ಕುಂಬಳೆ: ಉದ್ಯೋಗ ಭರವಸೆಯೊಡ್ಡಿ ಅನೇಕರಿಂದ ಲಕ್ಷಾಂತರ ಪಡೆದು ವಂಚಿಸಿದ ಬಾಡೂರು ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕಿ, ಡಿಫಿ ನಾಯಕಿ ಸಚಿತಾ ರೈ ವಿರುದ್ಧ ಮತ್ತಷ್ಟು ವಂಚನಾ ಪ್ರಕರಣದ ಕೇಸುದಾಖಲಾಗುತ್ತಿವೆ. ಇದೀಗ ಮತ್ತೆ 4ಪ್ರಕರಣಗಳು ಆದೂರು, ಬದಿಯಡ್ಕಠಾಣೆಯಲ್ಲಿ ದಾಖಲಾಗಿದ್ದು, ಇದರೊಂದಿಗೆ ಭರ್ತಿ ಒಂದು ಡಜನ್ ಕೇಸು ದಾಖಲಾದರೂ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೋಲೀಸರು ವಿಫಲರಾಗಿದ್ದಾರೆ.
ಸಚಿತಾ ರೈ ತನ್ನ ಸಹಪಾಠಿಯಾಗಿದ್ದ ಉಬ್ರಂಗಳದ ಡಯಾನ ಎಂಬಾಕೆಗೆ ಸಿಪಿಸಿಆರ್ ಐ ಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 4ಲಕ್ಷ ರೂ ಪಡೆದಿದ್ದಳು. ಬಳಿಕ ಉದ್ಯೋಗ ವಿಳಂಬವಾಗುವುದನ್ನು ಗಮನಿಸಿ ತನಗೆ ಉದ್ಯೋಗವೇ ಬೇಡ ಎಂದಳಲ್ಲದೇ, ನೀಡಿದ ಹಣ ವಾಪಾಸು ಬೇಕೆಂದು ಪಟ್ಟು ಹಿಡಿದಾಗ 1.5 ಲಕ್ಷ ರೂ ಮರಳಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದೇ ರೀತಿ ಮಾವಿನ ಕಟ್ಟೆಯ ರೈಹಾನ, ಆದೂರು ಠಾಣಾ ವ್ಯಾಪ್ತಿಯ ಪ್ರಸನ್ನ ಎಂಬಿವರಿಗೂ ವಂಚಿಸಿರುವುದಾಗಿ ದೂರು ದಾಖಲಾಗಿದೆ.
ದಿನೇ, ದಿನೇ ವಂಚನಾ ಪ್ರಕರಣದ ಕೇಸುಗಳು ಹೆಚ್ಚಾಗುತ್ತಿದೆಯಲ್ಲದೇ, ವಂಚನೆ ಎಸಗಿ ತಲೆಮರೆಸಿಕೊಂಡವಳನ್ನು ಪತ್ತೆ ಹಚ್ಚಿ ಬಂಧಿಸುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಇದಕ್ಕೆ ಕಾರಣ ವಂಚನೆ ಎಸಗಿದಾಕೆಗೆ ಸಿಪಿಎಂ ರಕ್ಷಣಾವಲಯ ಇರುವುದೇ ಆಗಿದೆಯೆಂದು ಆರೋಪಗಳಿವೆ.