ಕೊಚ್ಚಿನ್ : ಕೇರಳದ ದೇವಾಲಯಗಳಲ್ಲಿ ಹಣೆಪಟ್ಟಿಗಳನ್ನು ಕಟ್ಟಿ ಆನೆಯನ್ನಲಂಕರಿಸಿ ನಡೆಯುವ ಗಜಗಾಂಭೀರ್ಯದ ಆನೆಗಳ ಮೆರವಣಿಗೆ, ಪ್ರದರ್ಶನಗಳನ್ನು ಕೇರಳಾ ಹೈಕೋರ್ಟು ಖಂಡಿಸಿದೆ. “ಇದು ಮನುಷ್ಯ ಮನಸ್ಸಿನ ಅಹಂಕಾರದ ಸಂಕೇತವಾಗಿದೆ. ನಾಡಿನಲ್ಲಿರುವ ಅತೀ ದೊಡ್ಡ ಪ್ರಾಣಿ ಆನೆಯನ್ನು ಬಳಸಿದಂತೆಯೇ, ಸಮುದ್ರದಲಿರುವ ಅತೀ ದೊಡ್ಡ ಜೀವಿ ತಿಮಿಂಗಿಲ ಎಲ್ಲಾದರೂ ತೀರದಲ್ಲಿ ಸಿಕ್ಕಿರುತ್ತಿದ್ದರೆ ಅದನ್ನೂ ಪ್ರದರ್ಶನಕ್ಕೆ ಬಳಸುತ್ತಿದ್ದರು” ಎಂದು ನ್ಯಾಯಮೂರ್ತಿ ಎ. ಕೆ. ಜಯಶಂಕರ್ ಹಾಗೂ ನ್ಯಾಯಮೂರ್ತಿ ಪಿ. ಗೋಪಿನಾಥ್ ಎಂಬಿವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ
.
ಕೇರಳದಲ್ಲಿ ಉತ್ಸವಾದಿ ಸಂದರ್ಭಗಳಲ್ಲಿ ಆನೆಗಳನ್ನು ಬಳಸುವುದನ್ನು ಪ್ರಶ್ನಿಸಿ ಸಲ್ಲಿಸಲ್ಪಟ್ಟ ಅರ್ಜಿಯನ್ನು ಪರಿಗಣಿಸಿದ ವಿಭಾಗೀಯ ಪೀಠ ಈ ಕುರಿತು ಮಾರ್ಗಸೂಚಿ ಪ್ರಕಟಿಸಲಾಗುವುದೆಂದು ತಿಳಿಸಿದೆ.
ಕೊಲ್ಲೂರು ಮೂಕಾಂಬಿಕಾ ದೇಗುಲ ಶಕ್ತಿಪೀಠ. ಅಲ್ಲೆಲ್ಲಾ ಆನೆಗಳ ಮೆರವಣಿಗೆಯ, ಪ್ರದರ್ಶನಗಳೋ ಇಲ್ಲ. ಅಲ್ಲರುವುದು ರಥೋತ್ಸವ. ಆದರೆ ಕೇರಳದ ಕೆಲವೆಡೆ ಆನೆಗಳನ್ನು ಉತ್ಸವ ವೈಭವಕ್ಕಾಗಿ ಬಳಸಲಾಗುತ್ತದೆ. ಉತ್ಸವಕ್ಕೆ ಆನೆಯೇ ಬೇಕೆಂಬುದೇನೂ ಆಚಾರದ ಭಾಗವಲ್ಲ. ಇದು ಮನುಷ್ಯ ನಿರ್ಮಿತ ಪ್ರಕ್ರಿಯೆ. ಆನೆಗಳಿಗೆ ಸಮರ್ಪಕ ವ್ಯವಸ್ಥೆಗಳೊದಗಿಸದೇ ಪ್ರದರ್ಶನಕ್ಕೆ ವಿನಿಯೋಗಿಸುವುದಕ್ಕೆ ನಿಯಂತ್ರಣ ಹೇಳಬೇಕಾಗಿದೆ. ಈ ನಿಟ್ಟಿನಲ್ಲಿ ನಿಯಂತ್ರಣ ಮಾನದಂಡಗಳ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ತ್ರಿಶೂರ್ ಪೂರಂ ಸಹಿತ ಕೇರಳದ ಪ್ರಸಿದ್ಧ ದೇಗುಲಗಳಲ್ಲಿ ಉತ್ಸವಾದಿ ಸಂದರ್ಭಗಳಲ್ಲಿ ಆನೆಗಳೇ ವಿಶೇಷ ಆಕರ್ಷಣೆ. ಆನೆಯ ಮೇಲಣ ಅಂಬಾರಿಗಳಿಲ್ಲದ ಉತ್ಸವಗಳೆಲ್ಲ ಉತ್ಸವಗಳೇ ಅಲ್ಲ ಎಂಬುದು ಕೇರಳೀಯರ ಭಾವನೆ. ಆದರೆ ಉತ್ಸವಗಳಲ್ಲಿ ಆನೆಯ ಬಳಕೆಗೆ ನಿಯಂತ್ರಣ ಹೇರಬೇಕೆಂದು ಹೈಕೋರ್ಟು ಅಭಿಪ್ರಾಯಪಟ್ಟಿರುವುದು ಚರ್ಚೆಗೆ ಗ್ರಾಸವಾಗಲಿದೆ.