ಉಡುಪಿ: ವಿಶ್ವಕರ್ಮ ಸಮಾಜದ ಕುಲಗುರು ಪೀಠವಾದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ನವೀಕರಿಸಿದ ಸುಸಜ್ಜಿತ ಶ್ರೀಸರಸ್ವತಿ ಯಾಗಶಾಲೆಯ ಸಮರ್ಪಣೆ ಮತ್ತು ಶತಚಂಡಿಕಾ ಯಾಗ ಅ. 24ರಂದು ನಡೆಯಲಿದೆ.
ಕುಂದಾಪುರ ವಡೇರಹೋಬಳಿಯ ಪ್ರಸಿದ್ಧ ಸ್ವರ್ಣೋದ್ಯಮಿ ವಿ. ಶ್ರೀಧರ ಆಚಾರ್ಯ ದಂಪತಿಗಳವರು 2017ರಲ್ಲಿ ಗುರುಪೀಠಕ್ಕೆ ಸಮರ್ಪಿಸಿದ ಶ್ರೀಸರಸ್ವತಿ ಯಾಗಶಾಲೆಯನ್ನು ಇದೀಗ ಇನ್ನಷ್ಟು ವಿಸ್ತೃತ ಮತ್ತು ನವೀಕೃತಗೊಳಿಸಿ ಪುನರ್ ಸಮರ್ಪಿಸಲಾಗುತ್ತಿದೆ.
ಏಕಕಾಲಕ್ಕೆ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಕುಳಿತು ಹೋಮ/ಯಾಗ, ಯಜ್ಞಾದಿಗಳನ್ನು ವೀಕ್ಷಿಸಬಹುದಾದ ವ್ಯವಸ್ಥೆ, ಪ್ರತ್ಯೇಕ ನೈವೇದ್ಯ ತಯಾರಿ ಕೊಠಡಿ, ಸಂಗ್ರಹಾಗಾರ, ಅರ್ಚಕರ ಕೊಠಡಿ ಒಳಗೊಂಡ ಸುಸಜ್ಜಿತ ಯಾಗಶಾಲೆಯನ್ನು ಶ್ರೀ ಅನಂತವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಲೋಕಾರ್ಪಣೆ ಮಾಡುವರು.
ಇವರ ನೇತೃತ್ವದಲ್ಲಿ ಕರ್ನಾಟಕ ಸರಕಾರದ ಅನುದಾನದೊಂದಿಗೆ 1.85ಕೋಟಿ ರೂ ವೆಚ್ಚದಲ್ಲಿ ಶ್ರೀಸರಸ್ವತಿ ವಿದ್ಯಾರ್ಥಿಭವನವು ಈಗಾಗಲೇ ಗುರುಪೀಠದಲ್ಲಿ ನಿರ್ಮಾಣಗೊಂಡಿದೆ. ಆನೆಗುಂದಿ ಮಹಾಸಂಸ್ಥಾನ ದಲ್ಲಿ ನಾಳೆ ನಡೆಯುವ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಧರ್ಮದರ್ಶಿ ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದರು.