ಕಣಿಪುರ ಸುದ್ದಿಜಾಲ
ಕಾಸರಗೋಡು : ಹಣಕಾಸು ಸಂಸ್ಥೆ ನಡೆಸಿ ನೂರಾರು ಮಂದಿಗೆ ವಂಚಿಸಿ ಬಳಿಕ ತಲೆಮರೆಸಿ, ಧರ್ಮದ ಮರೆಯಲ್ಲಿ ಅರ್ಚಕ ವೇಷಧರಿಸಿ ಅವಿತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಜಿಲ್ಲೆಯ ನೀಲೇಶ್ವರ ಮತ್ತು ಕಾಞಂಗಾಡು ಭಾಗದಲ್ಲಿ ನೂರಾರು ಮಂದಿಗೆ ವಂಚಿಸಿ ಪರಾರಿಯಾಗಿದ್ದ ಕುಂಞಿ ಚಂದು ನಾಯರ್ (60)ಎಂಬಾತನೇ ಬಂಧಿತ ವ್ಯಕ್ತಿ. ಅಂಬಲತ್ತರ ಪೋಲೀಸರು ಆರೋಪಿಯನ್ನು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವರು.
ನೀಲೇಶ್ವರದಲ್ಲಿ ಫೈನಾನ್ಸ್ ಸಂಸ್ಥೆ ತೆರೆದು 18ಶೇ. ಬಡ್ಡಿ ನೀಡುವ ಆಮಿಷ ಒಡ್ಡಿ ಅನೇಕರಿಂದ ಠೇವಣಿ ಪಡೆದು ಬಳಿಕ ಸಂಸ್ಥೆಯನ್ನು ಮುಚ್ಚಿ ಪರಾರಿಯಾಗಿ ಮೋಸಗೈದ ಪ್ರಕರಣದಲ್ಲಿ ಎರಡನೇ ಆರೋಪಿಯಾದ ಚಂದು ನಾಯರ್ ತಲೆಮರೆಸಿಕೊಂಡಿದ್ದನು.
ಪ್ರಕರಣದಲ್ಲಿ ಮಹಿಳೆಯೋರ್ವಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಕೋಟಯಂ ಮೂಲದ ವೃಂದಾ ರಾಜೇಶ್ ಎಂಬಾತ ಸೆರೆಸಿಗಲಿದ್ದಾನೆ.
ಕೋಟ್ಯಾಂತರ ರೂ ವಂಚಿಸಿ ಪರಾರಿಯಾದ ಚಂದು ನಾಯರ್ ಪತ್ತೆ ಮತ್ತು ಬಂಧನಕ್ಕಾಗಿ ಹೊಸದುರ್ಗ ಪೋಲೀಸರು ವಾರಂಟ್ ಹೊರಡಿಸಿದ್ದರು.
ಈತನ ಪತ್ತೆಗಾಗಿ ಪೋಲೀಸರು ಹುಡುಕಾಡುತ್ತಿರುವಂತೆಯೇ ಈತ ಉತ್ತರಪ್ರದೇಶದಲ್ಲಿ ಅರ್ಚಕನ ವೇಷತೊಟ್ಟು ತಲೆಮರೆಸಿಕೊಂಡಿರುವುದಾಗಿ ಸುಳಿವು ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೋಲೀಸರು ಯುಪಿಎ ಗೆ ತೆರಳುವ ಸಿದ್ಧತೆಯಲ್ಲಿದ್ದಾಗ ಆರೋಪಿ ಕಾಞಂಗಾಡಿನ ಅಂಬಲತ್ತರದಲ್ಲಿರುವ ಮನೆಗೆ ಬಂದಿರುವ ಮಾಹಿತಿ ದೊರೆಯಿತು. ಇದರಂತೆ ಮನೆಗೆ ಧಾಳಿ ನಡೆಸಿ ಬಂಧಿಸಲಾಗಿದೆ. ಈತನ ಮೇಲೆ 100ಕ್ಕೂ ಅಧಿಕ ಮಂದಿಯ ವಂಚನಾ ಆರೋಪದ ಕೇಸುಗಳಿವೆ.