ಕಣಿಪುರ ಸುದ್ದಿಜಾಲ (ಆ. 25)
ಕಾಸರಗೋಡು: ಹಲವರಿಗೆ ಉದ್ಯೋಗ ಭರವಸೆ ಇತ್ತು ಲಕ್ಷಾಂತರ ರೂ ಪಡೆದು ವಂಚಿಸಿದ ಪ್ರಕರಣದಲ್ಲಿ ಪುತ್ತಿಗೆ ಬಾಡೂರು ಪ್ರಾಥಮಿಕ ಶಾಲಾ ಅಧ್ಯಾಪಕಿ, ಶೇಣಿ ಬೆಳ್ತಕಲ್ಲು ನಿವಾಸಿ ಸಚಿತಾ ರೈ (27) ಎಂಬಾಕೆಯನ್ನು ಪೋಲೀಸರು ಬಂಧಿಸಿದ್ದಾರೆ.
ನಿನ್ನೆ ಸಂಜೆ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಲು ಬಂದ ಆರೋಪಿಯನ್ನು ನ್ಯಾಯಾಲಯ ಪರಿಸರದಿಂದ ಪ್ರತ್ಯೇಕ ತನಿಖಾದಳದ ಮುಖ್ಯಸ್ಥ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಯಿತು. ಬಂಧಿತಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದೆಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರಿ ಸ್ವಾಮ್ಯದ ಸಿಪಿಸಿಆರ್ ಐ ಮತ್ತು ಕೇಂದ್ರೀಯ ವಿದ್ಯಾಲಯ ಸಹಿತ ಹಲವೆಡೆ ಉದ್ಯೋಗ ಕೊಡಿಸುವುದಾಗಿ ಭರವಸೆಯಿತ್ತು ಸುಮಾರು 20ಕ್ಕೂ ಅಧಿಕ ಮಂದಿಗಳಿಂದ ಲಕ್ಷಾಂತರ ಪಡೆದು ವಂಚಿಸಿದ ಈಕೆಯ ಬಂಧನಕ್ಕೆ ರಾಜಕೀಯ ಪ್ರಭಾವದಿಂದ ವಿಳಂಬವಾಗಿತ್ತು. ಇದನ್ನು ಪ್ರಶ್ನಿಸಿ ವಿವಿಧ ಸಂಘಟನೆಗಳು ಪ್ರತಿಭಟನಾ ಹೋರಾಟಕ್ಕಿಳಿಯುತ್ತಿದ್ದಂತೆಯೇ ನಾಟಕೀಯ ಬಂಧನ ನಡೆದಿದೆ.
ಶೇಣಿ ಬೆಳ್ತಕಲ್ಲು ನಿವಾಸಿ ಸಚಿತಾ ರೈ ಡಿಫಿ ಮಾಜಿ ನಾಯಕಿಯಾಗಿದ್ದು, ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈಕೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಆರಂಭದಲ್ಲಿ ಬಂಧನಕ್ಕೆ ತಾತ್ಕಾಲಿಕ ತಡೆಯಾಜ್ಞೆ ದೊರೆತಿತ್ತಾದರೂ, ಅನಂತರ ತಡೆಯಾಜ್ಞೆ ಸಿಕ್ಕಿರಲಿಲ್ಲ. ಕೂಡಲೇ ಬಂಧಿಸಬೇಕಿದ್ದ ಪೋಲೀಸರು ಈಕೆ ನಾಪತ್ತೆ ಎನ್ನುತ್ತಲೇ ಕಾಲವಿಳಂಬ ಮಾಡಿದ್ದರು. ಈತನ್ಮಧ್ಯೆ ಬಂಧನಕ್ಕೆ ಒತ್ತಾಯಿಸಿ ಸಂಘಟನೆಗಳು ಪ್ರತ್ಯಕ್ಷ ಹೋರಾಟಕ್ಕಿಳಿಯುವ ಸಾಧ್ಯತೆ ಮತ್ತು ರಾಜಕೀಯವಾಗಿ ಅದು ಪರಿಣಾಮವಾಗುವುದನ್ನು ಗಮನಿಸಿ ವಕೀಲರ ಸಲಹೆಯಂತೆ ಈಕೆ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ್ದಳು. ಈ ಸಂದರ್ಭದಲ್ಲಿ ಬಂಧನ ನಡೆದಿದ್ದು, ವಿಚಾರಣೆಯೊಂದಿಗೆ ಪ್ರಕರಣದ ಇನ್ನಿತರ ಮಾಹಿತಿ ಬೆಳಕಿಗೆ ಬರಬೇಕಿದೆ.
ವಂಚನೆಯಲ್ಲಿ ಅಂತರಾಜ್ಯ ಸಂಪರ್ಕದ ರಾಜಕೀಯ ಸ್ವಾಧೀನದ ಧುರೀಣರಿದ್ದು, ಜಾಲವೊಂದು ಕಾರ್ಯಾಚರಿಸಿದ ಸುಳಿವು ಸಿಕ್ಕಿದೆ. ಲಕ್ಷಾಂತರ ರೂ ಪಡೆದು ವಂಚಿಸಿದ, ಆರ್ಥಿಕ ವರ್ಗಾವಣೆಗಳೆಲ್ಲವೂ ಸಚಿತಾ ರೈ ಖಾತೆಗೆ ನಡೆದಿರುವುದರಿಂದ ಪ್ರಕರಣದಲ್ಲಿ ಈಕೆ ಮೊದಲ ಆರೋಪಿಯಾಗಿದ್ದು, ಇನ್ನಷ್ಟು ಮಂದಿಯ ಶಾಮೀಲಾತಿಯ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.