ಕಾಸರಗೋಡಿನಲ್ಲಿ ನಡೆದ ದ್ವಿದಿನ ಪರಿಶಿಷ್ಟ ಜಾತಿ ಮತ್ತು ವರ್ಗದ ಆಯೋಗದ ಅದಾಲತ್ ನಲ್ಲಿ ಕಾಸರಗೋಡಿನಲ್ಲಿ ಮರಾಟಿ ಸಮುದಾಯದ ಉದ್ಯೋಗ ಕಬಳಿಕೆ ಮತ್ತು ಮರಾಟಿಗರಿಗೆ ನ್ಯಾಯಸಮ್ಮತ ಒದಗಬೇಕಾದ ಸೌಲಭ್ಯಗಳನ್ನು ನೀಡದೇ ನಿರ್ಲಕ್ಯ ವಹಿಸಲಾಗುತ್ತಿದೆಯೆಂದು ಮರಾಟಿ ಸಂರಕ್ಷಣಾ ಸಮಿತಿ ವತಿಯಿಂದ ಅದಾಲತ್ ನಲ್ಲಿ ದೂರು ನೀಡಲಾಯಿತು.
ಕಾಸರಗೋಡು: ಕೇರಳದ ಇತರ ಜಿಲ್ಲೆಗಳನ್ನು ಹೋಲಿಸಿದರೆ ಪರಿಶಿಷ್ಟ ಜಾತಿ, ಬುಡಕಟ್ಟು ವರ್ಗ ಸಮುದಾಯಗಳ ದೂರುಗಳು ಕಾಸರಗೋಡಿನಲ್ಲಿ ಕಡಿಮೆ. ಈ ಹಿನ್ನೆಲೆಯಲ್ಲಿ ಪ. ಜಾತಿ, ವರ್ಗ ಆಯೋಗ ಹಸ್ತಕ್ಷೇಪ ನಡೆಸಿರುವ ದೂರುಗಳನ್ನು ಪರಿಗಣಿಸುವಾಗ ಆಯಾಯ ಇಲಾಖೆಗಳು ನ್ಯಾಯಸಮ್ಮತವಾದ ಸ್ಪಷ್ಟ ಪರಿಹಾರದ ನ್ಯಾಯ ಒದಗಿಸಬೇಕೆಂದು ಕೇರಳ ಪ. ಜಾತಿ/ಪ.ವರ್ಗ ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್ ಹೇಳಿದರು.
ಕಾಸರಗೋಡು ನಗರಸಭಾ ಕಾನ್ಫೆರೆನ್ಸ್ ಹಾಲ್ ನಲ್ಲಿ ನಡೆದ ದ್ವಿದಿನ ದೂರು ಪರಿಹಾರ ಅದಾಲತ್ ನಲ್ಲಿ ಅವರು ಹೀಗೆಂದರು.
ಕಾಸರಗೋಡಿನಲ್ಲಿ ಪರಿಶಿಷ್ಟ ಜಾತಿ, ವರ್ಗದವರು ಆಯೋಗಕ್ಕೆ ದೂರು ಸಲ್ಲಿಸುವ ಪ್ರಮಾಣ ಕಡಿಮೆ. ಹಾಗೆಂದು ಪೋಲೀಸ್, ಕಂದಾಯ ಇಲಾಖೆಗೆ ಸಲ್ಲಿಸಲಾಗುವ ದೂರುಗಳು ಅಧಿಕವಾಗಿದೆ ಎಂದವರು ಹೇಳಿದರು.
ಕಾಸರಗೋಡಿನಲ್ಲಿ ಪ. ಜಾತಿ, ವರ್ಗದ ಅದಾಲತ್ ನಡೆಯದೇ ಎರಡು ವರ್ಷಗಳಾಯಿತು 2022ರಲ್ಲಿ ಅದಾಲತ್ ನಡೆದ ಬಳಿಕ ನಡೆಯುವ ಅದಾಲತ್ ಇದಾಗಿದೆ. ಎರಡು ದಿನದ ಅದಾಲತ್ ನಲ್ಲಿ ಒಟ್ಟು 124 ದೂರುಗಳು ಪರಿಗಣಿತವಾಗಿದ್ದು, ದೂರುದಾರರನ್ನು ಮತ್ತು ಪ್ರತಿವಾದಿಗಳನ್ನು ಒಟ್ಟಿಗೆ ಕೂರಿಸಿ ಇತ್ಯರ್ಥ ಪ್ರಕ್ರಿಯೆ ನಡೆಯಿತು. ಅಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್ ಅವರಲ್ಲದೇ ಸದಸ್ಯರಾದ ಸೇತು ನಾರಾಯಣನ್, ಟಿ. ಕೆ. ವಾಸು ಒಳಗೊಂಡ ನಿಯೋಗ ದೂರುಗಳನ್ನು ಆಲಿಸಿ, ಪರಿಹಾರ ಪ್ರಕ್ರಿಯೆಗಳಿಗೆ ಮಾರ್ಗದರ್ಶನವಿತ್ತರು.
ದ್ವಿದಿನ ಅದಾಲತ್ ಮಂಗಳವಾರ ಸಮಾಪ್ತಿಯಾಯಿತು.