ಕಣಿಪುರ ಸುದ್ದಿಜಾಲ (ಅ 23)
ಕುಂಬಳೆ : ಕೇಂದ್ರ ಸರಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗ ಒದಗಿಸುವ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ಪಡೆದು ತಲೆಮರೆಸಿಕೊಂಡಿರುವ ಪುತ್ತಿಗೆ ಬಾಡೂರು ಶಾಲಾಧ್ಯಾಪಕಿ, ಡಿವೈಎಫ್ಐ ಮಾಜಿ ನಾಯಕಿ ಸಚಿತಾ ರೈ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಬದಿಯಡ್ಕ ಪಳ್ಳತ್ತಡ್ಕ ಬಳಿಯ ಬಳ್ಳಂಬೆಟ್ಟು ನಿವಾಸಿ ಶ್ವೇತಕುಮಾರಿ ನೀಡಿದ ದೂರಿನಂತೆ ಮತ್ತೊಂದು ವಂಚನಾ ಕೇಸನ್ನು ಬದಿಯಡ್ಕ ಠಾಣೆಯಲ್ಲಿ ದಾಖಲಿಸಲಾಗಿದೆ. ಇದರೊಂದಿಗೆ ಸಚಿತಾಳ ವಂಚನೆಯ ವಿರುದ್ಧ 8 ಪ್ರಕರಣ ದಾಖಲಾಗಿದೆ.
ತನಗೆ ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ಕೊಡಿಸುವ ಖಚಿತ ಭರವಸೆಯಿತ್ತು ಎರಡೂವರೆ ಲಕ್ಷ ರೂ ಪಡೆದು ಮೋಸಗೊಳಿಸಿರುವುದಾಗಿ ಶ್ವೇತಕುಮಾರಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಬದಿಯಡ್ಕ ಠಾಣೆಯಲ್ಲಿ ಮಾತ್ರ ಈಕೆಯ ವಿರುದ್ಧ 4ಕೇಸು ದಾಖಲಾಗಿದೆ.
ಈತನ್ಮಧ್ಯೆ ಸಚಿತಾ ರೈ ಯ ನಿರೀಕ್ಷಣಾ ಜಾಮೀನು ಅರ್ಜಿ ಜಿಲ್ಲಾ ನ್ಯಾಯಾಲಯದಿಂದ ತಿರಸ್ಕೃತವಾದ ಬೆನ್ನಲ್ಲೇ ಆಕೆ ನಾಪತ್ತೆಯಾಗಿದ್ದಾಳೆಂದು ಪೋಲೀಸರು ತಿಳಿಸಿದ್ದಾರೆ. ಇದೀಗ ಬಂಧನಕ್ಕಾಗಿ ಒತ್ತಡ ಉಂಟಾಗುತ್ತಿದ್ದಂತೆಯೇ ತನಿಖೆಗೆ ಪ್ರತ್ಯೇಕ ದಳ ರಚಿಸಲಾಗಿದೆ. ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ, ಕುಂಬ್ಳೆ, ಬದಿಯಡ್ಕ ಠಾಣಾಧಿಕಾರಿಗಳನ್ನು ಜೋಡಿಸಿ ತನಿಖಾ ದಳ ರಚಿಸಲಾಗಿದ್ದು, ಆಕೆಯ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆಯೆಂದು ಪೋಲೀಸರು ತಿಳಿಸಿದ್ದಾರೆ.
ಕೇರಳದ ಎರ್ನಾಕುಳಂ ತೆರಳಿ ತಲೆಮರೆಸಿಕೊಂಡಿದ್ದ ಈಕೆ ಇದೀಗ ಉಡುಪಿಯಲ್ಲಿರುವುದಾಗಿ ಸುಳಿವು ಲಭಿಸಿದೆ ಎನ್ನಲಾಗಿದೆ. ಇದೇ ವೇಳೆ ಸುಚಿತಾ ರೈ ಸಿಪಿಎಂ ಸಂರಕ್ಷಣೆಯ ಅಡಗುತಾಣದಲ್ಲಿದ್ದಾಳೆಂದೂ ಈಕೆಯನ್ನು ಕೂಡಲೇ ಬಂಧಿಸಿ, ಜಾಲ ಬಯಲಿಗೆಳೆಯದಿದ್ದರೆ ವಂಚನೆಗೊಳಗಾದವರ ಕುಟುಂಬವನ್ನು ಸೇರಿಸಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕಛೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶತಂತ್ರಿ ಕುಂಟಾರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.