ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪೋಕ್ಸೋ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥ ಪ್ರಕರಣಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯವನ್ನುವಿಚಾರಿಸುವಾಗ ಆರೋಪಿಗಳ ಪರ ವಕೀಲರು ಸ್ವಲ್ಪವಾದರೂ ಮಾನವೀಯತೆ ಮತ್ತು ಜವಾಬ್ದಾರಿಯುತ ಕಾಳಜಿಯಿಂದ ವರ್ತಿಸಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ. ಎಸ್. ಓಕಾ ಹಾಗೂ ನ್ಯಾ. ಆಗಸ್ಟೀನ್ ಜಾರ್ಜ್ ಮಸಿಹ್ ಅವರು ವಕೀಲರ ಸಮೂಹಕ್ಕೆ ಕಿವಿಮಾತು ಹೇಳಿದ್ದಾರೆ.
ಪ್ರಕರಣವೊಂದರ ತೀರ್ಪಿನ ಮೇಲ್ಮನವಿಯನ್ನು ಪರಿಗಣಿಸಿದ ಸುಪ್ರೀಂ ನ್ಯಾಯಾಧೀಶರು ಅಪ್ರಾಪ್ತ ಬಾಲಕಿಯರನ್ನು ವಿಚಾರಣೆ ಹೆಸರಲ್ಲಿ ಥರಾವರಿ ಪ್ರಶ್ನೆಗಳಿಂದ ಕಂಗೆಡಿಸಕೂಡದು. ಇದು ಅಸಮಂಜಸ. ವಕೀಲರಾಗಿ ನಿಮ್ಮ ವೃತ್ತಿಯ ಅರ್ಹತೆಗೆ ಇದು ಸರಿ ಎನಿಸಿದರೂ ಮಕ್ಕಳ ಭವಿಷ್ಯದ ಮೇಲಿನ ಪರಿಣಾಮದಿಂದ ಮಾನವೀಯತೆ ತೋರಬೇಕೆಂದು ಆರೋಪಿ ಪರ ವಕೀಲರನ್ನು ಪ್ರಶ್ನೆ ಮಾಡಿದರು.
ಪೋಕ್ಸೋ ಪ್ರಕರಣಗಳಲ್ಲಿ ಎಳೆಯ ಮಕ್ಕಳು ಸಿಲುಕಿದ ಬಳಿಕ ಅವರ ಮೇಲಾಗುವ ಮಾನಸಿಕ, ವೈಯ್ಯಕ್ತಿಕ ಪರಿಣಾಮಗಳನ್ನು ಗಮನಿಸಬೇಕಿದೆ. ಅಪ್ರಾಪ್ತರು ಭವಿಷ್ಯದಲ್ಲಿ ಪ್ರಾಪ್ತ ವಯಸಿಗೆ ಬರುವಾಗ ಇಂಥ ಘಟನೆ ಅವರ ವ್ಯಕ್ತಿಗತ ಜೀವನ ಸಾಧನೆಗಳನ್ನು ಕಾಡದಿರುವಂತೆ ಮಾನವೀಯ ದೃಷ್ಟಿಯಿಂದ ವಕೀಲರು ಕೇಸ್ ನಿರ್ವಹಿಸಬೇಕೆಂದು ನ್ಯಾಯಾಧೀಶರು ಹೇಳಿದ್ದಾರೆ.