ನಿಜಕ್ಕೂ ಹೌದು..
ಎಲ್ಲಿಂದ ಶುರು ಮಾಡಲಿ?
ಹೀಗೊಂದು ಪ್ರಶ್ನೆ ಪ್ರತಿನಿತ್ಯ ಪ್ರತಿಯೊಬ್ಬರನ್ನೂ ಕಾಡುವುದು ಸಹಜ ತಾನೇ??
ಏಕೆಂದರೆ ಅಧ್ಯಾಪಕನಿಗೆ ಪಾಠ ಮಾಡುವ ಉಪನ್ಯಾಸ ಕಸುಬು. ಕಲಾವಿದನಿಗೆ ಆರೋಗ್ಯ ಇದ್ದಷ್ಟೂ ದಿನ ಕಲಾ ಪ್ರದರ್ಶನ ನೀಡುವುದೇ ಕಾಯಕ. ಪತ್ರಕರ್ತ ಎಂದು ಕರೆಸಿಕೊಂಡವನಿಗೂ ಅಷ್ಟೇ ಬರೆಯುವ ತಾಕತ್ತಿರುವ ತನಕ ಸಾಮಾಜಿಕ ಕಾಳಜಿಯಿಂದ ಬರೆಯುವುದೇ ಧರ್ಮ…
ಇಂಥ ವೃತ್ತಿಗಳಿಗೆಲ್ಲ ನಿವೃತ್ತಿ ಎಂಬುದೇ ಇಲ್ಲ. ಇದು ಸಾಮಾಜಿಕ ಬದ್ಧತೆಯ, ನಾಳಿನ ಪೀಳಿಗೆಯ ಸಮಾಜ ರೂಪಿಸುವ, ಭವಿಷ್ಯ ಸೃಜಿಸುವ, ಸಾಮಾಜಿಕ ಪ್ರೀತಿಯ ನೈತಿಕ ಬದ್ಧತೆಯ ಕೆಲಸ ತಾನೇ…?
ಮೊನ್ನೆ ಮೊನ್ನೆ ಬೆಳಿಗ್ಗೆ ನನ್ನೂರ ಕುಂಬ್ಳೆ ಪೇಟೆಯಲ್ಲಿ ನನಗೆ ನನ್ನ ಅಪ್ಪಣ್ಣ ಮಾಸ್ತರ್ ಸಿಕ್ಕಿದ್ದರು. ಪ್ರಾಥಮಿಕ ಶಾಲಾ ಗುರುವನ್ನ ಕಂಡೊಡನೆ ಕೈ ಜೋಡಿಸಿ ಮಾತನಾಡುವುದು ನನ್ನ ವಾಡಿಕೆ. ನಾನವರಿಗೆ ಕುಂಟಿಕಾನ ಹಿರಿಯ ಬುನಾದಿ ಶಾಲೆಯ ವಿದ್ಯಾರ್ಥಿ. 80ರ ದಶಕದ ಆ ದಿನಗಳಲ್ಲಿ ಅಪ್ಪಣ್ಣ ಮಾಸ್ತರ್ ನನಗೆಂದಲ್ಲ, ಶಾಲೆಗಷ್ಟೇ ಅಲ್ಲ, ಇಡೀ ಊರಿಗೇ ಹೀರೋ..!
ಏಕೆಂದರೆ
ಅವರು ಪಠ್ಯೇತರವಾಗಿ ಶಿಷ್ಯರೇಳಿಗೆ ಬಯಸಿದ ಅಪೂರ್ವ ಅಧ್ಯಾಪಕ- ಕಲಾವಿದ.
ವರ್ಷಂಪ್ರತಿ ಶಾಲಾ ವಾರ್ಷಿಕೋತ್ಸವ ಬಂತೆಂದರೆ ಹಳೆ ವಿದ್ಯಾರ್ಥಿಗಳನ್ನ ಜೋಡಿಸಿ, ಮೇಷ್ಟ್ರು ನಟಿಸದ ಹಿರಿಯರ ನಾಟಕವಿಲ್ಲ! ಬೇರೆ ಮತ್ತೊಂದು ಮನೋರಂಜನೆಗಳೇ ಇಲ್ಲದ ಆ ಕಾಲಕ್ಕೆ ಕುಂಟಿಕಾನವೆಂಬ ಗ್ರಾಮ್ಯ ಊರಿನ ಸುತ್ತ ಆಗ ಅವರೇ ಹೀರೋ!!
