ಕಣಿಪುರ ಸುದ್ದಿಜಾಲ (!ಅ. 24)
ಗುರುವಾಯೂರು:
- ದಕ್ಷಿಣ ಭಾರತದ ಪ್ರಸಿದ್ಧ ಶ್ರೀಕೃಷ್ಣ ದೇವಾಲಯಗಳಲ್ಲೊಂದಾದ ಕೇರಳದ ಗುರುವಾಯೂರಿನಲ್ಲಿ ಸಾಕ್ಷಾತ್ ಶ್ರೀಕೃಷ್ಣನಿಗೆ ತುಳಸಿ ಮಾಲಾರ್ಚಿತ ಪೂಜೆಗಳೇ ಸಲ್ಲುತ್ತಿಲ್ಲ!!
ಭಕ್ತರು ಶ್ರೀಕೃಷ್ಣಾರ್ಚನೆಗೆಂದು ಕೃಷ್ಣ ತುಳಸಿಯನ್ನು ದಯವಿಟ್ಟು ತರಬೇಡಿ ಎಂದೇ ದೇಗುಲದ ವತಿಯಿಂದ ದಿನವೂ ಉದ್ಘೋಷಿಸಲಾಗುತ್ತಿದೆ. ಒಲ್ಲನೋ ಹರಿ ಒಲ್ಲನೋ ತುಳಸಿ ಇಲ್ಲದ ಪೂಜೆ ಎಂದೇ ಭಕ್ತರು ನಂಬಿ, ಇಷ್ಟಾರ್ಥ ಪ್ರಾರ್ಥನೆಯೊಂದಿಗೆ ಗುರುವಾಯೂರಪ್ಪನಿಗೆ ಕೃಷ್ಣ ತುಳಸಿ ಸಮರ್ಪಿಸಲು ತಂದರೆ ಈಗ ದೇಗುಲದಲ್ಲದನ್ನು ಸ್ವೀಕರಿಸುವುದೇ ಇಲ್ಲ. ಕಾರಣ ಕೃಷ್ಣನ ಸನ್ನಿಧಿಯಲ್ಲೇ ಕೃಷ್ಣತುಳಸಿಯನ್ನು ನಿಷೇಧಿಸಲಾಗಿದೆ.?!!
ಗುರುವಾಯೂರು ದೇವಸ್ವಂ ಮಂಡಳಿಯ ಈ ನಿರ್ಧಾರ ಅಪಾರ ಸಂಖ್ಯೆಯ ಭಕ್ತರಿಗೆ ನೋವುಂಟುಮಾಡಿದೆ. ಭಕ್ತರು ಈ ವಿಚಾರದಲ್ಲಿ ಪ್ರತಿಭಟನೆ ತಿಳಿಸಿದರೂ ದೇವಸ್ವಂ ಮಂಡಳಿ ನಿಲುವು ಬದಲಾಗಿಲ್ಲ. ಗುರುವಾಯೂರು ದೇವಳಕ್ಕೆ ದೈನಂದಿನ ಬರುವ ನಾನಾ ರೀತಿಯ ಕಾಣಿಕೆಗಳ ಸಂಖ್ಯೆ ದೊಡ್ಡದು. ಒಪ್ಪ ಓರಣವಾದ ಹೊಸ ಉಡುಪು, ನೇಂದ್ರಗೊನೆ, ಹಣ್ಣುಹಂಪಲು,
ಧವಸಧಾನ್ಯ ಸಹಿತ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ನೀಡುವ ಈ ವಸ್ತುಗಳೊಂದೂ ದೇವರ ಗರ್ಭಗುಡಿಗೆ ಸೇರುವುದಿಲ್ಲ. ಬದಲು ಇದನ್ನೇ ಕ್ಷೇತ್ರ ವಿನಿಯೋಗ ಸಹಿತ ಪ್ರಸಾದರೂಪೇಣ ಹಂಚಲಾಗುತ್ತದೆ. ಮಾರುಕಟ್ಟೆಗೆ ಮಾರಾಟ ಮಾಡಿ ದೊರೆತ ಹಣ ದೇಗುಲದ ಖಾತೆಗೆ ಜಮೆಯಾಗುತ್ತದೆ. ಹೀಗೆ ಇದ್ಯಾವುದನ್ನೂ ನಿಷೇಧಿಸದೇ, ತರಬೇಡಿ ಎನ್ನದೇ ಈಗ ಏಕಾಏಕಿ ಕೃಷ್ಣಪ್ರೀತಿಯ ಕೃಷ್ಣ ತುಳಸಿಯನ್ನು ಮಾತ್ರ ದಯವಿಟ್ಟು ತರಬೇಡಿ ಎನ್ನುವುದೇಕೆ..?? ಇದೇ ಭಕ್ತರನ್ನು ಕಾಡುವ ಪ್ರಶ್ನೆ.
