪಾಧ್ಯಕ್ಷ ಗಣೇಶ್ ಕುಮಾರ್, ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಮಾಜಿ ಅಧ್ಯಕ್ಷ ಪಿ. ಆರ್. ಗೋಪಾಲಕೃಷ್ಣ, ಲೇಖಕ ಪಶುಪತಿ ಉಳ್ಳಾಲ ಶ್ರದ್ಧಾಂಜಲಿ ಅರ್ಪಿಸಿದರು. ಕಲಾ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಯಜ್ಞೇಶ್ವರ ಆಚಾರ್ಯ ಕೃಷ್ಣಾಪುರ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವಕರ್ಮ ಕಲಾ ಪರಿಷತ್ತಿನ ಕೋಶಾಧಿಕಾರಿ ಎ. ಜಿ. ಸದಾಶಿವ, ಪ್ರಧಾನ ಕಾರ್ಯದರ್ಶಿ ರಮ್ಯಾ ಲಕ್ಷ್ಮೀಶ್, ಪದಾಧಿಕಾರಿಗಳಾದ ಪ್ರೊ. ಜಿ. ಯಶವಂತ ಆಚಾರ್ಯ, ದಿನೇಶ. ಟಿ. ಶಕ್ತಿನಗರ, ತಾರಾನಾಥ ಆಚಾರ್ಯ, ಸುಧಾಮ ಆಚಾರ್ಯ, ನಾಗರಾಜ ಆಚಾರ್ಯ ಕೊಂಚಾಡಿ, ಪ್ರಶಾಂತ್ ಕೋಟೆಕಾರ್, ಶ್ರೀವಿದ್ಯಾ ಮುಂತಾದವರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ಕುಂಟಾಡಿ ವಂದಿಸಿದರು. ಆಗಮಿಸಿದ ಕಲಾಭಿಮಾನಿಗಳು ಹಾಗೂ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ಜಯರಾಮ ಆಚಾರ್ಯರ ಕುಟುಂಬಕ್ಕೆ ಆರ್ಥಿಕ ನೆರವನ್ನು ನೀಡಲು ನಿರ್ಧರಿಸಲಾಯಿತು.