ಇನ್ನು ಕೇರಳ ಕರಾವಳಿಯ ಮಲಬಾರಿನ ಪಾಲಿಗೆ ಭೂತಕಾಲ!
ಅಂದರೆ ದೈವಾರಾಧನೆಯ ಭೂತ ಸಂಕಲ್ಪಗಳ ಆಚಾರನುಷ್ಠಾನ ಕಾಲ. ಭರ್ತಿ ಐದು ತಿಂಗಳ ವಿಶ್ರಾಂತಿಯ ಬಳಿಕ ತುಲಾ ಮಾಸದ 10ನೇ ದಿನವಾದ ಇಂದು (ಆ. 27)ಆರಂಭಗೊಳ್ಳುವ ಮಲಬಾರಿನ ತೈಯ್ಯಂ ಋತುವಿಗೆ ನಾಂದಿಯಾಗುವುದೇ ಕಾಸರಗೋಡು ಜಿಲ್ಲೆಯ ನೀಲೇಶ್ವರದಿಂದ…
ತೈಯ್ಯಂ ಅಥವಾ ದೈಯ್ಯೋ ಸಂಕಲ್ಪ ತುಳುನಾಡಿನ ಅತೀ ಪುರಾತನ ನೆಲಮೂಲ ಆರಾಧನಾ ಸಂಸ್ಕೃತಿ. ಇದು ಜಾತಿ ತಾರತಮ್ಯಗಳ ವರ್ಣ ವಿವೇಚನೆಗಳನ್ನು ಮೀರಿದ ಜನಪದ ಆರಾಧನಾ ಸಂಕಲ್ಪ. ಇಂಥ ದೈವಾರಾಧನೆ ಭರ್ತಿ ಐದು ತಿಂಗಳ ವಿಶ್ರಾಂತಿಯ ಬಳಿಕ ಇಂದು ಮತ್ತೊಂದು ನೂತನ ರುತುವಿಗೆ ಕಾಲೂರುತ್ತಿದೆ. ಇನ್ನು ಗಡಿನಾಡಿನ ಗಡಿ ದಾಟಿದರೆ ಗ್ರಾಮಗಳ ತಾನ, ಗುಡಿಗೋಪುರಗಳಿಂದ ಚೆಂಡೆಯ ಅನುರಣನ ಕೇಳಬಹುದು. ತೋತ್ತಂ ಪಾಟುಗಳು ಮೊಳಗುವುದನ್ನು ಆಲಿಸಬಹುದು. ಉಗ್ರಮೂರ್ತಿಗಳ ಅಟ್ಟಹಾಸದ ಅಗ್ನಿ ನರ್ತನ ನೋಡಬಹುದು. ಊರಿಗೆ ಊರೇ ನೆರೆಯುವ ಕಳಿಯಾಟದ ಕಳದಲ್ಲಿ ಆಶ್ರಿತರಿಗೆ ಅಭಯ ನೀಡುವ ಅಭಯವರದಾಯಕವಾದ ದೈವಗಳ ಮನದಮಾತನ್ನು ಆಲಿಸಬಹುದು. ಹೀಗೆ ಏಳು ತಿಂಗಳ ಭೂತಾರಾಧನಾ ಪರ್ವವೊಂದಕ್ಕೆ ದೀಪಾವಳಿ ಮುನ್ನವೇ ಮುನ್ನುಡಿ ಬರೆಯುವುದು ಗಡಿನಾಡಿನ ಮಲಬಾರಿನ ಪ್ರಾಚೀನ ಸಂಪ್ರದಾಯ.
ಕಾಸರಗೋಡು ಜಿಲ್ಲೆಯ ನೀಲೇಶ್ವರದ… ವೀರನ್ ಕಾವ್ ಮತ್ತು ಕಂಬಲ್ಲೂರಿನಲ್ಲಿ ತೈಯ್ಯಂ ಆರಂಭವಾಗುವುದರೊಂದಿಗೆ ಮಲಬಾರಿನ ಕಳಿಯಾಟಕ್ಕೆ ನಾಂದಿಯಾಗುತ್ತಿರುವುದು ಪ್ರಾಚೀನ ರೂಢಿ. ಇನ್ನು ಮಲಬಾರಿನಾದ್ಯಂತ ದೈವಸ್ಥಾನಗಳಲ್ಲಿ ಉತ್ಸವಕ್ಕೆ ಬಗೆ ಬಗೆಯ ಉಗ್ರರೂಪಿ ದೈವಗಳೆಲ್ಲ ಭಕ್ತರನ್ನು ಪೊರೆಯುವ ಕಾಲ.
ಅರ್ಥಾತ್ ಮಲಬಾರಿನಲ್ಲಿನ್ನು ನೈಜ ಉತ್ಸವ ಕಾಲ. ಹೀಗಾಗಿ ಮಲಯಾಳಿ ತರವಾಡುಗಳಲ್ಲಿ ಇಂದು ವಿಶೇಷ ಆರಾಧನೆ.
