ಆಸ್ಪತ್ರೆಗಳ ಚಿಕಿತ್ಸಾ ಲೋಪದ ಆಪಾದನೆಯಂತೆ ಇನ್ನು ದಾದಿಯರನ್ನು ಬಂಧಿಸುವಂತಿಲ್ಲ. ದಾದಿಯರ ಕರ್ತವ್ಯ ಲೋಪದಂತೆ ಅವರನ್ನು ಬಂಧಿಸಕೂಡದು ಎಂದು ಹೇಳಿರುವುದು ಕೇರಳಾ ಹೈಕೋರ್ಟು. ಈ ಸಂಬಂಧ ಮೂರು ತಿಂಗಳಲ್ಲಿ ಸರಕಾರ ಸುತ್ತೋಲೆ ಹೊರಡಿಸಬೇಕೆಂದೂ ಹೈಕೋರ್ಟು ತಿಳಿಸಿದೆ.
ಕೇರಳದ ಚೇರ್ತಲ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿದ್ದ ಮಹಿಳೆಯೋರ್ವರ ವಿರುದ್ಧ ಉದ್ದೇಶಪೂರ್ವಕ ಅಲ್ಲದ ನರಹತ್ಯಾ ಕೇಸನ್ನು ಪೋಲೀಸರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಕೇಸನ್ನು ರದ್ದುಗೊಳಿಸಿ ದಾದಿಯರ ವಿರುದ್ಧ ಕೇಸು ದಾಖಲಿಸುವಂತಿಲ್ಲ ಎಂದು ಹೈಕೋರ್ಟ್ ತೀರ್ಪಿತ್ತಿದೆ.
10 ವರ್ಷದ ಮಗು ಚಿಕಿತ್ಸಾ ಸಂದರ್ಭದಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆಯೊಂದಕ್ಕೆ ಸಂಬಂಧಿಸಿ ದಾದಿಯ ವಿರುದ್ಧ ಕೇಸು ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿ ರೋಗಿಗಳ ಪರಿಚರಣೆಯೊಂದಿಗೆ ಚಿಕಿತ್ಸಾ ಕಾಯಕದಲ್ಲಿ ಹಗಲೂ, ರಾತ್ರಿ ಬಿಡುವಿಲ್ಲದೇ ದುಡಿಯುವ ದಾದಿಯರ ಕರ್ತವ್ಯವನ್ನು ಲಘುವಾಗಿ ಪರಿಗಣಿಸದೇ ಮಾನಿಸಬೇಕೆಂದೂ ಹೈಕೋರ್ಟು ಅಭಿಪ್ರಾಯಪಟ್ಟಿದೆ.
ಚಿಕಿತ್ಸಾ ಲೋಪವೆಂಬ ಆರೋಪದ ಹಿನ್ನೆಲೆಯಲ್ಲಿ ವೈದ್ಯರುಗಳ ವಿರುದ್ಧ ಕೇಸು ದಾಖಲಿಸುವ ಸಂದರ್ಭ ಬಂದರೆ ಕೇಸು ದಾಖಲಿಸುವ ಮುನ್ನ ತಜ್ಞ, ಪರಿಣತರ ಜತೆ ಸಮಾಲೋಚಿಸಬೇಕೆಂದೂ ನ್ಯಾಯಾಲಯ ತಿಳಿಸಿದೆ.
ಇದೇ ರೀತಿಯ ಕಾನೂನು ಸಂರಕ್ಷಣೆಯನ್ನು ದಾದಿಯರಿಗೂ ಖಚಿತಪಡಿತಸಬೇಕು. ವೈದ್ಯರ ಕರ್ತವ್ಯ ಸಂರಕ್ಷಣೆಯ ಸಲುವಾಗಿ 2008ರಲ್ಲಿ ಹೊರಡಿಸಲಾದ ಸುತ್ತೋಲೆಗೆ ಸಮಾನವಾಗಿ ದಾದಿಯರ ಕರ್ತವ್ಯ ಸಂರಕ್ಷಣೆಗೂ ಕಾನೂನು ಸಂರಕ್ಷಣೆಯ ಸುತ್ತೋಲೆಹೊರಡಿಸಬೇಕೆಂದದು ಹೈಕೋರ್ಟು ನ್ಯಾಯಮೂರ್ತಿಗಳಾದ ಜಸ್ಟಿಸ್ ಪಿ. ವಿ. ಕುಂಞಿಕೃಷ್ಣನ್ ಆದೇಶಿಸಿದ್ದಾರೆ.