ಇಂಥ ಮೇಷ್ಟ್ರನ್ನ, ಅವರ ಆಳೆತ್ತರದ ದಢೂತಿ ಕಾಯವನ್ನ ಹಗಲು ಕಂಡಾಗ ಎಳೆ ಪಿಳ್ಳೆ ವಿದ್ಯಾರ್ಥಿಗಳು ಭಯಗೊಳ್ಳುವುದು ಸಹಜವೇ ಆಗಿತ್ತು. ಈ ಸಾಲಿನಲ್ಲಿ ನಾನೂ ಒಬ್ಬ! ಏಕೆಂದರೆ ಅಭಿಮಾನದ ಮಮತೆ, ಗೌರವದಷ್ಟೇ ಅವರ ಮೇಲೆ ಭಯವೂ ಇತ್ತು!!
ಇಂಥ ಅಪ್ಪಣ್ಣ ಮೇಷ್ಟ್ರು ಉಳಿದೆಲ್ಲರಂತೆ ಲೆಕ್ಕಕ್ಕೊಬ್ಬ ಗಂಜಿ ಗಿರಾಕಿ ಅಧ್ಯಾಪಕನಾಗಿರಲಿಲ್ಲ.
ಅವರ ಪಾಠ, ಅವರ ವಿದ್ಯಾರ್ಥಿಗಳು, ಅವರ ಶಾಲೆ ಎಂಬ ತ್ರಿಕೋನದ ಬದುಕಿನ ಬಗ್ಗೆ ಅವರಿಗೆ ಕಾಳಜಿಯ ಆದರಾಭಿಮಾನವಿತ್ತು. ಈ ಕಾರಣದಿಂದಲೇ ಅವರು ಬಯಸಿದಂತೆ ಒಬ್ಬ ವಿದ್ಯಾರ್ಥಿ ಇಲ್ಲದೇ ಹೋದರೆ ಅವರು ಹುರಿ ಮೀಸೆ ಬಿಗಿದು.. “ಮಗ್ನೇ.. ನೋಡು ನಿನ್ನನ್ನು ದೇವರಮೆಟ್ಟಿನ ಹುಳಿ ಮರಕ್ಕೆ ನೇತಾಕ್ತೇನೆ ನೋಡು” ಎನ್ನುತ್ತಾ ಕಣ್ಣರಳಿಸಿ ಗದರುತ್ತಿದ್ದರು. ಇಷ್ಟರಲ್ಲೇ ಪಿಟ್ಟೆ ಮಕ್ಕಳ ಚಡ್ಡಿಯೇ ಒದ್ದೆಯಾಗುವಂಥ ಭಯ ಹುಟ್ಟುತ್ತಿತ್ತು!!
ನಿಜಕ್ಕೂ ಅಂಥ ದೈತ್ಯ ಗಾತ್ರದ ಅಪ್ಪಣ್ಣ ಮಾಸ್ತರ ಮನಸ್ಸು ಪರಿಮಳ ಭರಿತ ಮಲ್ಲಿಗೆಯಷ್ಟು ಎಳಸು ಎಂದು ಬಲ್ಲವರಾದ ಕೆಲವರಿಗಷ್ಟೇ ಗೊತ್ತು?!
ಈಗ ಮೇಷ್ಟ್ರು ನಿವೃತ್ತರಾಗಿ ಎರಡೂವರೆ ದಶಕ ದಾಟಿದೆ. ಆದರೂ ಅವರು ಈಗಲೂ ಪ್ರವೃತ್ತ ಅಧ್ಯಾಪಕರಾಗಿಯೇ ಇದ್ದಾರೆ!
ಏನ್ಸಾರ್ ಬೆಳಿಗ್ಗೆ ಪೇಟೆಯಲ್ಲಿ..?
ಕೇಳಿದೆ. ಅವರಿಗೆ ನಾನೆಂದರೆ ಪ್ರೀತಿ. ಈತ ನನ್ನ ಶಿಷ್ಯನೆಂದೇ ಅಭಿಮಾನ. ಈ ಕಾರಣದಿಂದಲೇ ಅವರು ಎಲ್ಲೇ ಕಂಡರೂ ವಾತ್ಸಲ್ಯದಿಂದ ಮಾತಾಡುತ್ತಾರೆ.