ಕಾರಣವೇನು ಗೊತ್ತೇ?
ಈ ಕುರಿತು ಗುರುವಾಯೂರು ದೇವಸ್ವಂ ಮಂಡಳಿ ನೀಡುವ ಸ್ಪಷ್ಟನೆ ಏನೆಂದರೆ “ಭಕ್ತರು ಮಾರುಕಟ್ಟೆಯಿಂದ ಖರೀದಿಸಿ ತರುವ ಕೃಷ್ಣ ತುಳಸಿಯು ವಿಪರೀತ ರಾಸಾಯನಿಕ ಸೋಂಕನ್ನು ಹೊಂದಿದೆ. ಇದನ್ನು ಗುರುವಾಯೂರಪ್ಪನ ಪೂಜೆ, ಅರ್ಚನೆಗಳಿಗೆ ಬಳಸಲಿಕ್ಕಾಗದು. ದೈನಂದಿನ ತುಳಸಿ ಮಾಲೆಗಳನ್ನು ಮುಟ್ಟುವ ಕ್ಷೇತ್ರ ಸಿಬ್ಬಂದಿಗಳ ಕೈಗಳಲ್ಲಿ ಚರ್ಮರೋಗಗಳೂ ಕಾಣಿಸಿದೆ. ಈ ಕಾರಣದಿಂದ ಕೃಷ್ಣ ತುಳಸಿಯನ್ನು ಅರ್ಚನೆಗೆ ನಿಷೇಧಿಸಲಾಗಿದೆ. ಆದ್ದರಿಂದಲೇ ದಯವಿಟ್ಟು ದೇಗುಲದ ಪಾವಿತ್ರ್ಯತೆಗಾಗಿ ವಿಷಯುಕ್ತ, ಮಲಿನ ಕೃಷ್ಣ ತುಳಸಿಗಳನ್ನು ತರಬೇಡಿ ಎನ್ನುತ್ತೇವೆ ಎಂದು ದೇವಸ್ವಂ ಮಂಡಳಿ ಆಡಳಿತಾಧಿಕಾರಿ ಕೆ. ಪಿ. ವಿನಯನ್ ಹೇಳಿದ್ದಾರೆ.
ಅಂದರೆ ಅತ್ಯಧಿಕ ಪ್ರಮಾಣದಲ್ಲಿ ವಿಕ್ರಯವಾಗುವ ಕೃಷ್ಣ ತುಳಸಿಯನ್ನು ಮಾರಾಟದ ವಾಣಿಜ್ಯ ಉದ್ದೇಶದಿಂದ ರೈತರು ರಾಸಾಯನಿಕ ಸಿಂಪಡಿಸಿ ಬೆಳೆಸುತ್ತಾರೆ. ಇದು ಹೌದೇ ಆದರೆ ಇದನ್ನು ಮಾಲೆಕಟ್ಟಿ ನಿತ್ಯೇನ ಪೂರೈಸುವ ನೂರಾರು ಮಂದಿ ಗ್ರಾಮೀಣರಿಗೂ ರೋಗರುಜಿನಗಳು ಕಾಣಿಸಬೇಡವೇ??
ಇದು ಭಕ್ತಾದಿಗಳಲ್ಲಿ ಉದಯಿಸಿರುವ ಸಹಜ ಪ್ರಶ್ನೆ.
ತುಳಸಿಗೆ ಹಿಂದೂ ಧಾರ್ಮಿಕತೆಯಲ್ಲಿ ಪವಿತ್ರ ಸ್ಥಾನಮಾನಗಳಿವೆ. ಅದರಲ್ಲೂ ಶ್ರೀಕೃಷ್ಣ ಭಗವಾನ್ ತುಳಸಿ ಇಲ್ಲದ ಪೂಜೆಯನ್ನೇ ಪಡೆಯದ, ಒಲ್ಲದ ದೇವ. ಅಂತಹಾ ಕೃಷ್ಣನಿಗೆ ಭಕ್ತರು ಅರ್ಪಿಸುವ ತುಳಸಿಗೂ ನಿಷೇಧವೇ??
ಸರ್ವ ರೋಗನಿವಾರಕವಾದ, ಅಮೃತವರ್ಷಿಣಿ ತುಳಸಿಯಲ್ಲೂ ವಿಷವೇ??
ಈ ಕುರಿತು ಗಂಭೀರ ಅಧ್ಯಯನ ನಡೆಯಬೇಕಿದೆ. ಭಗವಂತನಿಗೆ ಆರಾಧನೆಯಂಗವಾಗಿ ಅರ್ಪಿಸುವ ತುಳಸಿಯನ್ನು ಮಲಿನ ಮುಕ್ತವಾಗಿಸಬೇಕು, ವಿಷ ಮುಕ್ತವಾಗಿಸಬೇಕು ಎಂದು ಭಕ್ತರು ಬಯಸುತ್ತಾರೆ.