ಕಣಿಪುರ ಸುದ್ದಿಜಾಲ (ಅ. 27)
ಮಂಗಳೂರು: ತೆಂಕಣ ಯಕ್ಷಗಾನದ ಅದ್ವಿತೀಯ ಹಿಮ್ಮೇಳ ತಾರೆಗಳಾದ ದಿ. ಕಡಬದ್ವಯರ ಹೆಸರಲ್ಲಿ ವರ್ಷಂಪ್ರತಿ ನೀಡುವ ಕಡಬದ್ವಯ ಪ್ರಶಸ್ತಿ ಈ ಬಾರಿ ಪ್ರಶಸ್ತಿಯ ಅಭಿನಂದನೆಯ ಬದಲಿಗೆ ಸಂಸ್ಮರಣೆಯ ನುಡಿನಮನವಾದದ್ದೇ ವೈಶಿಷ್ಠ್ಯ ಮತ್ತು ವಿಪರ್ಯಾಸ!
ತೆಂಕಣ ಯಕ್ಷಗಾನ ಹಿಮ್ಮೇಳದ ಮಹಾನ್ ಪ್ರತಿಭೆಗಳಾದ ದಿ. ಕಡಬ ನಾರಾಯಣ ಆಚಾರ್ಯ ಹಾಗೂ ಅವರ ಸುಪುತ್ರ, ಎಳವೆಯಲ್ಲೇ ಅರಳಿ ಮರೆಯಾದ ದಿ. ವಿನಯ ಆಚಾರ್ಯ ನೆನಪಿನಲ್ಲಿ ವರ್ಷಂಪ್ರತಿ ನೀಡುವ ಕಡಬ ಸಂಸ್ಮರಣಾ ಪ್ರಶಸ್ತಿ ಇಂದು ತೆಂಕಣದ ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರಿಗೆ ಸಲ್ಲಬೇಕಿತ್ತು.
ಆದರೆ ಪ್ರಶಸ್ತಿ ಸ್ವೀಕರಿಸುವುದಕ್ಕಿಂತ ಒಂದು ವಾರ ಮೊದಲೇ ಅವರಗಲಿದ ಹಿನ್ನೆಲೆಯಲ್ಲಿ 5ನೇ ವರ್ಷದ ಕಡಬ ದ್ವಯರ ಸಂಸ್ಮರಣೆಯೂ ಪ್ರಶಸ್ತಿ ಭಾಜಕರ ಸಂಸ್ಮರಣೆಯಾದದ್ದು ಯಕ್ಷಗಾನದಲ್ಲೇ ಅಪೂರ್ವ ವಿದ್ಯಮಾನ. ಪ್ರಸ್ತುತ ಪ್ರಶಸ್ತಿಯನ್ನು ಹಾಸ್ಯಗಾರರ ಉತ್ತರ ಕ್ರಿಯೆಯಂದು ಅವರ ಮನೆಯವರಿಗೆ ಮರಣೋತ್ತರ ಹಸ್ತಾಂತರಿಸಲಾಗುವುದೆಂದು ಕಡಬ ಸಂಸ್ಮರಣಾ ಪದಾಧಿಕಾರಿಗಳು ತಿಳಿಸಿದ್ದಾರೆ
ಕಡಬ ಸಂಸ್ಮರಣಾ ಸಮಿತಿ ನೇತೃತ್ವದಲ್ಲಿ ಮಂಗಳೂರು ರಥಬೀದಿಯ ಕಾಳಿಕಾಂಬಾ ಮಠದಲ್ಲಿ ಜರುಗಿದ ಸಮಾರಂಭವನ್ನು ವಿಶ್ವಕರ್ಮ ಸಮಾಜದ ಪ. ಪೂ. ಜಗದ್ಗುರು, ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಮತ್ತು ಶ್ರೀಮದೆಡನೀರು ಪೀಠದ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದರು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಎಡನೀರು ಶ್ರೀಗಳವರು “ಕಡಬ ದ್ವಯರು ಮತ್ತು ಬಂಟ್ವಾಳ ಜಯರಾಮ ಆಚಾರ್ಯರು ಎಡನೀರು ಮಠದ ಜತೆ ನಿಕಟ ಸಂಬಂಧಗಳನ್ನಿರಿಸಿ ಬೆಳೆದು, ಪ್ರಕಾಶಿಸಿದವರು. ವರ್ತಮಾನದ ಸಮಾಜಕ್ಕೆ ನಿನ್ನೆಯ ಕಲಾವಿದರನ್ನು, ಕಲೆಗಾಗಿ ಅವರು ಮಾಡಿದ ತ್ಯಾಗೋಜ್ವಲ ಕೊಡುಗೆಯನ್ನು ಸ್ಮರಿಸಿ ಕೈ ದಾಟಿಸದೇ ಇದ್ದರೆ ಇತಿಹಾಸ ಮತ್ತು ಕೊಡುಗೆ ಕೈ ದಾಟುವುವುದಿಲ್ಲ. ಇಂದು ಕಡಬ ಸ್ಮೃತಿ ಪ್ರಶಸ್ತಿ ಪಡೆಯಬೇಕಿದ್ದ ದಿ. ಬಂಟ್ವಾಳರು ಅಪ್ಪಟ ನೈಜ ಹಾಸ್ಯದ ಸಾಕ್ಷಾತ್ ಸ್ವರೂಪವೆಂದೇ ಜನರು ಅಂಗೀಕರಿಸಿದ ಕಲಾವಿದ. ಅಕಾಲದಲ್ಲಿ ಅಗಲಿದ ಅವರನ್ನು ಪ್ರಾತಃಸ್ಮರಣೀಯವಾಗಿ ಯಕ್ಷಗಾನ ಸ್ಮರಿಸಬೇಕು ಎಂದರು.
ಭಾಗವತ ಅಡೂರು ಜಯರಾಮ ಅವರ ಪ್ರಾರ್ಥನಾ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಮಿತಿಯ ಗೌ. ಅಧ್ಯಕ್ಷ ಜಿ. ಟಿ. ಆಚಾರ್ಯ ಮುಂಬೈ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಮಿತಿ ಅಧ್ಯಕ್ಷ, ಸ್ವರ್ಣೋದ್ಯಮಿ ಸುಂದರ ಆಚಾರ್ಯ ಬೆಳುವಾಯಿ ಅಧ್ಯಕ್ಷತೆ ವಹಿಸಿದರು.
ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ ಶೆಟ್ಟಿ, ಪೆರ್ಡೂರು ಉಪೇಂದ್ರ ಆಚಾರ್ಯ, ಪ್ರಾಯೋಜಕರಾದ ಎಸ್. ಕೆ. ಗೋಲ್ಡ್ ಇಂಡಸ್ಟ್ರಿಯಲ್ ಸೇವಾ ಸಹಕಾರಿ ಬೇಂಕ್ ಅಧ್ಯಕ್ಷ ಡಾ. ಹರೀಶ್ ಆಚಾರ್ಯ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡರು.
ಕಡಬದ್ವಯರ ಕಲಾಬದುಕಿನ ಕುರಿತು ಹಿರಿಯ ಕಲಾವಿದ ಎಂ. ಕೆ. ರಮೇಶಾಚಾರ್ಯ ಸಂಸ್ಮರಣೆ ಮಾಡಿದರೆ, ಪ್ರಶಸ್ತಿ ವಿಜೇತರ ಅಭಿನಂಧನಾ ಭಾಷಣ ಮಾಡಬೇಕಿದ್ದ ಡಾ. ವಾದಿರಾಜ ಕಲ್ಲೂರಾಯರು ಸಂಸ್ಮರಣೆ ಮಾಡಿದರು.
ಜನಾರ್ಧನ ಆಚಾರ್ಯ ಕಾಪು ಪ್ರಾಸ್ತಾವಿಕ ಮಾತನಾಡಿದರು. ವಿ. ದಾಮೋದರ ಶರ್ಮ ನಿರೂಪಿಸಿದರು. ಗಣೇಶ್ ಕುಮಾರ್ ಮುಂಬಯಿ, ಗಿರೀಶ್ ಕಾನೂರು, ಜಗದೀಶ ಬೇಲಾಡಿ, ಮಹೇಶ್ ನೇರಂಕಿ ವೇದಿಕೆಯನ್ನು ನಿರ್ವಹಿಸಿದರು.