ಹಾಗೆಯೇ ಮೊನ್ನೆ ಪೇಟೆಯ ಬೀದಿಯಲ್ಲೂ ವಾಚಾಳಿಯಾದರು..
“ನಾನೀಗ ಉಪ್ಪಳದ ಖಾಸಗಿ ಕಾಲೇಜೊಂದರ ಅತಿಥಿ ಅಧ್ಯಾಪಕ. ನಾನು ಬೇಡ, ಬೇಡ ಎಂದರೂ ಕಾಲೇಜು ನಡೆಸುವಾತ ಕೇಳಬೇಕೆ??
ನೀವು ಇದ್ದರೆ ಸಾಕು, ನಿಮ್ಮ ಅನುಭವದ ಹಿರಿತನವೇ ನಮ್ಮ ಪೊಲ್ಸು. ಬರಲೇ ಬೇಕೆಂಬುದು ಅವರ ಹಠ. ನಾನಾದರೋ ವಿಶ್ರಾಂತ ಜೀವನ ತಾನೇ? ಹೋಗುತ್ತಿದ್ದೇನೆ, ಸುಮ್ಮನೇ ಕೂರುವುದಕ್ಕುಂಟೇ? ಇಂಗ್ಲೀಷ್ ಪಾಠ ಮಾಡುತ್ತಿದ್ದೇನೆ” ಎಂದರು.
ಇಷ್ಟಕ್ಕೂ ಕಾರಣ ಏನೆಂದರೆ ನನ್ನೂರು ಕುಂಬ್ಳೆಯಲ್ಲಿ “ಪ್ರಣವ ಕಾಲೇಜು” ಎಂಬ ಖಾಸಗಿ ಶಿಕ್ಷಣ ಸಂಸ್ಥೆ ಇತ್ತು. ಅಲ್ಲಿ ಅಪ್ಪಣ್ಣ ಮೇಷ್ಟ್ರು ನಿವೃತ್ತಿಯ ಬಳಿಕ ಅಧ್ಯಾಪಕರಾಗಿದ್ದು, ಇಡೀ ಸಂಸ್ಥೆಯನ್ನೇ ಎಚ್ಚರ ವಹಿಸಿ ನೋಡುತ್ತಿದ್ದರು. ಅದರ ಫಲಿತಾಂಶವೂ ಅಲ್ಲಿಗೆ ಒಲಿದಿತ್ತು. ಈ ಕಾರಣದಿಂದಲೇ ಅವರನ್ನು ಉಪ್ಪಳದ ಶಿಕ್ಷಣ ಸಂಸ್ಥೆ ಬರಮಾಡಿಕೊಂಡಿದೆಯಂತೆ..
ಹೀಗೆ ಪೇಟೆಯಲ್ಲಿ ಮೇಷ್ಠ್ರನ್ನು ಕಂಡ ನಾನು ಮನೆಗೆ ಬಂದೊಡನೆಯೇ ಅಭಿಮಾನದಿಂದ ಪತ್ನಿಯಲ್ಲಿ ಹೇಳಿದೆ. ಅದನ್ನಾಕೆ ನೆರೆಮನೆಯಾಕೆಯಲ್ಲೂ ಹೇಳಿದಳು “ನೋಡೇ ನಿವೃತ್ತರಾಗಿ ದಶಕವಾಯ್ತು, ಇಡೀ ಮನೆಯವರೆಲ್ಲರೂ ಉದ್ಯೋಗಿಗಳು, ಆದರೂ ವೃದ್ಧಾಪ್ಯದ ಮೇಷ್ಟ್ರು ಈಗ ಕಾಲೇಜ್ ಅಧ್ಯಾಪಕನಂತೆ”!