ಮಲಬಾರಿನಲ್ಲಿ ಸುಮಾರು 500ಕ್ಕೂ ಅಧಿಕ ದೈವಗಳಿದೆ ಎಂಬುದು ಸಂಕಲ್ಪ. ಈ ಪೈಕಿ 120ರಷ್ಟು ದೈವಗಳನ್ನು ಕಟ್ಟಿ ಆಡಲಾಗುತ್ತಿದೆ. ಈ ಪೈಕಿ ಅತ್ಯಧಿಕ ಕಡೆ ವಿಷ್ಣುಮೂರ್ತಿ, ಗುಳಿಗ ದೈವಗಳೇ ಪ್ರದರ್ಶನವಾದರೆ ಉಳಿದಂತೆ ಅತೀ ಹೆಚ್ಚು ಆರಾಧನೆ ಪಡೆಯುವುದು ಮಾತ್ತೃ ಸ್ವರೂಪಿ ದೈವಗಳಾದ ಭಗವತಿ, ಚಾಮುಂಡಿ ಮೊದಲಾದ ದೈವಗಳು. ದೈವಗಳ ಆರಾಧನೆ ತುಳುನಾಡಿನದ್ದು. ರಾಜ್ಯವನ್ನು ಭೌಗೋಳಿಕವಾಗಿ ವಿಂಗಡಿಸಬಹುದು. ಆದರೆ ಆರಾಧನೆಯನ್ನು ವಿಂಗಡಿಸಲಾಗುತ್ತದೆಯೇ?
ಇದಕ್ಕೆ ನಿದರ್ಶನವೇ ದೈವಾರಾಧನೆ ಸಂಪ್ರದಾಯದ ಸೀಮಾರೇಖೆ!
ಕೇರಳದ ಕಣ್ಣೂರು, ಕಾಸರಗೋಡು ಮತ್ತು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸೀಮಿತವಾದ ದೈವಾರಾಧನೆಯಲ್ಲಿ ರಾಜ್ಯ ಪುನರ್ವಿಂಗಡಣೆಗೆ ಮೊದಲೇ ಚಂದ್ರಗಿರಿಯ ತೀರದಿಂದಾಚೆಗಿನ ದೈವಗಳಿಗೆ ಮಲಯಾಳೀ ಅನುಷ್ಠಾನವೇ ಆಚಾರ ಕ್ರಮ. ಅಲ್ಲಿಂದೀಚೆಗೆ ಆರಂಭವಾಗುವ ಕುಂಬ್ಳೆ ಸೀಮೆಯಿಂದ ಮೊದಲ್ಗೊಳ್ಳುವ ತುಳುನಾಡಿನ ಅನುಷ್ಠಾನ ಕ್ರಮಗಳೇ ಬೇರೆ..
ಇಷ್ಟಕ್ಕೂ ತುಳುನಾಡಲ್ಲಿ ದೈವಾರಾಧನೆಗೆ ವಾಸ್ತವದಲ್ಲಿ ವಿಶೇಷ ರಜೆಯ ಬಿಡುವೆಂಬುದೇ ಇಲ್ಲ!
ಆಯಾಯ ಸೀಮೆಯ, ಗ್ರಾಮದ ಕಟ್ಟುಪಾಡುಗಳಂತೆ ಅಲ್ಲಿನ ದೈವಾರಾಧನೆ ನಿಗದಿಯಾಗಿರುತ್ತದೆ. ವಿಶೇಷವಾಗಿ ತುಳುವರಾಜ್ಯದ ಹೆಬ್ಬಾಗಿಲು ಕುಂಬ್ಳೆ ಸೀಮೆಯಲ್ಲಿ ದೈವಗಳಿಗೆ ರಜಾಕಾಲವಿಲ್ಲ ಎಂಬುದೇ ವೈಶಿಷ್ಠ್ಯ! ಇಲ್ಲಿ ಆಟಿ ತಿಂಗಳಲ್ಲೂ ದೈವಾರಾಧನೆ ನಡೆಯುವ ಜಾಗವಿದೆ! ಸೋಣ ತಿಂಗಳಲ್ಲಿ ಮಾತ್ರವೇ ದೈವದದರ್ಶನಗಳಿಲ್ಲ!
ಪ್ರಾಚೀನ ಸಂಪ್ರದಾಯದಂತೆ ಬೇರೆ, ಬೇರೆ ಸಮಯದಲ್ಲಿ ನೇಮಗಳಾಗುವ ಜಾಗವಿದೆ. ಆದರೆ ಸಾರ್ವತ್ರಿಕವಾದ ಸಾರ್ವಜನಿಕ ನೇಮಗಳು ಶುರುವಾಗುವುದೇ ದೀಪಾವಳಿ ಪರ್ಬದ ಪಾಡ್ಯದ ಬಳಿಕ..
