ಕಣಿಪುರ ಸುದ್ದಿಜಾಲ ( ಅ. 22)
ಬೆಂಗಳೂರು: ಬೆಂಗಳೂರಿನಲ್ಲಿ ಕಂಬಳ ಆಯೋಜಿಸುವುದನ್ನು ವಿರೋಧಿಸಿ ಪ್ರಾಣಿ ದಯಾ ಸಂಘ (ಪೇಟಾ) ಹೈಕೋರ್ಟ್ ಮೆಟ್ಟಲೇರಿದೆ. ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಪುತ್ತೂರು ಶಾಸಕ ಅಶೋಕ್ ರೈ ಹಾಗೂ ಸರಕಾರಕ್ಕೆ ಮೆಮೋ ಕಳುಹಿಸಲಾಗಿದೆ.
2023ರಲ್ಲಿ ಬೆಂಗಳೂರಿನಲ್ಲಿ ತುಳುನಾಡ ಕಂಬಳವು ಅದ್ದೂರಿ ಹಬ್ಬದ ವಾತಾವರಣದೊಂದಿಗೆ ನಡೆದಿತ್ತು. ಅದೇ ರೀತಿಯಲ್ಲಿ ಈ ಬಾರಿಯೂ ಕಂಬಳ ಏರ್ಪಡಿಸುವ ಸಮಾಲೋಚನೆಗಳಾಗುತ್ತಿದ್ದಂತೆಯೇ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ಧ್ಯಾನ್ ಚಿನ್ನಪ್ಪ ಅವರು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರ ಪೀಠಕ್ಕೆ ಸೋಮವಾರ ಐಪಿಎಲ್ ಹಾಕಿದ್ದು, ಯಾವುದೇ ಕಾರಣಕ್ಕೂ ಬೆಂಗಳೂರು ಕಂಬಳಕ್ಕೆ ಅವಕಾಶ ನೀಡಕೂಡದೆಂದು ವಿನಂತಿಸಿದ್ದಾರೆ.
ದ. ಕ. ಜಿಲ್ಲೆಯಿಂದ ಕೋಣಗಳನ್ನು ವಾಹನದಲ್ಲಿ ಬೆಂಗಳೂರಿಗೆ ತರುವಾಗ ಆಗುವ ಪ್ರಾಣಿಹಿಂಸೆಯನ್ನುಲ್ಲೇಖಿಸಿ
ಐಪಿಎಲ್ ಸಲ್ಲಿಸಲಾಗಿದೆ.
ಪ್ರಕರಣದ ಕುರಿತು ಸ್ಪಂದಿಸಿರುವ ಶಾಸಕ ಅಶೋಕ ರೈ ಕಂಬಳ ಕೇವಲ ದ. ಕ, ಉಡುಪಿ ಜಿಲ್ಲೆಯ ಕೃಷಿ ಸಂಸ್ಕೃತಿಯ ಕ್ರೀಡೆಯಲ್ಲ. ನಾವಿದನ್ನು ಕಾನೂನು ಮೂಲಕ ಸರಕಾರದ ಕಡೆಯಿಂದಲೇ ಎದುರಿಸುತ್ತೇವೆ ಮತ್ತು ಈ ಬಾರಿಯೂ ಬೆಂಗಳೂರು ಕಂಬಳ ನಡೆಸುತ್ತೇವೆ ಎಂದಿದ್ದಾರೆ. ಹೈಕೋರ್ಟ್ ಮೆಮೋ ಗೆ ಸರಕಾರದ ಎಡ್ವಕೇಟ್ ಜನರಲ್ ಉತ್ತರಿಸುವರೆಂದ ಅವರು ಕಂಬಳದ ಪರವಾಗಿ ಹಿಂದೆ ನಡೆದ ಹೋರಾಟದಲ್ಲೂ ನಾವು ಗೆದ್ದಿದ್ದೇವೆ. ಅದೇ ರೀತಿ ಈ ದೂರಿನಲ್ಲೂ ನಾವು ಜಯಪಡೆಯುತ್ತೇವೆ ಎಂದರು. ಕಂಬಳ ಒಂದೆಡೆಗೆ ಸೀಮಿತವೆಂದಿಲ್ಲ. ಎಲ್ಲೂ ನಡೆಸಬಹುದು. ಈಗ ಕಂಬಳದ ವಿರುದ್ಧ ತಗಾದೆ ಎತ್ತಿ ಹೈಕೋರ್ಟಿನ ಮೊರೆ ಹೋಗಿರುವುದರಿಂದಾಗಿ ಬೆಂಗಳೂರು ಕಂಬಳಕ್ಕೇನೂ ಅಡ್ಡಿಯಾಗದೆಂಬ ಭರವಸೆ ಇದೆ ಎಂದು ಅಶೋಕ ರೈ ಹೇಳಿದರು.