ಹೌದಲ್ಲಾ…? ಇದರಲ್ಲಿ ಅಚ್ಚರಿಯಷ್ಟೇ ಅಲ್ಲ ಸ್ಪೂರ್ತಿಯ ಪ್ರೇರಣಾಗಾಥೆ ಇದೆ. ಉದ್ಯೋಗ ಒಂದು ವೇತನದ ಕಸುಬಲ್ಲ. ಅದು ಸಮಾಜ ನಿರ್ಮಾಣದ ಬದ್ಧತೆ. ಇಂಥ ಬದ್ಧತೆ ಉಳ್ಳವರಿಂದಲೇ ನಾಗರಿಕ ಸಮಾಜ ರೂಪುಗೊಂಡಿವೆ. ದುಡಿಯುವುದು ಎಂದರೆ ಕೇವಲ ವೇತನ ಗಳಿಕೆಗೆ ಎಂಬುದಷ್ಟಕ್ಕೇ ಸೀಮಿತವಾಗಿರುವ ವರ್ತಮಾನಕ್ಕೆ ಸಾಮಾಜಿಕ, ಮಾನುಷಿಕ ಕಾಳಜಿಯ ಅಪ್ಪಣ್ಣರಂಥ ಒಪ್ಪಣ್ಣ ಮೇಷ್ಠ್ರು ಸಿಗುವುದೇ ಅಪರೂಪ!!
ನಾನವರ ಅಂತರಂಗ ಗೆದ್ದ ಒಲುಮೆಯ ಶಿಷ್ಯನೆಂಬುದೇ ನನ್ನ ನಲ್ಮೆ.
ಇಂಥ ಅಪ್ಪಣ್ಣಮೇಷ್ಟ್ರು ನಮ್ಮ ಕುಂಬಳೆ ಉಪಜಿಲ್ಲೆಯ ಕುಂಟಿಕಾನ ಹಿರಿಯ ಬುನಾದಿ ಶಾಲೆಗೆ ಅಧ್ಯಾಪಕನಾಗಿ ಸೇರಿದ್ದು 1970ನೇ ಇಸವಿಯಲ್ಲಿ. ನಿಜಕ್ಕೂ ನಾನಾಗ ಹುಟ್ಟಿರಲೇ ಇಲ್ಲ! ಕಳೆದ 2005ರಲ್ಲಿ ಸೇವಾ ನಿವೃತ್ತರಾದ ಅವರೇನೂ ಮನೆಯಲ್ಲಿ ಸುಮ್ಮನೇ ಕೂತವರಲ್ಲ. ಎಕೆಂದರೆ ಅವರದ್ದು ಅಧ್ಯಾಪನ ಕುಟುಂಬ. ಪತ್ನಿ ಪದ್ಮಾವತಿ ಮುಂಡಿತ್ತಡ್ಕ ಶಾಲೆಯಲ್ಲಿ ಅಧ್ಯಾಪಕಿಯಾಗಿ ನಿವೃತ್ತರು. ಮಕ್ಕಳಾದ ಚಿತ್ರಪ್ರಭಾ ಕಾಸರಗೋಡು ವಾಸಿ. ಮಗ ಮುರಳಿಕೃಷ್ಣ ಬೆಂಗಳೂರು ಉದ್ಯೋಗಿ. ಸಂತೃಪ್ತ ಕುಟುಂಬ ಜೀವನ ಕಾಣುವ ಮೇಷ್ಟ್ರು ಈಗ ಕುಂಬ್ಳೆ ಸಮೀಪದ ನಾಯ್ಕಾಪು ,ಅನಂತಪುರ ರಸ್ತೆಯ ನಿವಾಸಿ. ಆಧ್ಯಾತ್ಮ, ಧಾರ್ಮಿಕ, ಶಿಕ್ಷಣಕ್ಕಾಗಿ ಈ 74ರ ಹರೆಯದಲ್ಲೂ ಬೆವರಿಳಿಸುವ ಮೇಷ್ಟ್ರು ತನಗೆ ವಯಸ್ಸಾಯಿತೆಂದು ಒಮ್ಮೆಯೂ ಹಲುಬಿದವರೇ ಅಲ್ಲ. ನನ್ನ ವಿದ್ಯರ್ಥಿಗಳೇ ನನ್ನ ಸೊತ್ತೆಂದು ಅಭಿಮಾನಪಟ್ಟವರು. ಇಂಥ ಮೇಷ್ಟ್ರು ವಯಸನ್ನು ಮರೆತು ಶಿಷ್ಯ ಪೀಳಿಗೆ ರೂಪಿಸುತ್ತಲೇ ನಡೆಯುತ್ತಾರೆಂದರೆ ಇದಲ್ಲವೇ ಅಧ್ಯಾಪನದ ಕೊಡುಗೆ??