ತೈಯ್ಯಂ -ಟೂರಿಸಂ ಕಾಲ..
ತುಳುನಾಡಿಗೆ ಹೋಲಿಸಿದರೆ ಕೇರಳದ ಮಲಬಾರಿನ ದೈವಗಳ ಕೋಲದ ಕಳಿಯಾಟಂ ಉತ್ಸವಗಳು ಪರಿಷ್ಕೃತ ಮತ್ತು ಆಕರ್ಷಣೀಯ. ಕಲಾತ್ಮಕವಾಗಿ, ಸಾಹಿತ್ಯಕವಾಗಿ ಪ್ರೌಢತೆ ಕಾಪಾಡಿದೆ. ಈ ಕಾರಣದಿಂದಲೇ ತೈಯ್ಯಂ ರುತು ಮುಗಿಯುವುದು ಮತ್ತು ಆರಂಭಕಾಲಕ್ಕೆ ಕೇರಳೀಯ ಸಾಂಸ್ಕೃತಿಕ ಮನಸ್ಸುಗಳ ಮಾಧ್ಯಮ ಇದಕ್ಕೆ ಭರ್ಜರಿ ಪ್ರಚಾರ ನೀಡುವುದು ವಾಡಿಕೆ. ಇತ್ತೀಚಿನ ದಶಕದಲ್ಲಿ ಕೇರಳದಲ್ಲಿ ಪ್ರಮುಖ ತೆಯ್ಯಂ ನಡೆಯುವ ಜಾಗ, ದಿನಾಂಕ, ವಿವರ ಪ್ರಕಟಿಸುವ ತೈಯ್ಯಂ ಸೀಸನ್ ನ ಕ್ಯಾಲಂಡರ್ ಪ್ರಕಟಿಸುವುದು ರೂಢಿಯಾಗಿದೆ. ಪರಿಣಾಮ ದೇಶ, ವಿದೇಶಗಳಿಂದ ತೈಯ್ಯಂ ನೋಡಲೆಂದೇ ಬರುವವರ ಸಂಖ್ಯೆ ಕೇರಳವನ್ನು ಪ್ರವಾಸೋದ್ಯಮದಲ್ಲಿ ಬೆಳೆಸುತ್ತಿದೆ. ಸರಕಾರವೂ ಸಾಂಸ್ಕೃತಿಕ ಪ್ರವಾಸೋದ್ಯಮ ಕ್ಕೆ ಒತ್ತುನೀಡುತ್ತಿದೆ. ಒಟ್ಟಂದದಲ್ಲಿ ನಾಡೊಂದರ ನಲ್ಮೆಯನ್ನಷ್ಟೇ ಬಯಸಿದ್ದ ಕೃಷಿ ಸಂಸ್ಕೃತಿಯ ಧ್ವನಿಯಾದ ದೈವಾರಾಧನಾ ಸಂಪ್ರದಾಯದ ರುತು ನಮ್ಮ ಕಣ್ಣೆದುರೇ ಪಲ್ಲಟ ಕಾಣುತ್ತಿದೆ ಎನ್ನುವುದನ್ನು ಸಾಂಸ್ಕೃತಿಕ ವಿಪರ್ಯಾಸ ಎನ್ನಬೇಕು?
ಏಕೆಂದರೆ ದೈವಾರಾಧನೆಗೆ ಸೀಮಿತವಾಗಿದ್ದ ದೈಯ್ಯೊಗಳು ಕಾಲವನ್ನು ಮೀರಿದೆ. ತನ್ನ ವ್ಯಾಪ್ತಿಯ ಗಡಿ ದಾಟಿದೆ. ಮೈಸೂರು, ಬೆಂಗಳೂರಲ್ಲೂ ಕೊರಗಜ್ಜನ ಕೋಲ ನಡೆಯುತ್ತದೆ. ಕೊಚ್ಚಿ, ತಿರುವನಂತಪುರದಲ್ಲೂ ಭಗವತಿ ,ವಿಷ್ಣುಮೂರ್ತಿ ಕೋಲ ನಡೆಯುತ್ತದೆ!
ಇಂಥ ವಿಪರ್ಯಾಸಗಳ ಕಾಲದಲ್ಲೂ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿಕೊಂಡ ಧ್ಯೇಯನಿಷ್ಠರಿದ್ದಾರೆ. ಅವರ ತ್ಯಾಗದ ಕಾಳಜಿಯಿಂದ ಇಂಥ ಆರಾಧನೆಗಳು ನಂಬಿಕೆಯ ಗೌರವ ನಡೆಯುತ್ತಿವೆ.